ಮಹಾನಗರ ಪಾಲಿಕೆಗೆ ₹5.16 ಕೋಟಿ ಉಳಿತಾಯ ಬಜೆಟ್

KannadaprabhaNewsNetwork | Published : Feb 6, 2025 11:47 PM

ಸಾರಾಂಶ

ದಾವಣಗೆರೆ ಮಹಾನಗರ ಪಾಲಿಕೆ 2025- 2026ನೇ ಸಾಲಿಗೆ ₹5.16 ಕೋಟಿ ಉಳಿತಾಯ ಬಜೆಟ್‌ ಅನ್ನು ಮೇಯರ್ ಕೆ.ಚಮನ್ ಸಾಬ್ ಮಂಡಿಸಿದರು. ನಗರದ ಪಾಲಿಕೆ ಸಭಾಂಗಣದಲ್ಲಿ ಗುರುವಾರ ತೆರಿಗೆ ಮತ್ತು ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷೆ ಉರ್ಬಾನ್‌ ಬಾನು ಪಂಡಿತ್‌ ಪರವಾಗಿ 2024-25ನೇ ಸಾಲಿನ ಪರಿಷ್ಕೃತ ಹಾಗೂ 2025-26ನೇ ಸಾಲಿನ ಬಜೆಟ್‌ ಅನ್ನು ಮೇಯರ್ ಮಂಡನೆ ಮಾಡಿದರು.

- ಆದಾಯ ಹೆಚ್ಚಿಸಲು ಮಾಲ್ ನಿರ್ಮಾಣ, ಪಾರ್ಕ್‌ಗಳಿಗೆ ಪ್ರವೇಶ ಶುಲ್ಕ ನಿಗದಿ: ಮೇಯರ್‌ ಚಮನ್‌ ಸಾಬ್‌ ವಿವರ

- - - - ಯಾವ ಕಾರ್ಯಕ್ರಮಗಳಿಗೂ ಅನುದಾನವಿಲ್ಲ ಎಂದು ಖಾಲಿ ಚೊಂಬು, ಲೋಟ ಪ್ರದರ್ಶಿಸಿದ ಬಿಜೆಪಿ ಸದಸ್ಯರು

- ಮೇಯರ್‌ ಮಂಡಿಸಿರುವುದು ಉತ್ತಮ ಜನಪರ ಬಜೆಟ್‌ ಎಂದು ಸ್ವಾಗತಿಸಿದ ಕಾಂಗ್ರೆಸ್‌ ಸದಸ್ಯರು

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ಮಹಾನಗರ ಪಾಲಿಕೆ 2025- 2026ನೇ ಸಾಲಿಗೆ ₹5.16 ಕೋಟಿ ಉಳಿತಾಯ ಬಜೆಟ್‌ ಅನ್ನು ಮೇಯರ್ ಕೆ.ಚಮನ್ ಸಾಬ್ ಮಂಡಿಸಿದರು.

ನಗರದ ಪಾಲಿಕೆ ಸಭಾಂಗಣದಲ್ಲಿ ಗುರುವಾರ ತೆರಿಗೆ ಮತ್ತು ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷೆ ಉರ್ಬಾನ್‌ ಬಾನು ಪಂಡಿತ್‌ ಪರವಾಗಿ 2024-25ನೇ ಸಾಲಿನ ಪರಿಷ್ಕೃತ ಹಾಗೂ 2025-26ನೇ ಸಾಲಿನ ಬಜೆಟ್‌ ಅನ್ನು ಮೇಯರ್ ಮಂಡನೆ ಮಾಡಿದರು.

ಪಾಲಿಕೆಯಲ್ಲಿ ₹3433.11 ಲಕ್ಷ ಆರಂಭಿಕ ಶಿಲ್ಕು ಇದ್ದು, ವಾಣಿಜ್ಯ ಮಳಿಗೆಗಳ ಬಾಡಿಗೆ, ಕಟ್ಟಡ ಪರವಾನಿಗೆ, ಅಭಿವೃದ್ಧಿ ಶಿಲ್ಕು, ಉದ್ದಿಮೆ ಪರವಾನಗಿ, ರಸ್ತೆ ಕಡಿತ ಇತರೆ ಮೂಲಗಳಿಂದ ₹21056.45 ಲಕ್ಷ ರಾಜಸ್ವ ಸ್ವೀಕೃತಿ, ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ, ಡೇ ನಲ್ಮ್ ಯೋಜನೆ, 15ನೇ ಕೇಂದ್ರ ಹಣಕಾಸು ಆಯೋಗದ ಅನುದಾನ, ರಾಜ್ಯ ಹಣಕಾಸು ಆಯೋಗದ ಅನುದಾನ, ಎಸ್ಸಿ-ಎಸ್ಟಿ ಅನುದಾನ, ಟಿಎಸ್‌ಪಿ ಅನುದಾನ, ಎನ್‌ಸಿಎಪಿ ಹಾಗೂ ಇತರೆ ಅಸಾಮಾನ್ಯ ಜಮೆಗಳಿಂದ ಒಟ್ಟು ₹20852.97 ಲಕ್ಷ ಅಸಾಮಾನ್ಯ ಸ್ವೀಕೃತಿ ನಿರೀಕ್ಷಿಸಲಾಗಿದೆ.

ಮಾನವ ಸಂಪನ್ಮೂಲ, ಹೊರಗುತ್ತಿಗೆ, ಇಂಧನ ಮತ್ತು ವಿದ್ಯುತ್ ವೆಚ್ಚ, ಜಮೀನು ಖರೀದಿ, ಕಚೇರಿ, ಇತರೆ ಕಚೇರಿ ಕಟ್ಟಡಗಳು, ಜಮೀನು ಖರೀದಿ, ಲಘು ವಾಹನ, ಕಚೇರಿ ಉಪಕರಣ, ಪೀಠೋಪಕರಣ, ಗಣಕ ಯಂತ್ರಗಳು ಸೇರಿದಂತೆ ಒಟ್ಟು ₹20219.59 ಲಕ್ಷ ಪಾವತಿಯ ಅಂದಾಜು ಇದೆ. ₹22782.11 ಅಸಾಮಾನ್ಯ ಪಾವತಿ ಮಾಡಬೇಕಾಗುತ್ತದೆ. ಪಾಲಿಕೆ ನಿರೀಕ್ಷಿತ ಆದಾಯದಲ್ಲಿ ಒಟ್ಟು ಪಾವತಿಗಳ ಖರ್ಚು ತೆಗೆದರೆ ಒಟ್ಟು ₹5.16 ಕೋಟಿಗೂ ಅಧಿಕ ಉಳಿತಾಯ ಆಗಲಿದೆ. ಪಾಲಿಕೆಗೆ ಆಸ್ತಿ ತೆರಿಗೆ ಅತಿ ಪ್ರಮುಖ ಆದಾಯದ ಮೂಲವಾಗಿದೆ.

ರಾಜ್ಯ ಸರ್ಕಾರ ಅನಧಿಕೃತ ಆಸ್ತಿಗಳಿಗೆ ಬಿ ಖಾತೆ ನೀಡುವ ಯೋಜನೆ ತರುತ್ತಿರುವಂತೆ ಪಾಲಿಕೆ ವ್ಯಾಪ್ತಿಯ 14 ಸಾವಿರ ಆಸ್ತಿಗಳನ್ನು ಆಸ್ತಿ ತೆರಿಗೆ ಜಾಲಕ್ಕೆ ಒಳಪಡಿಸುವುದರಿಂದ 6000 ಲಕ್ಷ ತೆರಿಗೆ ಸಂಗ್ರಹಿಸುವ ಗುರಿ ಹೊಂದಲಾಗಿದೆ. ನೀರಿನ ಕಂದಾಯದಿಂದ ₹600 ಲಕ್ಷ, ವಾಣಿಜ್ಯ ಮಳಿಗೆಗಳಿಂದ ₹150 ಲಕ್ಷ, ವ್ಯಾಪಾರ ಪರವಾನಿಗೆಯಿಂದ ₹165 ಲಕ್ಷ ರಾಜಸ್ವ ಸಂಗ್ರಹ ಗುರಿ ಹೊಂದಲಾಗಿದೆ.

ಡಿಜಿಟಲ್‌ ಸರ್ವೇ:

ಇದೇ ಮೊದಲ ಸಲ ಕಾಸಲ್ ಶ್ರೀನಿವಾಸ ಶ್ರೇಷ್ಠಿ ಉದ್ಯಾನವನ, ಸರ್ ಎಂ.ವಿಶ್ವೇಶ್ವರಯ್ಯ ಪಾರ್ಕ್ ಒಳಗೊಂಡಂತೆ ಅನೇಕ ಪ್ರಮುಖ ಪಾರ್ಕ್‌ಗಳ ಅಭಿವೃದ್ಧಿಪಡಿಸಿ, ಪ್ರವೇಶ ಶುಲ್ಕ ನಿಗದಿಪಡಿಸಲು ಮುಂದಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಅಂತರ್ಜಲ ಮರುಪೂರಣ ಕಾರ್ಯಕ್ಕೆ ಹೆಚ್ಚು ಒತ್ತು ನೀಡಲಾಗುವುದು. ಇಂಗುಗುಂಡಿಗಳ ನಿರ್ಮಾಣ, ಮಳೆ ನೀರು ಕೊಯ್ಲು ಯೋಜನೆಗೆ ₹50 ಲಕ್ಷ ಮೀಸಲಿಡಲಾಗಿದೆ. ಪಾಲಿಕೆ ಆಸ್ತಿ ಮತ್ತು ಅಭಿವೃದ್ಧಿ ಕಾರ್ಯಗಳ ಕರ, ದಂಡ ವಸೂಲಿ ಇತರೆ ಕಾರ್ಯಕ್ಕೆ ಡ್ರೋನ್‌ (ಡಿಜಿಟಲ್ ಸರ್ವೇ) ಕೈಗೊಳ್ಳಲು ಪಾಲಿಕೆ ಮುಂದಾಗಿದೆ.

ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ರಾಜ್ಯ ಸರ್ಕಾರವು ವಿಶ್ವ ಕನ್ನಡ ಸಮ್ಮೇಳನ ಆಯೋಜಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಯಿಂದ ₹50 ಲಕ್ಷ ವಂತಿಗೆ ನೀಡಲು ಅನುದಾನ ಕಾಯ್ದಿರಿಸಲಾಗಿದೆ. ಪಾಲಿಕೆ ಒಡೆತನದ ಜಾಗಗಳ ಪೈಕಿ ಯಾವುದಾದರೂ ಒಂದು ಕಡೆ ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸು, ನಿರ್ವಹಿಸು, ವರ್ಗಾಯಿಸು ಮಾದರಿಯಲ್ಲಿ ಸುಸಜ್ಜಿತ ಶಾಪಿಂಗ್‌ ಮಾಲ್ ನಿರ್ಮಿಸಿ, ಅದರಲ್ಲಿ ಮಕ್ಕಳ 3ಡಿ ಗೇಮಿಂಗ್ ಝೋನ್, 5ಡಿ ಎಕ್ಸಿಪೀರಿಯನ್ಸ್ ಥಿಯೇಟರ್‌ ನಂತರ ವಿನೂತನ ಪರಿಕಲ್ಪನೆಗಳನ್ನು ಅಳವಡಿಸಲಾಗುವುದು. ಇದನ್ನು ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವ (ಪಿಪಿಪಿ ಮಾದರಿ)ದಲ್ಲಿ ಜಾರಿಗೊಳಿಸಲಾಗುವುದು. ಎಂಸಿಸಿ ಬಿ ಬ್ಲಾಕ್‌ನ ಪಾಲಿಕೆ ಜಾಗದಲ್ಲಿ ವಾಣಿಜ್ಯ ಸಂಕೀರ್ಣ-ಮಾಲ್ ನಿರ್ಮಿಸಿ, ಪಾಲಿಕೆಗೆ ಹೆಚ್ಚುವರಿ ಆದಾಯ ಕ್ರೋಢೀಕರಿಸಲು ಒತ್ತು ನೀಡಲಾಗಿದೆ.

ಉಪ ಮೇಯರ್ ಸೋಗಿ ಶಾಂತಕುಮಾರ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸವಿತಾ ಹುಲ್ಮನಿ ಗಣೇಶ, ಉರ್ಬಾನು ಬಾನು ಪಂಡಿತ್, ಸುಧಾ ಇಟ್ಟಿಗುಡಿ ಮಂಜುನಾಥ, ಆಶಾ ಉಮೇಶ, ಕಾಂಗ್ರೆಸ್ ಸದಸ್ಯರಾದ ಜಿ.ಎಸ್.ಮಂಜುನಾಥ ಗಡಿಗುಡಾಳ, ಅಬ್ದುಲ್ ಲತೀಫ, ಸುರಭಿ ಎಸ್.ಶಿವಮೂರ್ತಿ, ಎಲ್.ಎಂ.ಎಚ್‌.ಸಾಗರ್, ಉದಯಕುಮಾರ, ಎ.ಬಿ.ರಹೀಂ ಸಾಬ್‌, ವಿಪಕ್ಷ ನಾಯಕ ಆರ್.ಎಲ್.ಶಿವಪ್ರಕಾಶ, ಮಾಜಿ ಮೇಯರ್‌ಗಳಾದ ಡಿ.ಎಸ್.ಉಮಾ ಪ್ರಕಾಶ, ಎಸ್.ಟಿ.ವೀರೇಶ, ಸದಸ್ಯರಾದ ಕೆ.ಎಂ.ವೀರೇಶ, ಮಂಜುನಾಥ ನಾಯ್ಕ, ಆರ್.ಶಿವಾನಂದ, ವೀಣಾ ನಂಜಪ್ಪ, ರೇಖಾ ಸುರೇಶ ಗಂಡುಗಾಳೆ ಇತರರು ಇದ್ದರು.

- - -

ಬಾಕ್ಸ್‌ * ಪರ-ವಿರೋಧ ಅಭಿಪ್ರಾಯ- ಅನುಮೋದನೆ

ಮೇಯರ್ ಚಮನ್ ಸಾಬ್ ಮಂಡಿಸಿದ ಬಜೆಟ್‌ ಅನ್ನು ಆಡಳಿತ ಪಕ್ಷ ಕಾಂಗ್ರೆಸ್ ಸದಸ್ಯರು ಅತ್ಯುತ್ತಮ, ಜನಪರ ಬಜೆಟ್ ಎಂಬುದಾಗಿ ಸ್ವಾಗತಿಸಿದರೆ, ವಿಪಕ್ಷ ಬಿಜೆಪಿ ಸದಸ್ಯರು ಖಾಲಿ ಚೊಂಬು, ಖಾಲಿ ಲೋಟಗಳನ್ನು ಹಿಡಿದು, ಅನೇಕ ಕಾರ್ಯಕ್ರಮಗಳಿಗೆ ಯಾವುದೇ ಹಣ ಇಲ್ಲ, ಇದೊಂದು ಖಾಲಿ ಡಬ್ಬದಂತಹ ಬಜೆಟ್ ಎಂಬುದಾಗಿ ಟೀಕಿಸಿದರು. ಈ ಮೂಲಕ ಪಾಲಿಕೆ ಮೇಯರ್ ಚಮನ್ ಸಾಬ್ ರ ಅವದಿ, ಪಾಲಿಕೆಯ ಈ ಅವಧಿಯ ಕಟ್ಟಕಡೆಯ ಬಜೆಟ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಕಡೆಗೆ ಬಜೆಟ್‌ಗೆ ಅನುಮೋದನೆ ನೀಡಲಾಯಿತು.

- - - -6ಕೆಡಿವಿಜಿ1, 2, 3, 4.ಜೆಪಿಜಿ:

ದಾವಣಗೆರೆ ಪಾಲಿಕೆಯಲ್ಲಿ 2025-26ನೇ ಸಾಲಿನ ಬಜೆಟ್ ಮಂಡನೆ ಸಭೆಯಲ್ಲಿ ಮೇಯರ್‌ ಕೆ.ಚಮನ್ ಸಾಬ್ ಅಧ್ಯಕ್ಷತೆ ವಹಿಸಿ, ಆಯವ್ಯಯ ವಿವರಗಳ ಮಂಡಿಸಿದರು.

Share this article