ದೇವನಹಳ್ಳಿ: ದೇವನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ೫೦ ಕೋಟಿ ರು. ವಿಶೇಷ ಅನುದಾನ ನೀಡಿದ್ದು, ಆದ್ಯತೆ ಮೇಲೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ವತಿಯಿಂದ ದೇವನಹಳ್ಳಿ ಪಟ್ಟಣದ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ೭೯ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣ ನೆರವೇರಿಸಿ, ಗಣ್ಯರೊಂದಿಗೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿ ಅವರು ಮಾತನಾಡಿದರು.ದೇವನಹಳ್ಳಿ ಪಟ್ಟಣದ ಶ್ರೀನಿಧಿ ಜಂಕ್ಷನ್‌ನಿಂದ ರಾಣಿ ಕ್ರಾಸ್‌ವರೆಗೂ ೨೫ ಕೋಟಿ ರು. ವೆಚ್ಚದಲ್ಲಿ ಚತುಷ್ಪಥ ಕಾಂಕ್ರೀಟ್ ದ್ವಿಮುಖ ರಸ್ತೆ ನಿರ್ಮಾಣ ಕಾಮಗಾರಿ ಪುಗತಿಯಲ್ಲಿದೆ. ಮತ್ತು ನಂದಿ ಕ್ರಾಸ್‌ನಿಂದ ವಿಜಯಪುರದವರೆಗೆ ೫೦ ಕೋಟಿ ರು. ವೆಚ್ಚದಲ್ಲಿ ಡಾಂಬರ್ ಮತ್ತು ಸಿಮೆಂಟ್ ರಸ್ತೆ ಕಾಮಗಾರಿ ಕೈಗೊಳ್ಳಲಾಗಿದೆ ಹಾಗೂ ಪಟ್ಟಣದಲ್ಲಿ ೩೮ ಕೋಟಿ ರು. ಮತ್ತು ವಿಜಯಪುರ ಪಟ್ಟಣದಲ್ಲಿ ೨೮ ಕೋಟಿ ರು. ವೆಚ್ಚದಲ್ಲಿ ಇಂಧನ ಇಲಾಖೆಯಿಂದ ಯುಜಿ ಕೇಬಲ್ ಅಳವಡಿಸಲು ಮಂಜೂರಾತಿ ದೊರೆತಿದ್ದು ಕಾಮಗಾರಿ ಪ್ರಗತಿಯಲ್ಲಿರುತ್ತದೆ ಎಂದರು.
ರಾಜ್ಯದಲ್ಲಿಯೇ ಪ್ರಪ್ರಥಮ ಜಿಲ್ಲೆಯಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸರ್ಕಾರದ ಎರಡು ವರ್ಷ ಸಾಧನಾ ಸಮಾವೇಶವನ್ನು ಆಯೋಜಿಸಿದ್ದು, ೧,೦೦೦ ಕೋಟಿ ರು.ಗಳಿಗೂ ಹೆಚ್ಚು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವೇರಿಸಿದ್ದಾರೆ. ದೇವನಹಳ್ಳಿವರೆಗೆ ಮೆಟ್ರೋ ವಿಸ್ತರಣೆ ಮಾಡಲು ೨೦೨೫-೨೬ನೇ ಸಾಲಿನ ಆಯವ್ಯಯದಲ್ಲಿ ಘೋಷಣೆ ಮಾಡಲಾಗಿದೆ ಎಂದು ತಿಳಿಸಿದರು.ಕಂದಾಯ ಇಲಾಖೆಯಡಿ ಪೌತಿ ಖಾತೆ ಬದಲಾವಣೆಗೆ ಆಂದೋಲನ ಪ್ರಾರಂಭಿಸಲಾಗಿದೆ. ಜಿಲ್ಲೆಯ ೪ ತಾಲೂಕಿನಲ್ಲಿ ೮೪,೩೪೧ ಸರ್ವೇ ನಂಬರ್ ಖಾತೆದಾರರು ಪೌತಿಯಾಗಿದ್ದು, ಕಳೆದ ಜುಲೈ ಮಾಹೆಯಿಂದ ಈಗಾಗಲೇ ೨,೧೮೭ ಖಾತೆ ಬದಲಾವಣೆ ಮಾಡಲಾಗಿದೆ. ಉಳಿದ ಸರ್ವೇ ನಂಬರ್ ಖಾತೆದಾರರ ವಾರಸುದಾರರಿಗೆ ಖಾತೆ ಬದಲಾವಣೆಗೆ ವ್ಯಾಪಕ ಪ್ರಚಾರ ಮಾಡಿ ಕ್ರಮವಹಿಸಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿವಿಧ ಶಾಲಾ ವಿದ್ಯಾರ್ಥಿಗಳ ತಂಡಗಳಿಂದ ದೇಶಭಕ್ತಿ ಗೀತೆಯ ನೃತ್ಯ ಪ್ರದರ್ಶನ ಹಾಗೂ ಶಾಲಾ ಮಕ್ಕಳು ಹಾಗೂ ಗ್ರಾಮಾಂತರ ಜಿಲ್ಲಾ ಪೋಲೀಸ್ ತಂಡಗಳಿಂದ ಪಥ ಸಂಚಲನ ನಡೆಯಿತು.ಕಾರ್ಯಕ್ರಮದಲ್ಲಿ ೫ನೇ ಹಣಕಾಸು ಆಯೋಗದ ಅಧ್ಯಕ್ಷರಾದ ಸಿ.ನಾರಾಯಣಸ್ವಾಮಿ, ಗ್ಯಾರಂಟಿ ಯೋಜನೆಗಳ ಜಿಲ್ಲಾ ಅಧ್ಯಕ್ಷರಾದ ರಾಜಣ್ಣ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರ ಅಧ್ಯಕ್ಷರಾದ ಶಾಂತಕುಮಾರ್, ಪುರಸಭಾಧ್ಯಕ್ಷ ಮುನಿಕೃಷ್ಣ, ಗ್ಯಾರಂಟಿ ಯೋಜನೆಗಳ ದೇವನಹಳ್ಳಿ ತಾಲೂಕು ಅಧ್ಯಕ್ಷ ಜಗನ್ನಾಥ, ಜಿಲ್ಲಾಧಿಕಾರಿ ಎ.ಬಿ ಬಸವರಾಜು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ಎನ್. ಅನುರಾಧ, ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ.ಕೆ.ಬಾಬಾ, ದೇವನಹಳ್ಳಿ ತಹಸೀಲ್ದಾರ್ ಅನಿಲ್, ಇ.ಓ.ಶ್ರೀನಾಥ್ ಗೌಡ ಸೇರಿ ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ, ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು, ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.---------------
೧೫ ದೇವನಹಳ್ಳಿ ಚಿತ್ರಸುದ್ದಿ :೦೧ ದೇವನಹಳ್ಳಿ ಪಟ್ಟಣದ ಕ್ರೀಡಾಂಗಣದಲ್ಲಿ ೭೯ನೇ ಸ್ವಾತಂತ್ರ್ಯ ರಾಷ್ಟ್ರ ಧ್ವಜಾರೋಹಣನೆರವೇರಿಸಿದ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್.ಮುನಿಯಪ್ಪ.