ಸಿದ್ದರಾಮಯ್ಯ ಬೆಂಬಲಿಸದೆ ಬೇರೆಆಯ್ಕೆಯಿಲ್ಲ : ಡಿ.ಕೆ.ಶಿವಕುಮಾರ್‌

KannadaprabhaNewsNetwork | Updated : Jul 03 2025, 06:29 AM IST
 DK Shivakumar

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಾನು ಬೆಂಬಲ ನೀಡಲೇಬೇಕು, ಬೆಂಬಲ ನೀಡುತ್ತೇನೆ. ಐ ಹ್ಯಾವ್‌ ನೋ ಅದರ್‌ ಆಪ್ಷನ್‌ (ನನಗೆ ಬೇರೆ ಆಯ್ಕೆಯಿಲ್ಲ) ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ. ಜತೆಗೆ, ಮುಂದಿನದು ಹೈಕಮಾಂಡ್‌ ತೀರ್ಮಾನ. ಅದಕ್ಕೆ ನಾನು ಬದ್ಧನಾಗಿರುವೆ ಎಂದೂ ಹೇಳಿದ್ದಾರೆ.

  ಬೆಂಗಳೂರು/ನಂದಿ ಬೆಟ್ಟ :  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಾನು ಬೆಂಬಲ ನೀಡಲೇಬೇಕು, ಬೆಂಬಲ ನೀಡುತ್ತೇನೆ. ಐ ಹ್ಯಾವ್‌ ನೋ ಅದರ್‌ ಆಪ್ಷನ್‌ (ನನಗೆ ಬೇರೆ ಆಯ್ಕೆಯಿಲ್ಲ) ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ. ಜತೆಗೆ, ಮುಂದಿನದು ಹೈಕಮಾಂಡ್‌ ತೀರ್ಮಾನ. ಅದಕ್ಕೆ ನಾನು ಬದ್ಧನಾಗಿರುವೆ ಎಂದೂ ಹೇಳಿದ್ದಾರೆ.

ಐದು ವರ್ಷದ ಅವಧಿಗೂ ನಾನೇ ಮುಖ್ಯಮಂತ್ರಿ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಬುಧವಾರ ಪ್ರತಿಕ್ರಿಯೆ ನೀಡಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಈ ಹೇಳಿಕೆಗೆ ನಾನು ಆಕ್ಷೇಪಿಸುವುದಿಲ್ಲ. ಐ ಹ್ಯಾವ್‌ ನೋ ಅದರ್‌ ಆಪ್ಷನ್‌. ನಾನು ಅವರಿಗೆ ಬೆಂಬಲ ನೀಡುತ್ತೇನೆ ಎಂದರು

ಜತೆಗೆ, ಮುಂದಿನದು ಹೈಕಮಾಂಡ್‌ ನಿರ್ಧಾರ. ಅವರ ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ. ಲಕ್ಷಾಂತರ ಕಾರ್ಯಕರ್ತರು ಪಕ್ಷವನ್ನು ಬೆಂಬಲಿಸಿ ಕೆಲಸ ಮಾಡಿದ್ದಾರೆ. ಪಕ್ಷದ ತೀರ್ಮಾನ ಬೆಂಬಲಿಸಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಇದಕ್ಕೂ ಮುನ್ನ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್‌ ಅವರು, ಮುಂದಿನ ಮುಖ್ಯಮಂತ್ರಿ ಶಿವಕುಮಾರ್‌ ಎಂದು ಹೇಳುವಂತೆ ನಾನು ಯಾರಿಗೂ ತಿಳಿಸಿಲ್ಲ. ನನ್ನನ್ನು ಮುಖ್ಯಮಂತ್ರಿ ಮಾಡಿ ಎಂದು ಹೇಳುವ ಅವಶ್ಯಕತೆಯೂ ಇಲ್ಲ. ಈ ರೀತಿ ಯಾರೆಲ್ಲ ಮಾತನಾಡುತ್ತಾರೋ ಅವರಿಗೆ ಪಕ್ಷ ನೋಟಿಸ್ ನೀಡುತ್ತದೆ ಎಂದರು.

ನಮ್ಮದೇನಿದ್ದರೂ 2028ರಲ್ಲಿ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ ಸರ್ಕಾರವನ್ನು ಅಧಿಕಾರಕ್ಕೆ ತರುವುದು ಗುರಿ. ಅದಕ್ಕೆ ಪಕ್ಷ ಸಂಘಟನೆ ಕಾರ್ಯವನ್ನು ನಡೆಸಬೇಕಿದೆ. ಈಗಾಗಲೇ ಚಾಲನೆಯನ್ನೂ ನೀಡಲಾಗಿದೆ ಎಂದು ತಿಳಿಸಿದರು.

ಪ್ರಸ್ತುತ ಪಕ್ಷದಲ್ಲಿ ಯಾವುದೇ ಅಸಮಧಾನವಿಲ್ಲ. ಪಕ್ಷ ಸಂಘಟನೆ ಸೇರಿ ಪಕ್ಷದೊಳಗಿನ ಆಗುಹೋಗುಗಳ ಕುರಿತು ಗಮನಿಸಲು ರಣದೀಪ್‌ಸಿಂಗ್‌ ಸುರ್ಜೇವಾಲಾ ಅವರು ರಾಜ್ಯಕ್ಕೆ ಆಮಿಸಿದ್ದಾರೆ. ಈಗಿನಿಂದಲೇ 2028ರ ಚುನಾವಣೆಗೆ ತಯಾರಿ ನಡೆಸುವ ಕುರಿತು ಚರ್ಚೆ ನಡೆಸಲಾಗುತ್ತಿದೆ. ಅದಕ್ಕೆ ಸಂಬಂಧಿಸಿ ಜವಾಬ್ದಾರಿಗಳ ನಿರ್ವಹಣೆ ಕುರಿತು ಸುರ್ಜೇವಾಲ ಅವರು ಶಾಸಕರೊಂದಿಗೆ ಸಭೆ ಮಾಡುತ್ತಿದ್ದಾರೆ ಎಂದರು.

ಶಾಸಕ ಇಕ್ಬಾಲ್‌ ಹುಸೇನ್‌ಗೆ ನೋಟಿಸ್‌ ನೀಡಿರುವ ಕುರಿತು ಪ್ರತಿಕ್ರಿಯಿಸಿ, ಪಕ್ಷದಲ್ಲಿ ಶಿಸ್ತು ಮುಖ್ಯ. ಯಾರೆಲ್ಲ ಈ ಮಾತನಾಡುತ್ತಾರೆ ಅವರೆಲ್ಲರಿಗೂ ನೋಟಿಸ್‌ ನೀಡಬೇಕಾಗುತ್ತದೆ. ನನ್ನ ಹೆಸರು ಹೇಳಿ, ಮುಖ್ಯಮಂತ್ರಿ ಸ್ಥಾನದಲ್ಲಿ ಸಿದ್ದರಾಮಯ್ಯ ಅವರಿದ್ದು, ಹೀಗಿರುವಾಗ ಬೇರೆ ಹೆಸರು ಏಕೆ ಎಂದು ಪ್ರಶ್ನಿಸಿದರು.

Read more Articles on