ಕನ್ನಡಪ್ರಭ ವಾರ್ತೆ ಬಾಗೇಪಲ್ಲಿ
ಸಂವಿಧಾನ ಪೀಠಿಕೆಯಿಂದ ಸಮಾಜವಾದಿ ಮತ್ತು ಜಾತ್ಯಾತೀತ ಪದಗಳನ್ನು ಕಿತ್ತುಹಾಕಬೇಕೆಂದು ಆರ್‍ಎಸ್‍ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಹೇಳಿಕೆ ಖಂಡಸಿ, ಸಿಪಿಐ(ಎಂ) ಪಕ್ಷದ ಕಾರ್ಯಕರ್ತರು ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.ಸಿಪಿಐ(ಎಂ) ಕಾರ್ಯಕರ್ತರು ಪಕ್ಷದ ಕಚೇರಿ ಸುಂದರಯ್ಯ ಭವನದಿಂದ ಪಟ್ಟಣದ ಮುಖ್ಯ ರಸ್ತೆಯಲ್ಲಿ ಬೈಕ್ ರ್‍ಯಾಲಿ ನಡೆಸಿ, ಆರ್ ಎಸ್ ಎಸ್ ಪ್ರಧಾನ ಕಾರ್ಯದರ್ಶಿ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಬಂದು ಅಂಬೇಡ್ಕರ್ ಪುತ್ಥಳಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಸಿಪಿಐ(ಎಂ) ಮುಖಂಡ ಎಂ.ಪಿ.ಮುನಿವೆಂಕಟಪ್ಪ, ಆರ್ ಎಸ್ ಎಸ್ ನಿರಂತರವಾಗಿ ಸಂವಿಧಾನದ ಮೇಲೆ ದಾಳಿ ನಡೆಸುವ ಮೂಲಕ ಹಿಂದೂ ರಾಷ್ಟ್ರವನ್ನಾಗಿಸುವ ಹಾಗೂ ಇಡೀ ಸಂವಿಧಾನವನ್ನೇ ಬುಡಮೇಲು ಮಾಡುವ ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿದರಲ್ಲದೆ, ಸಂವಿಧಾನದ ಪೀಠಿಕೆಯಿಂದ ಸಮಾಜವಾದ ಮತ್ತು ಜಾತ್ಯಾತೀತ ಪದಗಳನ್ನು ಕಿತ್ತುಹಾಕಬೇಕೆಂದು ಹೇಳಿಕೆ ನೀಡಿರುವ ಆರ್ ಎಸ್ ಎಸ್‍ನ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.ತುರ್ತು ಪರಿಸ್ಥಿತಿ ವೇಳೆ ಸಂವಿಧಾನದ ಪೀಠಿಕೆಗೆ ಸೇರಿಸಲಾದ ಸಮಾಜವಾದ ಮತ್ತು ಜಾತ್ಯಾತೀತ ಪದಗಳು ಭಾರತದ ಪ್ರಜಾತಂತ್ರ ವ್ಯವಸ್ಥೆ ಪ್ರತಿಪಾದಿಸುವ ಸಮಾನತೆ, ಸೌಹಾರ್ದತೆ ಮತ್ತು ಸಮಗ್ರ ಅಭಿವೃದ್ಧಿಯ ಅಡಿಗಲ್ಲುಗಳಾಗಿವೆ ಆದರೆ ಆರೆಸ್ಸೆಸ್ ಎಂದಿಗೂ ಸಂವಿಧಾನವನ್ನು ಒಪ್ಪಿಲ್ಲ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗದೇ ಇರುವ ಆರ್ ಎಸ್ ಎಸ್ ನವರು ಮೊದಲನಿಂದಲೂ ಸಂವಿಧಾನ ವಿರೋಧಿಗಳಾಗಿಯೇ ನಡೆದುಕೊಂಡು ಬಂದಿದ್ದಾರೆ. ಅವರಿಗೆ ಮತ್ತು ಬಿಜೆಪಿಗರಿಗೆ ಹಿನ್ನಡೆಯಾಗುವ ಸಂದರ್ಭದಲ್ಲಿ ಸಂವಿಧಾನದ ಬಗ್ಗೆ ಇಂಥ ಮಾತನ್ನಾಡುವ ಚಾಳಿ ಮೈಗೂಡಿಸಿಕೊಂಡಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಪಿಐ(ಎಂ) ಮುಖಂಡ ಚೆನ್ನರಾಯಪ್ಪ ಮಾತನಾಡಿ, ದೇಶದಲ್ಲಿ ತುರ್ತು ಪರಿಸ್ಥಿತಿ ವೇಳೆ ಆರ್ ಎಸ್ ಎಸ್ ನವರು ಅಂದಿನ ಪ್ರಧಾನಮಂತ್ರಿ ಇಂದಿರಾ ಗಾಂಧಿಯವರ ಬಾಲಂಗೋಚಿಗಳಾಗಿದ್ದವರು, ಇಂದು ತುರ್ತು ಪರಿಸ್ಥಿತಿ ವಿರುದ್ಧ ಜನಾಂದೋಲನ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ ಎಂದು ಟೀಕಿಸಿದ ಅವರು, ಸಂವಿಧಾನದ ಪೀಠಿಕೆಯನ್ನು ನಾಶ ಮಾಡಲು ಆರ್ ಎಸ್ ಎಸ್ ಪಿತೂರಿ ನಡೆಸುತ್ತಿದೆ. ಇದರಿಂದ ದೇಶಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಎಂದರು.ದಲಿತ ಹಕ್ಕುಗಳ ಸಮಿತಿ ಬಿಳ್ಳೂರು ನಾಗರಾಜು, ಆರ್‍ಎಸ್‍ಎಸ್‍ನವರು ಸಂವಿಧಾನ ವಿರೋಧಿ ಹೇಳಿಕೆಗಳಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿ, ಜಾತಿ ಮತ್ತು ಧರ್ಮದ ಭೇದವಿಲ್ಲದೆ ಎಲ್ಲರನ್ನೂ ಸಮಾನವಾಗಿ ಕಾಣುವುದು, ಸಾಮಾಜಿಕ ಮತ್ತು ಆರ್ಥಿಕವಾಗಿ ಎಲ್ಲರಿಗೂ ನ್ಯಾಯ ಒದಗಿಸುವುದೇ ಜಾತ್ಯತೀತತೆ, ಸಮಾಜವಾದ. ಇಂಥ ಪದಗಳನ್ನು ಸಂವಿಧಾನದ ಪೀಠಿಕೆಯಿಂದ ತೆಗೆಯುವಂತೆ ಆರ್ ಎಸ್ ಎಸ್ ನ ಪ್ರಧಾನ ಕಾರ್ಯದರ್ಶಿ ನೀಡಿರುವ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಲ್ಲದೆ ಈ ಹೇಳಿಕೆಯನ್ನು ವಾಪಸ್ ಪಡೆಯುವಂತೆ ಆಗ್ರಹಿಸಿದರು.
ಸಿಪಿಐ(ಎಂ) ಮುಖಂಡರಾದ ವಾಲ್ಮೀಕಿ ಅಶ್ವತ್ಥಪ್ಪ, ಮುನಿಸ್ವಾಮಿ, ಕೃಷ್ಣಪ್ಪ, ರಾಮಲಿಂಗಪ್ಪ, ಅತ್ತಾವುಲ್ಲ ಮತ್ತಿತರರು ಇದ್ದರು.