ಕನ್ನಡಪ್ರಭ ವಾರ್ತೆ ಮೂಡುಬಿದಿರೆಇನ್ನು ಅರೇಳು ತಿಂಗಳಲ್ಲಿ ಮೂಡುಬಿದಿರೆಯಲ್ಲಿ ಪತ್ರಿಕಾ ಭವನ ಲೋಕಾರ್ಪಣೆಗೊಳ್ಳಲಿದ್ದು, ಮೂಡುಬಿದಿರೆಗೆ ಹೆಮ್ಮೆಯ ವಿಷಯ. ವಿವಿಧ ಹಂತಗಳಲ್ಲಿ ಭವನ ನಿರ್ಮಾಣಕ್ಕೆ ಒಟ್ಟು 25 ಲಕ್ಷ ರು.ಅನುದಾನ ಶೀಘ್ರ ಬಿಡುಗಡೆ ಮಾಡುವುದಾಗಿ ಶಾಸಕ ಉಮಾನಾಥ ಎ. ಕೋಟ್ಯಾನ್ ಘೋಷಿಸಿದ್ದಾರೆ.
ಮೂಡುಬಿದಿರೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಮೂಡುಬಿದಿರೆ ಪ್ರೆಸ್‌ಕ್ಲಬ್ ವತಿಯಿಂದ ಪತ್ರಿಕಾ ದಿನಾಚರಣೆ ಪ್ರಯುಕ್ತ ಮಂಗಳವಾರ ಸಮಾಜಮಂದಿರದಲ್ಲಿ ನಡೆದ ಮಾಧ್ಯಮ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಮೂಡುಬಿದಿರೆ ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ ಮುಖ್ಯ ಅತಿಥಿಯಾಗಿ ಮಾತನಾಡಿ, ತಪ್ಪಿಗೆ ಕ್ಷಮೆ ಇದೆ. ಮೋಸಕ್ಕೆ ಕ್ಷಮೆ ಇಲ್ಲ. ಇದನ್ನು ಅರಿತು ಸಮಾಜ ತಿದ್ದುವ ಕೆಲಸ ಮಾಧ್ಯಮ ಮಾಡಬೇಕಾಗಿದೆ. ಜನರ ಮನಃಸ್ಥಿತಿಯನ್ನು ಒಳ್ಳೆಯ ವಿಚಾರಕ್ಕೆ ಬದಲಾಯಿಸಲು ಪತ್ರಿಕೆಗಳು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದರು.
ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಮಾತನಾಡಿ, ಇಬ್ಬರು ಶಾಸಕರಿಂದ 10 ಲಕ್ಷ ರು., ವೈಯಕ್ತಿಕ ನೆಲೆಯಲ್ಲಿ 1 ಲಕ್ಷ ರು. ಮೊತ್ತ ಪತ್ರಿಕಾ ಭವನ ನಿರ್ಮಾಣಕ್ಕೆ ನೀಡುತ್ತೇನೆ ಎಂದರು.ಸಂಘದ ಅಧ್ಯಕ್ಷ ಬೆಳುವಾಯಿ ಸೀತಾರಾಮ ಆಚಾರ್ಯ ಅಧ್ಯಕ್ಷತೆವಹಿಸಿದರು. ವಿಶ್ರಾಂತ ಪತ್ರಕರ್ತ ಸದಾನಂದ ಹೆಗಡೆಕಟ್ಟೆ ಪ್ರಾಯೋಜಿತ ದತ್ತಿನಿಧಿ ಉಪನ್ಯಾಸದಲ್ಲಿ ದೈಜಿ ವರ್ಲ್ಡ್ ಮಾಧ್ಯಮ ಸ್ಥಾಪಕ ವಾಲ್ಟರ್ ನಂದಳಿಕೆ ‘ಭವಿಷ್ಯದಲ್ಲಿ ಮಾಧ್ಯಮಗಳಿಗಿರುವ ಸವಾಲುಗಳು’ ಕುರಿತು ಉಪನ್ಯಾಸ ನೀಡಿದರು.ಕನ್ನಡ ಸುದ್ದಿವಾಹಿನಿಯ ಸುದ್ದಿ ನಿರೂಪಕ ವಾಸುದೇವ ಭಟ್ ಮಾರ್ನಾಡು ಅವರಿಗೆ ಪ್ರೆಸ್ ಕ್ಲಬ್ ಗೌರವ ನೀಡಿ ಸನ್ಮಾನಿಸಲಾಯಿತು.ಎಸ್‌ಎಸ್‌ಎಲ್‌ಸಿ ಸಾಧಕರಾದ ರುಚಿರಾ ಕುಂದರ್, ಸುಶಾಂತ್ ದರೆಗುಡ್ಡೆ, ಸಿಂಚನಾ ಮೂಡುಮಾರ್ನಾಡು ಅವರನ್ನು ಗೌರವಿಸಲಾಯಿತು. ಸಂಘದ ಕೋಶಾಧಿಕಾರಿ ಪ್ರಸನ್ನ ಹೆಗ್ಡೆ, ಸದಸ್ಯರಾದ ಜೈಸನ್ ತಾಕೊಡೆ, ನವೀನ್ ಸಾಲ್ಯಾನ್, ಅಶ್ರಫ್ ವಾಲ್ಪಾಡಿ, ಯಶೋಧರ ವಿ.ಬಂಗೇರ, ರಾಘವೇಂದ್ರ ಶೆಟ್ಟಿ, ಪುನೀತ್ ಮುಂಡ್ಕೂರು, ಶರತ್ ದೇವಾಡಿಗ, ಪ್ರೆಸ್ ಕ್ಲಬ್ ನಿರ್ವಾಹಕಿ ದೀಪ್ತಿ ಇದ್ದರು.