ಕಂಪನಿಯಿಂದಾದ 33 ಕೋಟಿ ರು. ನಷ್ಟದ ಮಾಹಿತಿ ಸರ್ಕಾರಕ್ಕೆ ರವಾನೆ । ಕರಾರಿನಂತೆ ನಷ್ಟದ ಬಾಬ್ತು ಸರಿದೂಗಿಸುವುದಕ್ಕೆ ಬದ್ಧ
ಕಳೆದ ಸಾಲಿನಲ್ಲಿ ಮೈಷುಗರ್ ಕಾರ್ಖಾನೆಯಲ್ಲಿ ಕಬ್ಬು ನುರಿಸಿರುವ ಆರ್.ಬಿ.ಟೆಕ್ ಕಂಪನಿಯವರಿಗೆ 18 ಕೋಟಿ ರು.ಗಳನ್ನು ಮಾತ್ರ ಪಾವತಿಸಿರುವುದಾಗಿ ಕಾರ್ಖಾನೆ ಅಧ್ಯಕ್ಷ ಸಿ.ಡಿ.ಗಂಗಾಧರ್ ಸ್ಪಷ್ಟಪಡಿಸಿದರು.
ಕರಾರು ಒಪ್ಪಂದದಂತೆ ಪ್ರತಿ ಟನ್‌ಗೆ 900 ರು.ನಂತೆ 2.50 ಲಕ್ಷ ಮೆಟ್ರಿಕ್ ಟನ್‌ಗೆ 22.50 ಕೋಟಿ ರು. ಪಾವತಿಸಬೇಕಿತ್ತು. ಕಂಪನಿ 2 ಲಕ್ಷ ಟನ್ ಕಬ್ಬು ಅರೆದಿರುವುದರಿಂದ 18 ಕೋಟಿ ರು. ಪಾವತಿಸಿ 4.50 ಕೋಟಿ ರು. ಪಾವತಿ ಮಾಡಿಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.ಕಳೆದ ಹಂಗಾಮಿನಲ್ಲಿ ಆರ್.ಬಿ.ಟೆಕ್ ಕಂಪನಿಯಿಂದ ಮೈಷುಗರ್‌ಗೆ ಆದ 33 ಕೋಟಿ ರು. ನಷ್ಟದ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಬೇಕಿರುವುದು ನನ್ನ ಜವಾಬ್ದಾರಿ. ಕಂಪನಿಯು ಹಣ ಬಿಡುಗಡೆ ಮಾಡಿರುವ ವಿಚಾರದಲ್ಲಿ ಅಧಿಕಾರಿಗಳು ಲೋಪವೆಸಗಿರುವ ಬಗ್ಗೆಯೂ ಸರ್ಕಾರದ ಗಮನ ಸೆಳೆದಿದ್ದೇನೆ ಎಂದು ಹೇಳಿದರು.
ಆರ್.ಬಿ.ಟೆಕ್ ಕಂಪನಿಯನ್ನು ಮುಂದುವರಿಸುವುದಕ್ಕೆ ಕಂಪನಿಯ ತಕರಾರು ಇದ್ದರೂ ಕಾನೂನು ವಿಭಾಗದವರು ಒಮ್ಮೆ ಈ ಹಂತದಲ್ಲಿ ಕಂಪನಿಯನ್ನು ತೆರವುಗೊಳಿಸಿದರೆ ಕಾನೂನಿನ ಮೊರೆ ಹೋಗಿ ಕಂಪನಿಯ 2025- 26ನೇ ಹಂಗಾಮಿಗೆ ತೊಂದರೆಯಾಗಬಹುದು ಎಂದಿದ್ದರಿಂದ ಆರ್.ಬಿ.ಟೆಕ್ ಕಂಪನಿಯಿಂದಲೇ ಜೂನ್ ಅಂತ್ಯಕ್ಕೆ ಆರಂಭ ಮಾಡುವುದಾಗಿ ಭರವಸೆ ನೀಡಿದರು.
ಪ್ರಸಕ್ತ ಹಂಗಾಮಿನಲ್ಲಿ ಕಾರ್ಖಾನೆಯನ್ನು ಸಮರ್ಥವಾಗಿ ಮುನ್ನಡೆಸುವುದರೊಂದಿಗೆ ಶೇ.8ರಷ್ಟು ಇಳುವರಿ ಬರುವಂತೆ ಕಾರ್ಯಾಚರಣೆ ನಡೆಸಲಾಗುವುದು. ಕಾರ್ಖಾನೆಗೆ ನಷ್ಟವಾಗದಂತೆ ಕ್ರಮ ಜರುಗಿಸಲು ಪೂರ್ವಭಾವಿಯಾಗಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಭರವಸೆ ನೀಡಿದರು.