67 ಕೋಟಿ ರು. ವೆಚ್ಚದ ಅಂಡರ್‌ಗ್ರೌಂಡ್ ವಿದ್ಯುತ್ ಕೇಬಲ್ ಯೋಜನೆಗೆ ಮಂಜೂರಾತಿ

KannadaprabhaNewsNetwork |  
Published : Apr 28, 2026, 02:45 AM IST
ಪದ್ಮರಾಜ್ ಆರ್‌.ಪೂಜಾರಿ  | Kannada Prabha

ಸಾರಾಂಶ

ಮಂಗಳೂರು ನಗರದಲ್ಲಿ ದಸರಾ ಮೆರವಣಿಗೆ ಸಾಗುವ ರಸ್ತೆಯಲ್ಲಿ 67 ಕೋಟಿ ರು. ವೆಚ್ಚದ ಅಂಡರ್‌ ಗ್ರೌಂಡ್‌ ವಿದ್ಯುತ್ ಕೇಬಲ್ ಅಳವಡಿಕೆ ಕಾಮಗಾರಿಗೆ ಮಂಜೂರಾತಿ ನೀಡಲಾಗಿದೆ.

ಮಂಗಳೂರು: ಮಂಗಳೂರು ನಗರದಲ್ಲಿ ದಸರಾ ಮೆರವಣಿಗೆ ಸಾಗುವ ರಸ್ತೆಯಲ್ಲಿ 67 ಕೋಟಿ ರು. ವೆಚ್ಚದ ಅಂಡರ್‌ ಗ್ರೌಂಡ್‌ ವಿದ್ಯುತ್ ಕೇಬಲ್ ಅಳವಡಿಕೆ ಕಾಮಗಾರಿಗೆ ಮಂಜೂರಾತಿ ನೀಡಲಾಗಿದೆ.

ವಿಶ್ವವಿಖ್ಯಾತ ಮಂಗಳೂರು ದಸರಾ ಮಹೋತ್ಸವದ ಮೆರವಣಿಗೆಗೆ ದಶಕಗಳಿಂದ ಎದುರಾಗಿದ್ದ ವಿದ್ಯುತ್‌ ತಾಂತ್ರಿಕ ಸವಾಲಿಗೆ ಈ ಮೂಲಕ ಶಾಶ್ವತ ಪರಿಹಾರ ಸಿಕ್ಕಂತಾಗಿದೆ. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಡಳಿತ ಮಂಡಳಿಯ ಸುದೀರ್ಘ ಪ್ರಯತ್ನದ ಫಲವಾಗಿ, ಮೆರವಣಿಗೆ ಮಾರ್ಗದಲ್ಲಿ ಅಡಚಣೆಯುಂಟು ಮಾಡುತ್ತಿದ್ದ ವಿದ್ಯುತ್ ತಂತಿಗಳನ್ನು ತೆರವುಗೊಳಿಸಿ, ಭೂಗತ ಕೇಬಲ್ ಅಳವಡಿಸು ಯೋಜನೆ ಇದಾಗಿದ್ದು, 67 ಕೋಟಿ ರು.ವೆಚ್ಚದ ಬೃಹತ್ ಯೋಜನೆಗೆ ರಾಜ್ಯ ಸರ್ಕಾರ ಮಂಜೂರಾತಿ ನೀಡಿದೆ.ಪ್ರತಿ ವರ್ಷ ಮಂಗಳೂರು ದಸರಾ ಮೆರವಣಿಗೆಯ ಸಂದರ್ಭದಲ್ಲಿ ಸಾಲು ಸಾಲಾಗಿ ಸಾಗುವ ಎತ್ತರದ ಸ್ತಬ್ಧ ಚಿತ್ರಗಳು ಮತ್ತು ರಥಗಳಿಗೆ ರಸ್ತೆಯ ಮೇಲ್ಭಾಗದಲ್ಲಿ ಹಾದುಹೋಗಿದ್ದ ವಿದ್ಯುತ್ ತಂತಿಗಳು ದೊಡ್ಡ ಅಡಚಣೆಯಾಗಿದ್ದವು. ಸುರಕ್ಷತೆಯ ದೃಷ್ಟಿಯಿಂದ ಮೆರವಣಿಗೆಯ ಸಮಯದಲ್ಲಿ ನಗರದ ಹಲವು ಭಾಗಗಳಲ್ಲಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುವುದು ಅನಿವಾರ್ಯವಾಗಿತ್ತು. ಇದರಿಂದಾಗಿ ಸಾರ್ವಜನಿಕರಿಗೆ ಹಾಗೂ ಸ್ಥಳೀಯ ವ್ಯಾಪಾರಿಗಳಿಗೆ ಸಾಕಷ್ಟು ತೊಂದರೆಯಾಗುತ್ತಿತ್ತು. ಈ ಗಂಭೀರ ಸಮಸ್ಯೆಯನ್ನು ಮನಗಂಡ ಕುದ್ರೋಳಿ ಕ್ಷೇತ್ರದ ಆಡಳಿತ ಮಂಡಳಿಯವರು ಸಭಾಧ್ಯಕ್ಷ ಯು.ಟಿ.ಖಾದರ್ ಮೂಲಕ ಈ ಬಗ್ಗೆ ಸರ್ಕಾರಕ್ಕೆ ವಿಶೇಷ ಮನವಿ ಸಲ್ಲಿಸಿದ್ದರು. ಈ ಸಮಸ್ಯೆಯ ಗಂಭೀರತೆ ಅರಿತ ಯು.ಟಿ.ಖಾದರ್ ಇದನ್ನು ಕೇವಲ ಒಂದು ಧಾರ್ಮಿಕ ಕಾರ್ಯಕ್ರಮವನ್ನಾಗಿ ನೋಡದೆ ಮಂಗಳೂರಿನ ಘನತೆಯ ಪ್ರಶ್ನೆಯಾಗಿ ಸ್ವೀಕರಿಸಿ, ಇಂಧನ ಸಚಿವರೊಂದಿಗೆ ಸತತ ಸಂಪರ್ಕ ಸಾಧಿಸಿ, ಬೃಹತ್ ಯೋಜನೆಗೆ ಅನುಮೋದನೆ ದೊರಕಿಸಿಕೊಡುವಲ್ಲಿ ಪಾತ್ರ ವಹಿಸಿದ್ದರು. ಟೆಂಡರ್ ಪ್ರಕ್ರಿಯೆಯನ್ನು ವಿಳಂಬವಿಲ್ಲದೆ ಪೂರ್ಣಗೊಳಿಸಿ, ಕಾಮಗಾರಿಯ ಆರಂಭಕ್ಕೆ ಹಸಿರು ನಿಶಾನೆ ತೋರುವ ಮೂಲಕ ತಮ್ಮ ಕಾರ್ಯದಕ್ಷತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ ಎಂದು ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ ತಿಳಿಸಿದ್ದಾರೆ.ಈ ಯೋಜನೆಯಿಂದಾಗಿ ಮುಂದಿನ ದಿನಗಳಲ್ಲಿ ವಿದ್ಯುತ್ ಅಪಘಾತಗಳ ಭಯವಿಲ್ಲದೆ ಮೆರವಣಿಗೆ ಸುಗಮವಾಗಿ ಸಾಗಲಿದ್ದು, ಮಳೆಗಾಲದಲ್ಲಿ ಮರಗಳು ಬಿದ್ದು ವಿದ್ಯುತ್ ವ್ಯತ್ಯಯವಾಗುವ ಸಮಸ್ಯೆಗೂ ಮುಕ್ತಿ ಸಿಗಲಿದೆ. ಅಷ್ಟೇ ಅಲ್ಲದೆ, ರಸ್ತೆಗಳಲ್ಲಿ ವಿದ್ಯುತ್ ತಂತಿಗಳ ಜಾಲವಿಲ್ಲದೆ ಮಂಗಳೂರು ನಗರ ಮತ್ತಷ್ಟು ಸುಂದರವಾಗಿ ಕಂಗೊಳಿಸಲಿದೆ. ಈ ಮಹತ್ವದ ಕಾಮಗಾರಿ ಶೀಘ್ರದಲ್ಲೇ ಆರಂಭಗೊಳ್ಳಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪೇಪರ ಹಂಚಿದ ಹುಡುಗ 20 ಕೃತಿ ರಚಿಸಿದ ಸಾಹಿತಿ: ಡಾ.ವಿ.ಡಿ.ಐಹೊಳ್ಳಿ
ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಯತ್ನಾಳ ಭೂಮಿಪೂಜೆ