ಕನ್ನಡಪ್ರಭ ವಾರ್ತೆ ಮಂಗಳೂರು
ಇಬ್ಬರು ಉದ್ಯಮಿಗಳು ನೀಡಿದ ದೂರಿನ ಆಧಾರದಲ್ಲಿ ಗುರುವಾರ ರಾತ್ರಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆತನ ಮನೆಯ ಅಡಗುದಾಣದಲ್ಲಿ ಬಂಧಿಸಿದ್ದಾರೆ. ಈ ವೇಳೆ ಆತನ ಐಷಾರಾಮಿ ಜೀವನಶೈಲಿಯನ್ನು ನೋಡಿ ಪೊಲೀಸರೇ ಆಶ್ಚರ್ಯಚಕಿತರಾಗಿದ್ದರು. ಮನೆಯಲ್ಲೇ ಬಾರ್ ಮಾಡಿಕೊಂಡು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 6,72,947 ರು. ಮೌಲ್ಯದ ದೇಶಿ ಮತ್ತು ವಿದೇಶಿ ಮದ್ಯ, 667 ಗ್ರಾಂ ಚಿನ್ನಭಾರಣ, ಅಂದಾಜು 2.75 ಕೋಟಿ ರು. ಮೌಲ್ಯದ ವಜ್ರದ ಉಂಗುರವನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.
ವಂಚನೆ ಇತಿಹಾಸ:ರೋಶನ್ ಸಲ್ಡಾನಾ ವಿರುದ್ಧ ಚಿತ್ರದುರ್ಗ, ಮುಂಬೈ ಸೇರಿದಂತೆ ವಿವಿಧೆಡೆ ವಂಚನೆ ಪ್ರಕರಣಗಳು ದಾಖಲಾಗಿವೆ. ಹಣದ ಅವಶ್ಯಕತೆ ಇರುವ ಉದ್ಯಮಿಗಳಿಗೆ ಸಾಲ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರು. ನಗದು ಹಣವನ್ನು ಅವರಿಂದ ಪಡೆದುಕೊಳ್ಳುತ್ತಿದ್ದ. ಹಣ ಕೈಸೇರಿದ ಬಳಿಕ ಸಾಲ ನೀಡದೆ ವಂಚಿಸುತ್ತಿದ್ದ ಎಂದು ನಗರ ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ತಿಳಿಸಿದ್ದಾರೆ.
200 ಕೋಟಿ ರು.ಗೂ ಅಧಿಕ ವಂಚನೆ?:
ಮೂಲತಃ ಬಜಾಲ್ ಬೊಲ್ಲಗುಡ್ಡ ನಿವಾಸಿಯಾಗಿರುವ ರೋಶನ್ ಸಲ್ಡಾನಾ ಇಲ್ಲಿಂದ ಮುಂಬೈಗೆ ತೆರಳಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ. 8-10 ವರ್ಷಗಳ ಹಿಂದೆ ಹಣದಾಸೆಗೆ ಬಿದ್ದು ವಂಚನೆಯ ಕೆಲಸಕ್ಕೆ ಕೈಹಾಕಿದ್ದ. ಕ್ರಮೇಣ ವಂಚನೆ ಜಾಲವನ್ನು ವಿಸ್ತರಿಸಿಕೊಂಡು ರಾಜ್ಯ, ಹೊರರಾಜ್ಯ ಉದ್ಯಮಿಗಳ ಸಂಪರ್ಕ ಸಾಧಿಸಿ ಸಾಲ ಕೊಡಿಸುವುದಾಗಿ ನಂಬಿಸುತ್ತಿದ್ದ. ರಾಜ್ಯದ ಕೆಲವೆಡೆ ಈತ ಫೈನಾನ್ಸ್ ಕಚೇರಿಗಳನ್ನು ಹೊಂದಿರುವುದಾಗಿಯೂ ತಿಳಿದುಬಂದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮುಂಬೈ, ಚಿತ್ರದುರ್ಗದಲ್ಲಿ ಈತನ ದಂಧೆಯ ಬಗ್ಗೆ ಪ್ರಕರಣ ದಾಖಲಾಗಿದ್ದರೂ, ಮಂಗಳೂರಿನಲ್ಲಿ ಈತನ ವಂಚನೆ ಬಯಲಾಗಿರಲಿಲ್ಲ. ಇತ್ತೀಚೆಗೆ ಇಬ್ಬರು ಉದ್ಯಮಿಗಳು ಪೊಲೀಸರಿಗೆ ದೂರು ನೀಡಿ ತಮಗಾದ ಅನ್ಯಾಯ ಸರಿಪಡಿಸುವಂತೆ ಪೊಲೀಸರ ಮೊರೆ ಹೋಗಿದ್ದರು. ಇದರ ಜಾಡು ಹಿಡಿದು ಹೊರಟ ಪೊಲೀಸರಿಗೆ ಬಹುಕೋಟಿ ವಂಚನೆಯ ಸರಮಾಲೆಯೇ ಪತ್ತೆಯಾಗಿದೆ.
ಆರೋಪಿ ವಿರುದ್ಧ ಮಂಗಳೂರು ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 22/2025, ಕಲಂ: 316(2), 316(5), 318(2), 318(3) ಅಲ್ಲದೆ, 3(5) ಭಾರತೀಯ ನ್ಯಾಯ ಸಂಹಿತೆ ಹಾಗೂ ಅಪರಾಧ ಕ್ರಮಾಂಕ:30/2025, ಕಲಂ: 316(2), 316(5), 318(2), 318 (3), 61(2) ಜತೆಗೆ 3(5) ಭಾರತೀಯ ನ್ಯಾಯ ಸಂಹಿತೆಯಂತೆ ವಂಚನೆ ಪ್ರಕರಣಗಳನ್ನು ಪೊಲೀಸರು ದಾಖಲಿಸಿದ್ದಾರೆ.
ಈ ರೋಶನ್ ಸಲ್ಡಾನಾ ಮಂಗಳೂರಿನ ಜನತೆಗೆ ಅಷ್ಟಾಗಿ ಪರಿಚಯ ಇಲ್ಲ. ಜಪ್ಪಿನಮೊಗರಿನಲ್ಲಿರುವ ಬೃಹತ್ ಮನೆಯನ್ನೇ ಅಡಗುದಾಣ ಮಾಡಿಕೊಂಡು ಇಲ್ಲಿಂದಲೇ ಬಹುತೇಕ ವ್ಯವಹಾರ ಕುದುರಿಸುತ್ತಿದ್ದ. ಈತನ ಮನೆಯಲ್ಲಿರುವ ಅಡಗುದಾಣ ಪತ್ತೆ ಹಚ್ಚಲು ಪೊಲೀಸರು ಹರಸಾಹಸಪಟ್ಟು, ಬಾಗಿಲುಗಳನ್ನು ಒಡೆದು ಒಳಪ್ರವೇಶಿಸಬೇಕಾಗಿತ್ತು!
ಗುರುವಾರ ರಾತ್ರಿ ಪೊಲೀಸರು ದಾಳಿ ನಡೆಸಿದಾಗ ಈತನ ಮಲೇಷ್ಯಾ ಯುವತಿಯ ಜತೆ ಇದ್ದ ಎಂಬ ಮಾಹಿತಿ ತಿಳಿದುಬಂದಿದೆ.
ಮನೆಯಲ್ಲೇ 7 ಸ್ಟಾರ್ ಮಾದರಿಯ ಬಾರ್ ಮಾಡಿಕೊಂಡಿದ್ದು, ಅಲ್ಲಿ ದೇಶಿ- ವಿದೇಶಿ ಹೈಲೆವೆಲ್ ಬ್ರ್ಯಾಂಡ್‌ಗಳನ್ನು ಮದ್ಯವನ್ನೂ ಇಟ್ಟುಕೊಂಡಿದ್ದ. ಬಂಗಾರದ ಬಣ್ಣದ ಸೋಫಾಗಳು, ಐಷಾರಾಮಿ ವಸ್ತುಗಳನ್ನು ಇಟ್ಟುಕೊಂಡು ವಿಲಾಸಿ ಜೀವನ ನಡೆಸುತ್ತಿದ್ದ ಎನ್ನುವುದು ಪೊಲೀಸರ ಕಾರ್ಯಾಚರಣೆಯಿಂದ ಪತ್ತೆಯಾಗಿದೆ.