ಲಕ್ಷ್ಮೇಶ್ವರ: ಆರ್‌ಎಸ್‌ಎಸ್ ನಿಷೇಧ ಮಾಡುವುದು ಪ್ರಿಯಾಂಕ್ ಖರ್ಗೆ ಮತ್ತು ಅವರ ತಂದೆಯವರಿಂದ ಸಾಧ್ಯವಿಲ್ಲ. ಜನರ ಮನಸ್ಸಿನಲ್ಲಿ ಬೇರೂರಿರುವ ಆರ್‌ಎಸ್‌ಎಸ್ ಈಗಾಗಲೆ ೨-೩ ಬಾರಿ ನಿಷೇಧ ವಿಧಿಸಿದ್ದರೂ ಎಲ್ಲ ಕಂಟಕಗಳನ್ನು ದೂರ ಮಾಡಿಕೊಂಡು ಮತ್ತೆ ಎದ್ದು ನಿಂತಿದೆ. ಇದನ್ನು ನಿಷೇಧ ಮಾಡುವ ಹೇಳಿಕೆ ನೀಡುವುದು ಮೂರ್ಖತನ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.
ಆರ್‌ಎಸ್‌ಎಸ್ ಚಟುವಟಿಕೆಗೆ ಸರ್ಕಾರಿ ಜಾಗ ಬೇಕೆಂದು ಇಲ್ಲವಲ್ಲ, ದೇಶದಲ್ಲಿ ಸಾಕಷ್ಟು ಜಾಗಗಳಿವೆ. ಅಲ್ಲಿ ಕಾರ್ಯಕ್ರಮ ನಡೆಸುತ್ತೇವೆ. ಯಾರು ತಡೆಯುತ್ತಾರೋ ನೋಡಿಕೊಳ್ಳುತ್ತೇವೆ ಎಂದು ಸವಾಲು ಹಾಕಿದರು. ಆರ್‌ಎಸ್‌ಎಸ್ ಅನ್ನು ಎಷ್ಟು ಕೆಣಕುತ್ತಿರೋ ಅಷ್ಟು ಅದು ಪ್ರಬಲವಾಗಿ ಬೆಳೆಯುತ್ತದೆ. ಇದು ಸೂರ್ಯನ ಕಡೆ ಉಗುಳಿದಂತೆ, ಅದು ನಿಮ್ಮ ಮುಖಕ್ಕೆ ಸಿಡಿಯುತ್ತದೆ. ಆರ್‌ಎಸ್‌ಎಸ್ ಜತೆ ಸಂಘರ್ಷಕ್ಕೆ ಇಳಿದರೆ ನೀವೇ ಹಿಂದೂ ದ್ರೋಹಿಗಳಾಗುತ್ತೀರಿ. ದಲಿತ ಸಂಘಟನೆಗಳು, ಭೀಮ ಆರ್ಮಿ ಎನ್ನುವ ಸಂಘಟನೆಗಳನ್ನು ಸಂಘರ್ಷಕ್ಕೆ ಇಳಿಯುವಂತೆ ಮಾಡುತ್ತಿದ್ದೀರಿ. ಇದನ್ನು ಜನರು ಕ್ಷಮಿಸುವುದಿಲ್ಲ. ಯಾವುದೇ ಸರ್ಕಾರಿ ಜಾಗದಲ್ಲಿ ಕಾರ್ಯಕ್ರಮ ಮಾಡಬಾರದು ಎನ್ನುತ್ತೀರಿ, ಇದು ದೇಶದ ಹಿಂದೂಗಳ ಜಾಗ, ಇಲ್ಲಿ ಕಾರ್ಯಕ್ರಮ ಮಾಡಬಾರದು ಎನ್ನಲು ನೀವ್ಯಾರು ಎಂದು ಪ್ರಶ್ನಿಸಿದರು.
ಆರ್‌ಎಸ್‌ಎಸ್ ಬಗ್ಗೆ ಖರ್ಗೆ ಅವರು ನೀಡಿದ ಹೇಳಿಕೆಯನ್ನು ವಾಪಸ್ ಪಡೆದು ಬಹಿರಂಗ ಕ್ಷಮೆಯಾಚಿಸಬೇಕು. ಆರ್‌ಎಸ್‌ಎಸ್ ರಾಜಕೀಯ ಸಂಘಟನೆಯಲ್ಲ, ಇದರಲ್ಲಿ ಎಲ್ಲ ಪಕ್ಷದವರು ಇದ್ದಾರೆ. ಮುಸ್ಲಿಮರು ಈ ಕಾಂಗ್ರೆಸ್‌ನಲ್ಲಿ ಹೊಕ್ಕು ಹಿಂದೂ ಸಂಘಟನೆ, ಒಗ್ಗಟ್ಟು ಒಡೆಯುವ ಕಾರ್ಯ ಮಾಡುತ್ತಿವೆ ಎಂದು ಆರೋಪಿಸಿದರು.ಹಿಂದೂ ಹಬ್ಬಗಳ ಆಚರಣೆಗೆ ಸರ್ಕಾರ ನೂರಾರು ಕರಾರುಗಳನ್ನು ಹಾಕುತ್ತಿದೆ. ಮುಸ್ಲಿಮರ ಪ್ರಾರ್ಥನೆ ವೇಳೆ ಧ್ವನಿವರ್ಧಕ ಬಳಸುವುದುನ್ನು ಮೊದಲು ತಡೆಯಿರಿ, ಇಲ್ಲದಿದ್ದಲ್ಲಿ ನಾವು ಡಿಜೆ ಹಚ್ಚುವುದು ನಿಲ್ಲಿಸುವುದಿಲ್ಲ, ಗಣೇಶನ ಹಬ್ಬಕ್ಕೆ ಅನುಮತಿ ಸಹ ಮುಂದಿನ ವರ್ಷದಿಂದ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದರು.