- ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಪ್ರಾಪರ್ಟಿ ರಿಟರ್ನ್ ಪರೇಡ್
- - -
ಕನ್ನಡಪ್ರಭ ವಾರ್ತೆ ದಾವಣಗೆರೆದಾವಣಗೆರೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ 2025ನೇ ಸಾಲಿನ ಸ್ವತ್ತು ಕಳವು ಪ್ರಕರಣಗಳಲ್ಲಿ ಪತ್ತೆ ಮಾಡಿದ್ದ ಸುಮಾರು ₹20.38 ಕೋಟಿ ಮೌಲ್ಯದ ಚಿನ್ನ, ಬೆಳ್ಳಿ, ವಾಹನ, ನಗದು, ಮೊಬೈಲ್ ಸೇರಿದಂತೆ ಸ್ವತ್ತುಗಳನ್ನು ಅವುಗಳ ವಾರಸುದಾರರಿಗೆ ಮರಳಿಸುವ ಪ್ರಾಪರ್ಟಿ ರಿಟರ್ನ್ ಪರೇಡ್ ನಗರದಲ್ಲಿ ಶುಕ್ರವಾರ ನಡೆಯಿತು.
ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ 2025ರ ನ.30ರವರೆಗೆ ವರದಿಯಾಗಿದ್ದ 173 ಸ್ವತ್ತು ಕಳವು ಪ್ರಕರಣಗಳಲ್ಲಿ ಪೊಲೀಸ್ ಅಧಿಕಾರಿ, ಸಿಬ್ಬಂದಿ ತಂಡ ಕಾರ್ಯಾಚರಣೆ ನಡೆಸಿ, ಪ್ರಕರಣಗಳನ್ನು ಬೇಧಿಸಿ, ಆರೋಪಿಗಳನ್ನು ಪತ್ತೆ ಮಾಡಿ, ಕದ್ದಿದ್ದ ವಸ್ತುಗಳನ್ನು ಜಪ್ತಿ ಮಾಡಿದ್ದರು. ನ್ಯಾಯಾಲಯ ಆದೇಶದ ಮೇರೆಗೆ ಅವುಗಳ ವಾರಸುದಾರರು, ಮಾಲೀಕರಿಗೆ ಮರಳಿಸಲು ಪ್ರಾಪರ್ಟಿ ರಿಟರ್ನ್ ಪರೇಡ್ ಹಮ್ಮಿಕೊಳ್ಳಲಾಗಿತ್ತು.
ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಕರ್ತವ್ಯನಿಷ್ಠೆಯನ್ನು ಐಜಿಪಿ ಡಾ.ರವಿಕಾಂತೇಗೌಡ, ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ್ ಶ್ಲಾಘಿಸಿ, ಅಭಿನಂದಿಸಿದರು. ಎಎಸ್‌ಪಿ ಪರಮೇಶ್ವರ ಹೆಗಡೆ, ಸಹಾಯಕ ಪೊಲೀಸ್ ಅಧೀಕ್ಷಕ ಸ್ಯಾಮ್ ವರ್ಗೀಸ್, ಗ್ರಾಮಾಂತರ ಡಿವೈಎಸ್ಪಿ ಬಿ.ಎಸ್. ಬಸವರಾಜ, ನಗರ ಡಿವೈಎಸ್ಪಿ ಬಿ.ಶರಣಬಸವೇಶ್ವರ, ಡಿಎಆರ್ ಡಿವೈಎಸ್ಪಿ ಪಿ.ಬಿ. ಪ್ರಕಾಶ ಸೇರಿದಂತೆ ಜಿಲ್ಲೆಯ ಪೊಲೀಸ್ ಅಧಿಕಾರಿ, ಸಿಬ್ಬಂದಿ ಹಾಗೂ ಸ್ವತ್ತುಗಳ ಮಾಲೀಕರು, ವಾರಸುದಾರರು, ಕುಟುಂಬ ವರ್ಗದವರು ಇದ್ದರು.
(ಬಾಕ್ಸ್) * 53 ಪ್ರಕರಣಗಳ ಆರೋಪಿ ನವೀನ್ ಸೆರೆ: ಐಜಿಪಿ ದಾವಣಗೆರೆ: ಜಿಲ್ಲೆಯಲ್ಲಿ ನಡೆದಿದ್ದ ಮುಖ್ಯವಾದ ಕಳವು ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ನಮ್ಮೆಲ್ಲಾ ಅಧಿಕಾರಿ, ಸಿಬ್ಬಂದಿ ಯಶಸ್ವಿಯಾಗಿದ್ದಾರೆ ಎಂದು ಪೂರ್ವ ವಲಯದ ಪೊಲೀಸ್ ಮಹಾ ನಿರೀಕ್ಷಕ ಡಾ.ಬಿ.ಆರ್.ರವಿಕಾಂತೇಗೌಡ ಶ್ಲಾಘಿಸಿದ್ದಾರೆ.ನಗರದ ಪೊಲೀಸ್ ಕವಾಯಿತು ಮೈದಾನದಲ್ಲಿ ಶುಕ್ರವಾರ ಪ್ರಾಪರ್ಟಿ ರಿಟರ್ನ್ ಪರೇಡ್ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಣ್ಣುಮಕ್ಕಳು ಮಾಂಗಲ್ಯದೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿರುತ್ತಾರೆ. ಅಂತಹ ಪ್ರಕರಣಗಳನ್ನು ಪತ್ತೆ ಮಾಡಿ, ಮಾಲೀಕರಿಗೆ ಮಾಂಗಲ್ಯಗಳನ್ನು ಹಿಂದಿರುಗಿಸಲಾಗಿದೆ ಎಂದರು. ನವೀನ್ ಎಂಬ ಆರೋಪಿ 53 ಪ್ರಕರಣಗಳಲ್ಲಿ ಪೊಲೀಸ್ ಇಲಾಖೆಗೆ ಬೇಕಾಗಿದ್ದ. ಒಬ್ಬಂಟಿ ಮಹಿಳೆಯರನ್ನೇ ಗುರಿಯಾಗಿಸಿಕೊಂಡು, ಸರಗಳ್ಳತನ ಮಾಡುತ್ತಿದ್ದ. ಅವನನ್ನು ಸೆರೆಹಿಡಿದು, ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಸಕ್ತ ವರ್ಷದಲ್ಲಿ ನಮ್ಮ ಪೊಲೀಸರು ಉತ್ತಮ ಕೆಲಸ ಮಾಡಿದ್ದು, ಪೊಲೀಸರ ಬಗ್ಗೆ ಜನರಿಗೂ ವಿಶ್ವಾಸ ಹೆಚ್ಚಾಗುವಂತೆ ಇಲಾಖೆ ಅಧಿಕಾರಿ-ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ಮಾತನಾಡಿ, ನ್ಯಾಮತಿ ಬ್ಯಾಂಕ್ ದರೋಡೆ ಪ್ರಕರಣ, ಕಾರಿಗನೂರು ಗ್ರಾಮದ ಮಹಿಳೆ ಮೇಲೆ ಹಲ್ಲೆ, ದರೋಡೆ ಪ್ರಕರಣ ಸೇರಿದಂತೆ ಅನೇಕ ಮಹತ್ವದ ಪ್ರಕರಣಗಳನ್ನು ಇಲಾಖೆ ಪತ್ತೆ ಮಾಡಿದೆ ಎಂದು ವಿವರಿಸಿದರು.
-19ಕೆಡಿವಿಜಿ10, 11, 12: