ತುಮುಲ್ ನಿಂದ ಹೈನುಗಾರರಿಗೆ ಪ್ರತಿ ಲೀಟರ್ ಹಾಲಿಗೆ 2 ರು.ಹೆಚ್ಚಳ: ಒಕ್ಕೂಟ ನಿರ್ದೇಶಕ ಎಸ್.ಆರ್.ಗೌಡ

KannadaprabhaNewsNetwork |  
Published : Feb 09, 2025, 01:17 AM IST
8ಶಿರಾ1: ಶಿರಾ ತಾಲೂಕಿನ ಶೀಬಿ ಅಗ್ರಹಾರ ಗ್ರಾಮ ಪಂಚಾಯ್ತಿಯ ಅಗ್ರಹಾರದಮ್ಮ ದೇವಸ್ಥಾನ ಬಳಿಬರಡು ರಾಸುಗಳ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಾಗು ಮಿಶ್ರ ತಳಿ ಹೆಣ್ಣು ಕರುಗಳ ಪ್ರದರ್ಶನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಶಾಸಕ ಟಿ.ಬಿ.ಜಯಚಂದ್ರ, ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್.ಆರ್.ಗೌಡ ಸೇರಿದಂತೆ ಹಲವರು ಹಾಜರಿದ್ದರು. | Kannada Prabha

ಸಾರಾಂಶ

ಶಿರಾ ತಾಲೂಕಿನಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಸಂಪೂರ್ಣವಾಗಿ ಅಭಿವೃದ್ಧಿ ಮಾಡುತ್ತೇನೆ. ಶಿರಾ ತಾಲೂಕಿನ ರೈತರ ಮಕ್ಕಳು ಉದ್ಯೋಗಕ್ಕಾಗಿ ಬೆಂಗಳೂರು, ತುಮಕೂರು ನಗರಗಳಿಗೆ ವಲಸೆ ಹೋಗುತ್ತಿದ್ದು, ಅವರು ತಾಂತ್ರಿಕವಾಗಿ, ವೈಜ್ಞಾನಿಕವಾಗಿ ಹೈನುಗಾರಿಕಾ ಕ್ಷೇತ್ರವನ್ನು ಅಳವಡಿಸಿಕೊಂಡರೆ ಸ್ಥಳೀಯವಾಗಿಯೇ ಉದ್ಯೋಗ ಸಿಗುತ್ತದೆ.

ಕನ್ನಡಪ್ರಭ ವಾರ್ತೆ ಶಿರಾ

ತುಮಕೂರು ಹಾಲು ಒಕ್ಕೂಟವು ಹೈನುಗಾರರ ಹಿತ ಕಾಪಾಡುವ ಉದ್ದೇಶದಿಂದ, ರೈತರಿಗೆ ಆರ್ಥಿಕವಾಗಿ ಶಕ್ತಿ ತುಂಬಲು ಪ್ರತಿ ಲೀಟರ್ ಹಾಲಿಗೆ 2 ರುಪಾಯಿ ದರವನ್ನು ಹೆಚ್ಚಿಸಿದ್ದು ಫೆ. 11 ರಿಂದ ಎಲ್ಲಾ ಹೈನುಗಾರರಿಗೆ ಪ್ರತಿ ಲೀಟರ್ ಗೆ 2 ರುಪಾಯಿ ದರ ಹೆಚ್ಚಿಗೆ ಸಿಗಲಿದ್ದು, ಇದರಿಂದ ರೈತರಿಗೆ ಅನುಕೂಲವಾಗಲಿದೆ ಎಂದು ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್. ಆರ್. ಗೌಡ ಹೇಳಿದರು.

ಶನಿವಾರ ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ವತಿಯಿಂದ ತಾಲೂಕಿನ ಶೀಬಿ ಅಗ್ರಹಾರ ಗ್ರಾಮ ಪಂಚಾಯ್ತಿಯ ಅಗ್ರಹಾರದಮ್ಮ ದೇವಸ್ಥಾನ ಬಳಿ ಏರ್ಪಡಿಸಿದ್ದ ಬರಡು ರಾಸುಗಳ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಾಗೂ ಮಿಶ್ರ ತಳಿ ಹೆಣ್ಣು ಕರುಗಳ ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಹೈನುಗಾರಿಕೆಯನ್ನು ಪ್ರೋತ್ಸಾಹಿಸಿ ಬಡ ರೈತ ಕುಟುಂಬಗಳ ಆರ್ಥಿಕ ಪ್ರಗತಿಗೆ ಆದ್ಯತೆ ನೀಡುವುದೇ ನನ್ನ ಗುರಿಯಾಗಿದ್ದು, ಕಳೆದ 10 ವರ್ಷಗಳಿಂದ ತುಮಕೂರು ಹಾಲು ಒಕ್ಕೂಟದ ನಿರ್ದೇಶಕನಾಗಿ ಹಾಲು ಉತ್ಪಾದಕರ ಧ್ವನಿಯಾಗಿ ಕೆಲಸ ಮಾಡಿದ್ದೇನೆ. ಮುಂದೆಯೂ ಇದೇ ರೀತಿ ಕೆಲಸ ಮಾಡುತ್ತೇನೆ. ರೈತರು ಹಾಲು ಉತ್ಪಾದನೆಯಲ್ಲಿ ಗುಣಮಟ್ಟ ಕಾಯ್ದುಕೊಂಡು ಹೆಚ್ಚು ಲಾಭ ಪಡೆಯಿರಿ ಎಂದು ಸಲಹೆ ನೀಡಿದರು.

ಶಿರಾ ತಾಲೂಕಿನಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಸಂಪೂರ್ಣವಾಗಿ ಅಭಿವೃದ್ಧಿ ಮಾಡುತ್ತೇನೆ. ಶಿರಾ ತಾಲೂಕಿನ ರೈತರ ಮಕ್ಕಳು ಉದ್ಯೋಗಕ್ಕಾಗಿ ಬೆಂಗಳೂರು, ತುಮಕೂರು ನಗರಗಳಿಗೆ ವಲಸೆ ಹೋಗುತ್ತಿದ್ದು, ಅವರು ತಾಂತ್ರಿಕವಾಗಿ, ವೈಜ್ಞಾನಿಕವಾಗಿ ಹೈನುಗಾರಿಕಾ ಕ್ಷೇತ್ರವನ್ನು ಅಳವಡಿಸಿಕೊಂಡರೆ ಸ್ಥಳೀಯವಾಗಿಯೇ ಉದ್ಯೋಗ ಸಿಗುತ್ತದೆ. ಮುಂದಿನ ಐದು ವರ್ಷಗಳ ಅವಧಿಯಲ್ಲಿ ತಾಲೂಕಿನಲ್ಲಿ ಹೈನುಗಾರಿಕೆಯನ್ನು ಮತ್ತಷ್ಟು ಪ್ರೋತ್ಸಾಹಿಸಿ ಕ್ಷೀರ ಕ್ರಾಂತಿಯನ್ನು ಮಾಡಬೇಕೆಂಬ ನನ್ನ ಸಂಕಲ್ಪಕ್ಕೆ ಎಲ್ಲರೂ ಶಕ್ತಿ ತುಂಬಬೇಕು. ಹಾಲು ಉತ್ಪಾದಕರ ಅಭಿವೃದ್ಧಿಯೇ ನನ್ನ ಧ್ಯೇಯ ಮತ್ತು ಗುರಿ ಎಂದರು.

ಶಾಸಕ ಟಿ.ಬಿ.ಜಯಚಂದ್ರ ಮಾತನಾಡಿ, ಇತ್ತೀಚೆಗೆ ಅಕಾಲಿಕ ಮಳೆಯಿಂದ ಕೃಷಿಯಲ್ಲಿ ರೈತರಿಗೆ ಆದಾಯ ಸಿಗುತ್ತಿಲ್ಲ, ಆದ್ದರಿಂದ ರೈತರು ಉಪ ಕಸುಬಾದ ಹೈನುಗಾರಿಕೆಯನ್ನು ಅಳವಡಿಸಿಕೊಂಡರೆ ಆರ್ಥಿಕವಾಗಿ ಸಬಲರಾಗಬಹುದು. ಈ ಹಿಂದೆ ನಾನು ಪಶುಪಾಲನಾ ಸಚಿವನಾಗಿದ್ದಾಗ ಪಶುಭಾಗ್ಯ, ಕೃಷಿ ಭಾಗ್ಯ ಯೋಜನೆ ಜಾರಿಗೆ ತಂದಿದ್ದೆ. ಇದರಿಂದ ಸಾವಿರಾರು ರೈತರಿಗೆ ಅನುಕೂಲವಾಗಿದೆ ಎಂದ ಅವರು, ಶಿರಾ ತಾಲೂಕಿನ ಚೀಲನಹಳ್ಳಿಯಲ್ಲಿ ಆಧುನಿಕ ವಧಾಗಾರ ಸ್ಥಾಪಿಸಲಾಗಿದ್ದು, ಉದ್ಘಾಟನೆಗೆ ಸಜ್ಜಾಗಿದೆ. ಇದರಿಂದ ತಾಲೂಕಿನ ಕುರಿ, ಮೇಕೆ ಸಾಕಾಣಿಕೆದಾರರಿಗೆ ಅನುಕೂಲವಾಗಲಿದೆ. ತಮ್ಮ ಜಾನುವಾರುಗಳಿಗೆ ಮಾರುಕಟ್ಟೆ ಮೌಲ್ಯ ಸಿಗುತ್ತದೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಹೈನುಗಾರಿಕೆ ಅಳವಡಿಸಿಕೊಳ್ಳಿ ಎಂದರು.

ಕಾರ್ಯಕ್ರಮದಲ್ಲಿ ಶೀಬಿ ಅಗ್ರಹಾರ ಪಂಚಾಯ್ತಿಯ ಗ್ರಾಮ ಪಂಚಾಯತಿ ಅಧ್ಯಕ್ಷ ಕೆಂಪಯ್ಯ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಜಗದೀಶ್ ಗೌಡ, ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರಮೇಶ್ ಸೇರಿದಂತೆ ಹಲವರು ಹಾಜರಿದ್ದರು.

PREV

Recommended Stories

ನೌಕರರ ಮುಂಬಡ್ತಿಗೆ ತರಬೇತಿ ಕಡ್ಡಾಯ
ಬೆಂಗಳೂರಲ್ಲಿ ಭರ್ಜರಿ ಮಳೆಗೆ ವಾಹನ ಸವಾರರ ಪರದಾಟ