ತಾಲೂಕಿನ ಕೊಡಗನೂರು ಕೆರೆ ಏರಿಯ ಮೇಲೆ 60 ಮೀಟರ್ ಉದ್ದ ಕುಸಿದಿರುವ ಏರಿ ನಿರ್ಮಾಣಕ್ಕೆ ರಾಜ್ಯ ಸರ್ಕಾರ ₹7 ಕೋಟಿ ಬಿಡುಗಡೆ ಮಾಡಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಮಾಯಕೊಂಡ ಕ್ಷೇತ್ರ ಶಾಸಕ ಕೆ.ಎಸ್.ಬಸವಂತಪ್ಪ ದಾವಣಗೆರೆಯಲ್ಲಿ ಹೇಳಿದ್ದಾರೆ.
- ಕೆರೆ ಏರಿ ಪರಿಶೀಲನೆ ನಡೆಸಿ ಮಾಹಿತಿ ನೀಡಿದ ಮಾಯಕೊಂಡ ಕ್ಷೇತ್ರ ಶಾಸಕ ಕೆ.ಎಸ್.ಬಸವಂತಪ್ಪ - - - ಕನ್ನಡಪ್ರಭ ವಾರ್ತೆ ದಾವಣಗೆರೆ
ತಾಲೂಕಿನ ಕೊಡಗನೂರು ಕೆರೆ ಏರಿಯ ಮೇಲೆ 60 ಮೀಟರ್ ಉದ್ದ ಕುಸಿದಿರುವ ಏರಿ ನಿರ್ಮಾಣಕ್ಕೆ ರಾಜ್ಯ ಸರ್ಕಾರ ₹7 ಕೋಟಿ ಬಿಡುಗಡೆ ಮಾಡಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಶಾಸಕ ಕೆ.ಎಸ್.ಬಸವಂತಪ್ಪ ಹೇಳಿದರು.
ಮಾಯಕೊಂಡ ಕ್ಷೇತ್ರ ವ್ಯಾಪ್ತಿಯ ಕೊಡಗನೂರು ಕೆರೆಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಇತ್ತೀಚೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ಕೊಡಗನೂರು ಕೆರೆಯ ಏರಿ 140 ಮೀಟರ್ ಉದ್ದವಿದ್ದು, ಈ ಕೆರೆ ಏರಿ ಮೇಲೆ ರಾಜ್ಯ ಹೆದ್ದಾರಿ ಹಾದುಹೋಗಿದೆ. ಪ್ರತಿನಿತ್ಯ ನೂರಾರು ವಾಹನಗಳು ಓಡಾಡುವುದರಿಂದ ಕೆರೆ ಏರಿ ಮಧ್ಯೆ 60 ಮೀಟರ್ ಉದ್ದದಲ್ಲಿ ಕೆರೆ ಏರಿ ಸಡಿಲಗೊಂಡು ಕುಸಿಯುತ್ತಿದೆ. ಮಳೆಗಾಲ ಬಂದರೆ ಇನ್ನು ಹೆಚ್ಚು ಧಕ್ಕೆ ಆಗುತ್ತಿದೆ ಎಂದರು.
ಸರ್ಕಾರದ ಮೇಲೆ ಒತ್ತಡ ಹಾಕಿ ಅನುದಾನ:
ಕೆರೆ ಏರಿ ಕುಸಿದಾಗ ಅಧಿಕಾರಿಗಳು ತಾತ್ಕಾಲಿಕವಾಗಿ ದುರಸ್ತಿ ಮಾಡುತ್ತಾರೆ. ವಾಹನಗಳ ದಟ್ಟಣೆಯಿಂದ ಮತ್ತೆ ಮತ್ತೆ ಕೆರೆ ಏರಿಗೆ ಧಕ್ಕೆ ಆಗುತ್ತಿದೆ. ಹೀಗಾಗಿ, ಶಾಶ್ವತವಾಗಿ ಉಳಿಯುವ ಭದ್ರವಾದ ಕೆರೆ ಏರಿ ನಿರ್ಮಾಣ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಮೇಲೆ ಒತ್ತಡ ಹಾಕಿ ₹7 ಕೋಟಿ ಅನುದಾನ ಬಿಡುಗಡೆ ಮಾಡಿಸಿದ್ದೇನೆ. ಈಗಾಗಲೇ ಅಧಿಕಾರಿಗಳು ನೀಲನಕ್ಷೆ ತಯಾರಿಸಿದ್ದು, ಶೀಘ್ರದಲ್ಲೇ ಟೆಂಡರ್ ಕರೆದು ಕಾಮಗಾರಿ ಕೈಗೊಳ್ಳುವಂತೆ ಸಂಬಂಧಪಟ್ಟ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.
ಕೊಡಗನೂರು ಕೆರೆ ಸುಮಾರು ನೂರಾರು ಎಕರೆ ಪ್ರದೇಶ ಹೊಂದಿದೆ. 22 ಕೆರೆಗಳ ಏತ ನೀರಾವರಿ ಯೋಜನೆ ವ್ಯಾಪ್ತಿಗೆ ಈ ಕೆರೆಯು ಸೇರಿದೆ. ಇದರಿಂದಾಗಿ ಈ ಭಾಗದ ಸಾವಿರಾರು ಎಕರೆ ಪ್ರದೇಶದಲ್ಲಿ ಅಂತರ್ಜಲಮಟ್ಟ ಕಾಪಾಡುವ ಜೊತೆಗೆ ಜನ-ಜಾನುವಾರುಗಳ ಕುಡಿಯುವ ನೀರಿಗೆ ಅನುಕೂಲವಾಗಿದೆ. ಹೀಗಾಗಿ, ಕೆರೆ ಏರಿಗೆ ಯಾವುದೇ ರೀತಿ ಧಕ್ಕೆ ಆಗದಂತೆ ತಡೆಗಟ್ಟುವ ಉದ್ದೇಶದಿಂದ ಮುಂದಿನ ದಿನಗಳಲ್ಲಿ ಕೆರೆಯ ಪಕ್ಕದಲ್ಲಿ ರಾಜ್ಯ ಹೆದ್ದಾರಿ ನಿರ್ಮಾಣ ಮಾಡಿದರೆ ಕೆರೆ ಏರಿಗೆ ಯಾವುದೇ ರೀತಿಯ ಧಕ್ಕೆ ಆಗುವುದಿಲ್ಲ. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಕ್ರಮ ಕೈಗೊಳ್ಳುವುದಾಗಿ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸಣ್ಣ ನೀರಾವರಿ ಇಲಾಖೆ ಸಹಾಯಕ ಎಂಜಿನಿಯರ್ ರುದ್ರಮುನಿ, ಕೊಡಗನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿದ್ದಣ್ಣ, ಅಶೋಕ್, ಜಯಣ್ಣ, ದೇವೇಂದ್ರಪ್ಪ, ಮೂರ್ತೆಪ್ಪ, ಬಕ್ಕಣ್ಣ, ಕುಬೇರಪ್ಪ, ಲಕ್ಷ್ಮಣ್, ಶೇಕಣ್ಣ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡರು ಹಾಜರಿದ್ದರು.
- - -
ಬಾಕ್ಸ್ ಬಸಿನೀರು ಹಳ್ಳಕ್ಕೆ ಹರಿಸಬೇಕು: ಶಾಸಕ 60 ಮೀಟರ್ ಉದ್ದ ಹೊಸದಾಗಿ ಕೆರೆ ಏರಿ ನಿರ್ಮಿಸುತ್ತಿದ್ದು, ಮುಂದೆ ಯಾವುದೇ ರೀತಿ ಕೆರೆ ಏರಿಗೆ ಧಕ್ಕೆ ಆಗದಂತೆ ಬುನಾದಿಯಿಂದ ಭದ್ರವಾದ ಏರಿ ನಿರ್ಮಿಸಲಾಗುವುದು. ಜೊತೆಗೆ ಕೆರೆಯ ಬಸಿ ನೀರಿನಿಂದ ರೈತರ ಜಮೀನುಗಳು ಹಾನಿಯಾಗುತ್ತಿವೆ. ಹೀಗಾಗಿ, ಕೆರೆಯ ಸುತ್ತ ಡ್ರೇನೆಜ್ ಮಾಡಿ ಬಸಿನೀರು ಹಳ್ಳಕ್ಕೆ ಹೋಗಿ ಕೆರೆಗೆ ಸೇರುವ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಶಾಸಕ ಕೆ.ಎಸ್. ಬಸವಂತಪ್ಪ ತಿಳಿಸಿದರು.
- - - -6ಕೆಡಿವಿಜಿ33, 34ಃ:
ದಾವಣಗೆರೆ ತಾಲೂಕಿನ ಕೊಡಗನೂರು ಕೆರೆ ಏರಿಯನ್ನು ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.