ವಿಶ್ವದ 3ನೇ ಆರ್ಥಿಕ ಶಕ್ತಿಯಾಗಲು ಶ್ರಮಿಸೋಣ: ಜಿ. ಅನಿಲ್‌ಕುಮಾರ್

KannadaprabhaNewsNetwork |  
Published : Aug 16, 2025, 12:00 AM IST
ಸಂಡೂರಿನ ಛತ್ರಪತಿ ಶಿವಾಜಿ ವಿದ್ಯಾಮಂದಿರದ ಮೈದಾನದಲ್ಲಿ ಶುಕ್ರವಾರ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ೭೯ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ವಿವಿಧ ತಂಡಗಳಿಂದ ಆಕರ್ಷಕ ಪಥ ಸಂಚಲನ ಜರುಗಿತು. | Kannada Prabha

ಸಾರಾಂಶ

ಸಂಡೂರು ಪಟ್ಟಣದ ಛತ್ರಪತಿ ಶಿವಾಜಿ ವಿದ್ಯಾಮಂದಿರದ ಆವರಣದಲ್ಲಿ ಶುಕ್ರವಾರ ತಾಲೂಕು ಆಡಳಿತದ ವತಿಯಿಂದ ನಡೆದ ೭೯ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಜಿ. ಅನಿಲ್‌ಕುಮಾರ್ ಧ್ವಜಾರೋಹಣ ನೆರವೇರಿಸಿದರು.

ಸಂಡೂರು: ಭಾರತ ಜಗತ್ತಿನ ೫ನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರ ಹೊಮ್ಮಿದೆ. ಜಗತ್ತಿನ ಅಗ್ರ ೩ ಆರ್ಥಿಕ ಶಕ್ತಿಗಳಲ್ಲಿ ದೇಶವನ್ನು ಒಂದಾಗಿಸಲು ಎಲ್ಲರೂ ಒಟ್ಟಾಗಿ ಶ್ರಮಿಸೋಣ ಎಂದು ತಹಸೀಲ್ದಾರ್ ಜಿ. ಅನಿಲ್‌ಕುಮಾರ್ ಕರೆ ನೀಡಿದರು.

ಪಟ್ಟಣದ ಛತ್ರಪತಿ ಶಿವಾಜಿ ವಿದ್ಯಾಮಂದಿರದ ಆವರಣದಲ್ಲಿ ಶುಕ್ರವಾರ ತಾಲೂಕು ಆಡಳಿತದ ವತಿಯಿಂದ ನಡೆದ ೭೯ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಹಲವು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಹಾಗೂ ಹೋರಾಟದ ಫಲವಾಗಿ ದೇಶಕ್ಕೆ ಸ್ವಾತಂತ್ರ್ಯ ಲಭಿಸಿತು ಎಂದು ಹೇಳಿದರು.

ಶಾಸಕಿ ಈ. ಅನ್ನಪೂರ್ಣಾ ತುಕಾರಾಂ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ವಾತಂತ್ರ್ಯ ದಿನಾಚರಣೆ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುವ ಹಾಗೂ ಅವರಿಗೆ ಗೌರವ ಸಲ್ಲಿಸುವ ದಿನವಾಗಿದೆ. ಅವರ ಕಾರ್ಯಗಳು ಎಲ್ಲರಿಗೂ ಸ್ಫೂರ್ತಿಯಾಗಿವೆ. ಬಹು ಸಂಸ್ಕೃತಿಯ ನಾಡಾಗಿರುವ ಭಾರತ ವಿಶ್ವಕ್ಕೆ ಮಾದರಿಯಾಗಿದೆ. ದೇಶಭಕ್ತಿ ಮೈಗೂಡಿಸಿಕೊಂಡು, ಸ್ವಾತಂತ್ರ್ಯದ ಮಹತ್ವ ಅರಿತು ದೇಶದ ಪ್ರಗತಿಗೆ ಎಲ್ಲರೂ ಒಟ್ಟಾಗಿ ಶ್ರಮಿಸೋಣ ಎಂದರು.

ಕ್ಷೇತ್ರದಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ. ಕ್ಷೇತ್ರದಲ್ಲಿ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಬದಲಾವಣೆ ಕಾಣುತ್ತಿದ್ದೇವೆ. ೧೪ ಗ್ರಾಮಗಳ ಸರ್ವೆ ಸೆಟ್ಲಮೆಂಟ್ ಮಾಡಲಾಗಿದೆ. ಇದರಿಂದ ೩೨೦೦ ಕುಟುಂಬಗಳಿಗೆ ಅನುಕೂಲವಾಗಿದೆ. ೩೬ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಲಾಗಿದೆ. ತಾಲೂಕಿನ ಶೇ. ೫೦ರಷ್ಟು ಸರ್ಕಾರಿ ಶಾಲೆಗಳಲ್ಲಿ ತಂತ್ರಜ್ಞಾನ ಆಧಾರಿತ ಬೋಧನೆಗೆ ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದರು.

ಸಂಸದ ಈ. ತುಕಾರಾಂ ಅವರು ಎನ್‌ಎಂಡಿಸಿ (ನ್ಯಾಷನಲ್ ಮಿನರಲ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್)ನ ಸಿಎಸ್‌ಆರ್ ಯೋಜನೆ ಅಡಿಯಲ್ಲಿ ಮಂಜೂರಾಗಿದ್ದ ಪ್ರತಿ ಶಾಲೆಗೆ ₹೧ ಲಕ್ಷದಂತೆ ತಾಲೂಕಿನ ಒಟ್ಟು ೨೫ ಶಾಲೆಗಳಿಗೆ ₹೨೫ ಲಕ್ಷ ವೆಚ್ಚದ ಕ್ರೀಡಾ ಸಾಮಗ್ರಿಗಳನ್ನು ವಿತರಿಸಿದರು. ಪಥ ಸಂಚಲನದಲ್ಲಿ ಭಾಗವಹಿಸಿದ್ದ ೨೨ ತಂಡಗಳು ಹಾಗೂ ನೃತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ೬ ಶಾಲಾ ತಂಡಗಳಿಗೆ ಸಂಸದರು ಪ್ರೋತ್ಸಾಹಧನ ವಿತರಿಸಿದರು.

ಪ್ರಸಕ್ತ ಸಾಲಿನಲ್ಲಿ ನಿವೃತ್ತರಾದ ಸರ್ಕಾರಿ ನೌಕರರನ್ನು ಸನ್ಮಾನಿಸಲಾಯಿತು. ಪೊಲೀಸ್, ಗೃಹರಕ್ಷಕ ದಳ, ಎನ್‌ಸಿಸಿ, ಸ್ಕೌಟ್ ಆ್ಯಂಡ್‌ ಗೈಡ್, ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನ ಹಾಗೂ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಐ.ಆರ್. ಅಕ್ಕಿ ಸ್ವಾಗತಿಸಿದರು. ಬಿಆರ್‌ಪಿ ಮಂಜುನಾಥ ಹಾದಿಮನಿ ಕಾರ್ಯಕ್ರಮ ನಿರೂಪಿಸಿದರು. ಪುರಸಭೆ ಅಧ್ಯಕ್ಷ ಎಸ್. ಸಿರಾಜ್ ಹುಸೇನ್, ಉಪಾಧ್ಯಕ್ಷೆ ಎಂ.ಸಿ. ಲತಾ, ತಾಪಂ ಇಒ ಮಡಗಿನ ಬಸಪ್ಪ, ಸರ್ಕಲ್ ಇನ್‌ಸ್ಪೆಕ್ಟರ್ ಬಿ. ಮಹೇಶ್‌ಗೌಡ, ಪುರಸಭೆ ಮುಖ್ಯಾಧಿಕಾರಿ ಬಿ. ವಿನಯ್‌ಕುಮಾರ್‌ಗೌಡ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಸ್ಲಿಮರು ಸೂರ್‍ಯನಮಸ್ಕಾರ ಮಾಡ್ಬೇಕು : ಹೊಸಬಾಳೆ ಕರೆ
ರೈಲ್ವೆ ಬಡ್ತಿ ಪರೀಕ್ಷೆ ಕನ್ನಡದಲ್ಲೂ ನಡೆಸಲು ಸೋಮಣ್ಣ ತಾಕೀತು