ಬೆಸ್ಕಾಂ ಸಂಗ್ರಹದಲ್ಲಿದ್ದ ಟ್ರಾನ್ಸ್ಫಾರ್ಮರ್, ಆಯಿಲ್, ವಿದ್ಯುತ್ ಕಂಬಗಳ ಅಕ್ರಮ ಮಾರಾಟದ ₹3.85 ಕೋಟಿ ಹಗರಣದ ಹಿನ್ನೆಲೆಯಲ್ಲಿ ಹರಿಹರ ನಗರ ಪೊಲೀಸರು ಹರಿಹರ ಬೆಸ್ಕಾಂ ವಿಭಾಗೀಯ ಕಚೇರಿ ವ್ಯಾಪ್ತಿಯ 38 ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿ, 30ಕ್ಕೂ ಹೆಚ್ಚು ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
- ಇಇ, ಎಇಇ, ಎಇ, ಜೆಇ ಸೇರಿ 38 ಜನಕ್ಕೆ ನೋಟಿಸ್ । ಇನ್ನೂ 4-5 ಅಧಿಕಾರಿಗಳ ವಿಚಾರಣೆ ಬಾಕಿ
- - -
ಕನ್ನಡಪ್ರಭ ವಾರ್ತೆ ದಾವಣಗೆರೆ
ಬೆಸ್ಕಾಂ ಸಂಗ್ರಹದಲ್ಲಿದ್ದ ಟ್ರಾನ್ಸ್ಫಾರ್ಮರ್, ಆಯಿಲ್, ವಿದ್ಯುತ್ ಕಂಬಗಳ ಅಕ್ರಮ ಮಾರಾಟದ ₹3.85 ಕೋಟಿ ಹಗರಣದ ಹಿನ್ನೆಲೆಯಲ್ಲಿ ಹರಿಹರ ನಗರ ಪೊಲೀಸರು ಹರಿಹರ ಬೆಸ್ಕಾಂ ವಿಭಾಗೀಯ ಕಚೇರಿ ವ್ಯಾಪ್ತಿಯ 38 ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿ, 30ಕ್ಕೂ ಹೆಚ್ಚು ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಹರಿಹರದ ಬೆಸ್ಕಾಂ ಸಂಗ್ರಹದಲ್ಲಿದ್ದ ₹3.85 ಕೋಟಿ ಮೌಲ್ಯದ ಟ್ರಾನ್ಸ್ಫಾರ್ಮರ್, ಟಿಸಿ ಆಯಿಲ್ ಸೇರಿದಂತೆ 39 ಸಾಮಗ್ರಿಗಳನ್ನು ಅಕ್ರಮವಾಗಿ ಮಾರಾಟ ಮಾಡಿದ್ದು, ಬೆಸ್ಕಾಂ ಉಗ್ರಾಣದ ಸಹಾಯಕ ಉಗ್ರಾಣ ಪಾಲಕ ಜಿ.ಎನ್.ಅರುಣಕುಮಾರ ಇತರರ ವಿರುದ್ಧ ಬೆಸ್ಕಾಂ ಅಧಿಕಾರಿಗಳೇ ದೂರು ನೀಡಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ವಿದ್ಯುತ್ ಗುತ್ತಿಗೆದಾರ ಎಸ್.ಜಿ.ಮಂಜುನಾಥ ಒತ್ತಾಯಿಸಿದ್ದಾರೆ.
ಆರೋಪದ ಹಿನ್ನೆಲೆ ಸಹಾಯಕ ಉಗ್ರಾಣ ಪಾಲಕ ಅರುಣಕುಮಾರ್ಗೆ ಬೆಸ್ಕಾಂ ಹಿರಿಯ ಅಧಿಕಾರಿಗಳು ಅಮಾನತುಗೊಳಿಸಿದ್ದರು. ವಿದ್ಯುತ್ ಗುತ್ತಿಗೆದಾರ ಎಸ್.ಜಿ. ಮಂಜುನಾಥ ದೂರು ದಾಖಲಿಸಿಕೊಂಡ ಹರಿಹರ ನಗರ ಪೊಲೀಸರು ಬೆಸ್ಕಾಂ ಹರಿಹರ ವಿಭಾಗೀಯ ವ್ಯಾಪ್ತಿಯ 38 ಅಧಿಕಾರಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದರು. ಈಗಾಗಲೇ 30ಕ್ಕೂ ಹೆಚ್ಚು ಅಧಿಕಾರಿಗಳನ್ನು ವಿಚಾರಣೆ ನಡೆಸಿದ್ದಾರೆ.
ಇನ್ನೂ ನಾಲ್ಕೈದು ಅಧಿಕಾರಿಗಳನ್ನು ವಿಚಾರಣೆ ನಡೆಸುವುದು ಬಾಕಿ ಇದೆ. ಇಷ್ಟೊಂದು ದೊಡ್ಡ ಮಟ್ಟದ ಹಗರಣ ನಡೆದಿದ್ದರೂ ಬೆಸ್ಕಾಂ ಜಾಗೃತ ದಳ ಮೌನವಹಿಸಿರುವುದು ಹಾಗೂ ಬೆಸ್ಕಾಂ ಹಿರಿಯ ಅಧಿಕಾರಿಗಳು ಜಾಣಗಿವುಡು ನೀತಿ ಸಾಕಷ್ಟು ಅನುಮಾನಕ್ಕೂ ಕಾರಣವಾಗಿದೆ. ಪ್ರಕರಣದ ಬಗ್ಗೆ ಸಮರ್ಪಕ ತನಿಖೆ ನಡೆಸಬೇಕು. ಈ ಹಗರಣದಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೋ ಆ ಎಲ್ಲರ ವಿರುದ್ಧವೂ ಕಾನೂನು ಕ್ರಮ ಆಗಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.
ಇಡೀ ಹಗರಣದಲ್ಲಿ ಬೆಸ್ಕಾಂ ಹಿರಿಯ ಅಧಿಕಾರಿಗಳು ಭಾಗಿಯಾಗಿರುವ ಅನುಮಾನವಿದೆ. ಬೆಸ್ಕಾಂ ಸ್ಟೋರ್ನಲ್ಲಿದ್ದ ₹3.85 ಕೋಟಿ ಮೌಲ್ಯದ ಟ್ರಾನ್ಸ್ಫಾರ್ಮರ್, ಟಿ.ಸಿ. ಆಯಿಲ್ ಸೇರಿದಂತೆ 39 ಸಾಮಗ್ರಿಗಳನ್ನು ಅಕ್ರಮವಾಗಿ ಮಾರಾಟ ಮಾಡಿಕೊಳ್ಳಲಾಗಿದೆ. ಸಹಾಯಕ ಉಗ್ರಾಣ ಪಾಲಕ ಅರುಣಕುಮಾರ ಅಕ್ರಮ ಎಸಗಿದ್ದು, ಇದರಲ್ಲಿ ಮೇಲಾಧಿಕಾರಿಗಳು ಸಹ ಶಾಮೀಲಾಗಿರುವ ಅನುಮಾನವಿದೆ ಎಂದು ದೂರು ಹೇಳುತ್ತಾರೆ. ಹರಿಹರ, ಹೊನ್ನಾಳಿ, ನ್ಯಾಮತಿ ಹಾಗೂ ವಿಜಯ ನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಬೆಸ್ಕಾಂ ಅಧಿಕಾರಿಗಳನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.
- - -
(ಬಾಕ್ಸ್)
* ಸಮಗ್ರ ತನಿಖೆಯಾಗಬೇಕು: ವಿದ್ಯುತ್ ಗುತ್ತಿಗೆದಾರ
ಹರಿಹರದ ಬೆಸ್ಕಾಂ ವಿಭಾಗದ ಇಇ, ಎಇಇ, ಎಇ, ಜೆ.ಇ.ಗಳು ಸೇರಿದಂತೆ ಒಟ್ಟು 38 ಅಧಿಕಾರಿಗಳಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ಜಾರಿಗೊಳಿಸಿದ್ದ ಪೊಲೀಸರು ಒಬ್ಬೊಬ್ಬರನ್ನೇ ವಿಚಾರಣೆ ನಡೆಸುತ್ತಿದ್ದಾರೆ. ಇಷ್ಟೊಂದು ದೊಡ್ಡಮಟ್ಟದ ಹಗರಣ ನಡೆದಿದ್ದರೂ ನಿರ್ಲಕ್ಷ್ಯ ವಹಿಸಿದ್ದು ಏಕೆ? ಇದೆಲ್ಲದರ ಬಗ್ಗೆಯೂ ಸಮಗ್ರ ತನಿಖೆಯಾಗಬೇಕು. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಿದ್ಯುತ್ ಗುತ್ತಿಗೆದಾರ ಮಂಜುನಾಥ ಆಗ್ರಹಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.