ಕಾಪು: ಇಲ್ಲಿನ ಅದಾನಿ ಪವರ್ ಲಿಮಿಟೆಡ್ ಸಂಸ್ಥೆ ತನ್ನ ಸಿಎಸ್‌ಆರ್ ಅಂಗವಾದ ಅದಾನಿ ಫೌಂಡೇಶನ್ ಮುಖಾಂತರ ಎಲ್ಲೂರು ಗ್ರಾಮದಲ್ಲಿ 17 ಲಕ್ಷ ರು.ವೆಚ್ಚದಲ್ಲಿ ನಿರ್ಮಿಸಿದ ಮೂಲಭೂತ ಸೌಕರ್ಯದ ಕಾಮಗಾರಿಗಳ ಉದ್ಘಾಟನೆ ಮತ್ತು 20 ಲಕ್ಷ ರು.ಗಳ ಕಾಮಗಾರಿಗಳಿಗೆ ಭೂಮಿ ಪೂಜೆ ನಡೆಸಲಾಯಿತು. ಇಲ್ಲಿನ ಈ ಯೋಜನೆಯಡಿ ಕಾಂಕ್ರೀಟೀಕರಿಸಲಾದ ಪಿಲಿಚಂಡಿ ರಸ್ತೆ, ಮಾಣಿಯೂರು ಮಠ ರಸ್ತೆ, ಕೃಷ್ಣ ನರ್ಸರಿ ರಸ್ತೆ, ಉಳ್ಳೂರು ರಸ್ತೆಗಳನ್ನು ಅದಾನಿ ಸಮೂಹದ ಅಧ್ಯಕ್ಷ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಮತ್ತು ಎಲ್ಲೂರು ಗ್ರಾ.ಪಂ. ಅಧ್ಯಕ್ಷ ರವಿರಾಜ್ ರಾವ್ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಕಿಶೋರ್ ಆಳ್ವ, ಅದಾನಿ ಸಂಸ್ಥೆಯು ಸಿಎಸ್‌ಆರ್ ಯೋಜನೆಯಡಿ ಕಳೆದ 10 ವರ್ಷಗಳಿಂದ 7 ಗ್ರಾ.ಪಂ. ವ್ಯಾಪ್ತಿಯಲ್ಲಿ ಸುಮಾರು 15 ಕೋಟಿ ರು.ಗೂ ಅಧಿಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಡೆಸಲಾಗಿದೆ. ಎಲ್ಲೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಸುಮಾರು 3.20 ಕೋಟಿ ರು.ಗಳ ಅಭಿವೃದ್ಧಿ ಕಾರ್ಯಗಳನ್ನು ಪೂರ್ಣಗೊಳಿಸಿದೆ ಎಂದು ತಿಳಿಸಿದರು.