ಸಂಡೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಾಖೆಯು ವ್ಯಕ್ತಿ ಉತ್ತಮ ವ್ಯಕ್ತಿತ್ವ, ಸಂಸ್ಕಾರ ಗಳಿಸಿಕೊಳ್ಳುವ ಕೇಂದ್ರ ಎಂದು ಆರ್‌ಎಸ್‌ಎಸ್ ಸಂಘಟನೆಯ ವಿಭಾಗ ಪ್ರಚಾರಕ ಸೋಮಶೇಖರ್ ಒಣರೊಟ್ಟಿ ಅಭಿಪ್ರಾಯಪಟ್ಟರು.ಪಟ್ಟಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಭಾನುವಾರ ಹಮ್ಮಿಕೊಂಡಿದ್ದ ವಿಜಯದಶಮಿ ಉತ್ಸವ, ಪಥ ಸಂಚಲನಾ ಕಾರ್ಯಕ್ರಮದ ನಂತರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾವು ಹೇಗೆ ಸ್ವಾತಂತ್ರ್ಯ ಗಳಿಸಿಕೊಂಡೆವು ಎನ್ನುವುದರ ಜೊತೆಗೆ ಅದನ್ನು ಹಿಂದೆ ಏಕೆ ಕಳೆದುಕೊಂಡಿದ್ದೆವು ಎನ್ನುವುದನ್ನು ಯೋಚಿಸಬೇಕಿದೆ. ನಮ್ಮಲ್ಲಿನ ಅಸಂಘಟಿತತನ, ಸ್ವಾರ್ಥ, ಲಾಲಸೆ, ಬುದ್ಧಿ ಭ್ರಷ್ಟತೆ ಮುಂತಾದ ಕಾರಣಗಳಿಂದ ಪರಕೀಯರು ನಮ್ಮ ದೇಶ ಆಳುವಂತಾಯಿತು. ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ವೀರ ಸಿಂಧೂರ ಲಕ್ಷ್ಮಣ ಮುಂತಾದವರ ಅವನತಿಗೆ ನಮ್ಮವರೇ ಕಾರಣರಾದರು ಎಂದರು.ಮುಂದಿನ ವರ್ಷ ಸಂಘಕ್ಕೆ ೧೦೦ ವರ್ಷ ತುಂಬಲಿದೆ. ದೇಶದ ಮನೆ, ಮನಗಳಲ್ಲಿ ಹಿಂದುತ್ವದ ವಾತಾವರಣ ನಿರ್ಮಾಣ, ಜಾತಿ ವೈಷಮ್ಯ ತೊಡೆದು ಹಾಕುವುದು, ಗ್ರಾಮಗಳ ವಿಕಾಸ, ಸ್ವದೇಶಿ ವಸ್ತುಗಳ ಬಳಕೆ, ಸ್ವಾವಲಂಬನೆ, ನಾಗರಿಕ ಶಿಷ್ಟಾಚಾರ ಜಾರಿಗೆ ತರುವುದು, ಕಾನೂನು ಪಾಲನೆ ಮುಂತಾದ ಅಂಶಗಳನ್ನು ಅನುಷ್ಠಾನಗೊಳಿಸುವ ಉದ್ದೇಶ ಸಂಘದ್ದು. ಎಲ್ಲರೂ ಒಟ್ಟಾಗಿ ಭಾರತ ಮಾತೆಯ ರಥ ಎಳೆಯೋಣ ಎಂದರು.
ಶಂಭುಪ್ರಸಾದ್ ವೇದಮೂರ್ತಿ ಹಿರೇಮಠ ಅಧ್ಯಕ್ಷತೆಯನ್ನು ವಹಿಸಿದ್ದರು.ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಸಂಘದ ಗಣವೇಶಧಾರಿಗಳಿಂದ ಪಟ್ಟಣದ ಮುಖ್ಯ ಬೀದಿಗಳಲ್ಲಿ ಪಥ ಸಂಚಲನ ನಡೆಸಲಾಯಿತು.
ಸಂಘದ ಮುಖಂಡರಾದ ಔದುಂಬರ ಭಟ್, ಕರಡಿ ಯರಿಸ್ವಾಮಿ, ರಾಮರಾವ್, ನಾಗರಾಜ, ವಾದಿರಾಜ್, ದುರುಗಪ್ಪ, ವಿನಾಯಕ, ಮುಖಂಡರಾದ ಮಣಿಕಂಠ, ಆರ್.ಟಿ. ರಘುನಾಥ್, ದರೋಜಿ ರಮೇಶ್, ವೆಂಕಟಸುಬ್ಬಯ್ಯ, ಜೆ.ಎಂ. ಪರಮೇಶ್ವರ್ ಸೇರಿದಂತೆ ಹಲವು ಮುಖಂಡರು, ಸಂಘದ ಹಲವು ಗಣಾಧಾರಿಗಳು ಉಪಸ್ಥಿತರಿದ್ದರು.ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗಣವೇಶಧಾರಿಗಳಿಂದ ಪಥ ಸಂಚಲನಾ ಕಾರ್ಯಕ್ರಮ ಜರುಗಿತು.