ಸಕಲ ಸರ್ಕಾರಿ ಗೌರವದಿಂದ ಆರ್‌ಎಸ್‌ಐ ಮಂಜುನಾಥ ಅಂತ್ಯಕ್ರಿಯೆ

KannadaprabhaNewsNetwork |  
Published : Mar 17, 2026, 02:15 AM IST
ಆರ್‌ಎಸ್‌ಐ ಮಂಜುನಾಥ ದಾರಿಮನಿ | Kannada Prabha

ಸಾರಾಂಶ

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಬಳಿ ಭಾನುವಾರ ಬೆಳಗ್ಗೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ಪಟ್ಟಣದ ಆರ್‌ಎಸ್‌ಐ ಮಂಜುನಾಥ ದಾರಿಮನಿಯವರ ಅಂತ್ಯಕ್ರಿಯೆ ಪಟ್ಟಣದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಸೋಮವಾರ ನಡೆಯಿತು.

ಕಾರಟಗಿ: ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಬಳಿ ಭಾನುವಾರ ಬೆಳಗ್ಗೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ಪಟ್ಟಣದ ಆರ್‌ಎಸ್‌ಐ ಮಂಜುನಾಥ ದಾರಿಮನಿಯವರ ಅಂತ್ಯಕ್ರಿಯೆ ಪಟ್ಟಣದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಸೋಮವಾರ ನಡೆಯಿತು.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಬಳಿ ನಡೆದ ಲಾರಿ-ಕಾರ್ ಅಪಘಾತದಲ್ಲಿ ಮೃತಪಟ್ಟ ಮೂವರು ಪೊಲೀಸ್ ಅಧಿಕಾರಿಗಳಲ್ಲಿ ಪಟ್ಟಣದ ನಿವಾಸಿಯಾಗಿದ್ದ ಆರ್‌ಎಸ್‌ಐ ಮಂಜುನಾಥ ದಾರಿಮನಿಯವರ ಪಾರ್ಥೀವ ಶರೀರವನ್ನು ಚಳ್ಳಕೆರೆಯಿಂದ ಭಾನುವಾರ ರಾತ್ರಿ ಪಟ್ಟಣಕ್ಕೆ ತರಲಾಯಿತು.

ಪಾರ್ಥೀವ ಶರೀರ ಆಗಮಿಸುತ್ತಿರುವ ಸುದ್ದಿ ತಿಳಿಯುತ್ತಿದ್ದಂತೆ ಸಾವಿರಾರು ಜನ ಪುರಸಭೆ ಮತ್ತು ಹೊಸ ಬಸ್ ನಿಲ್ದಾಣದಿಂದ ವಾಹನದ ಹಿಂದೆ ಮನೆ ವರೆಗೆ ತೆರಳಿದರು.

ಬಾಳಿ ಬೆಳಗಬೇಕಾಗಿದ್ದ ಯುವಕ ದಾರುಣ ಅಂತ್ಯ ಕಂಡಿದ್ದು ಇಡೀ ಪಟ್ಟಣದ ಜನರು ಮಮ್ಮಲ ಮರುಗಿದರು. ಇತ್ತೀಚಿಗಷ್ಟೇ ಹಣಹಾಳ ಯುವತಿಯೊಂದಿಗೆ ಮದುವೆ ನಿಶ್ಚಿತವಾಗಿತ್ತು. ಮೇ ನಲ್ಲಿ ಮದುವೆ ಮಾಡಲು ಕುಟುಂಬದ ಹಿರಿಯರು ನಿರ್ಧರಿಸಿದರು. ಈ ಹಿನ್ನೆಲೆಯಲ್ಲಿ ಕಳೆದ ಬಾರಿ ರಜೆಯ ಮೇಲೆ ಪಟ್ಟಣಕ್ಕೆ ಬಂದ ವೇಳೆ ಮಂಜುನಾಥ ತಮ್ಮ ಭಾವಿ ಪತ್ನಿ ಜತೆ ಫೋಟೋ ಶೂಟ್ ಸಹ ಮಾಡಿಸಿಕೊಂಡಿದ್ದರು. ಆದರೀಗ ಇಡೀ ಕುಟುಂಬದ ಏಕೈಕ ಪುತ್ರ ಮಂಜುನಾಥನ ಸಾವು ಸಿಡಿಲು ಬಡಿದಂತಾಗಿದೆ.

ಪಾಲಕರ ಆಕ್ರಂದನ

ಮೃತ ಪೊಲೀಸ್ ಅಧಿಕಾರಿ ಮಂಜುನಾಥರ ಪಾರ್ಥಿವ ಶರೀರ ಮನೆಗೆ ಆಗಮಿಸುತ್ತಿದ್ದಂತೆಯೇ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ರಾತ್ರಿಯಿಡೀ ಅಧಿಕಾರಿಯ ತಂದೆ ಪರಸಪ್ಪ ದಾರಿಮನಿ, ತಾಯಿ ಬಸಮ್ಮ ಸೇರಿದಂತೆ ಕುಟುಂಬ ಸದಸ್ಯರು ಶೋಕ ಸಾಗರದಲ್ಲಿ ಮುಳುಗಿದ್ದರು. ಪಾರ್ಥಿವ ಶರೀರ ಮನೆಯ ಮುಂದೆ ಬರುತ್ತಿದ್ದಂತೆ ತಂದೆ ಪರಸಪ್ಪ ಮತ್ತು ತಾಯಿ ಬಸಮ್ಮರ ರೋಧನೆ ಮುಗಿಲು ಮುಟ್ಟಿತ್ತು. ಬಂಧು ಬಳಗ ಸೇರಿ ನೆರೆಹೊರೆಯವರ ಕಣ್ಣಿರ ಕೋಡಿ ಹರಿಯಿತು. ವೈರಿಗೂ ಇಂಥ ಸ್ಥಿತಿ ಬಾರದಿರಲಿ ಎಂದು ನೊಂದ ಗೆಳೆಯರು ಆ ದೇವರು ಬಲು ಕ್ರೂರಿ ಎಂದು ಬೇಸರ ವ್ಯಕ್ತಪಡಿಸುವುದು ಸಾಮಾನ್ಯವಾಗಿತ್ತು.

ಸೋಮವಾರ ಬೆಳಗ್ಗೆ 9ಗಂಟೆಗೆ ಇಲ್ಲಿನ ಸಿದ್ದೇಶ್ವರ ರಂಗಮಂದಿರದಲ್ಲಿ ಪಾರ್ಥೀವ ಶರೀರವನ್ನು ಅಂತಿಮ ದರ್ಶನಕ್ಕೆ ತರಲಾಯಿತು. ಡಿವೈಎಸ್‌ಪಿ ಜಾಯಪ್ಪ ನ್ಯಾಮಗೌಡರ್, ಪಿಐ ಸುಧೀರಕುಮಾರ್ ಬೆಂಕಿ, ಪಿಎಸ್‌ಐ ಕಾಮಣ್ಣ, ಪುರಸಭೆ ಅಧ್ಯಕ್ಷ ಮಂಜುನಾಥ ಮೇಗೂರು ಹಾಗೂ ಸದಸ್ಯರು, ಮುಖ್ಯಾಧಿಕಾರಿ ಸಾಬಣ್ಣ ಕಟ್ಟಿಕಾರ್, ವಿಶೇಷ ಎಪಿಎಂಸಿ ಮಾಜಿ ಅಧ್ಯಕ್ಷ ಬಿ. ಶಿವರೆಡ್ಡಿ ನಾಯಕ, ಜಿಪಂ ಮಾಜಿ ಅಧ್ಯಕ್ಷ ಅಮರೇಶ ಕುಳಗಿ, ಮಾಜಿ ಸದಸ್ಯ ವೀರೇಶ ಸಾಲೋಣಿ ಹಾಗೂ ದಲಾಲಿ ವರ್ತಕರ ಸಂಘದ ಪದಾಧಿಕಾರಿಗಳು, ಲಾರಿ ಮಾಲೀಕರ ಸಂಘ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಅಂತಿಮ ನಮನ ಸಲ್ಲಿಸಿದರು.

ಬಳಿಕ ಕೊಪ್ಪಳದಿಂದ ಆಗಮಿಸಿದ ಪೊಲೀಸ್ ಪಡೆಯಿಂದ ಮೂರು ಸುತ್ತು ಗುಂಡು ಹಾರಿಸುವ ಮೂಲಕ ಸಕಲ ಸರ್ಕಾರಿ ಗೌರವ ಸಲ್ಲಿಸಲಾಯಿತು. ನಂತರ ಅಪಾರ ಗೆಳೆಯರು, ಬಂಧುಬಳಗದ ನಡುವೆ ಪಟ್ಟಣದ ರುದ್ರಭೂಮಿಯಲ್ಲಿ ಮಂಜುನಾಥ ಅಂತ್ಯ ಸಂಸ್ಕಾರ ನಡೆಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ, ಧಾರವಾಡ ಮಹಾನಗರ ಅಭಿವೃದ್ಧಿಗೆ ಸಪ್ತಸೂತ್ರ
ಹಾನಗಲ್ಲಿನ 14 ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ಧತೆ