ರಾಜ್ಯದ ವಿವಿಧೆಡೆ ಆರ್‌ಎಸ್‌ಎಸ್‌ ಪಥ ಸಂಚಲನ

KannadaprabhaNewsNetwork |  
Published : Nov 02, 2025, 03:00 AM IST
RSS

ಸಾರಾಂಶ

ಸಂಘದ ಶತಮಾನೋತ್ಸವ ಹಿನ್ನೆಲೆಯಲ್ಲಿ ಶನಿವಾರ ಶಿವಮೊಗ್ಗ ಜಿಲ್ಲೆ ಶಿರಾಳಕೊಪ್ಪ, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆ ಗಂಗಾವತಿಗಳಲ್ಲಿ ಆರ್‌ಎಸ್‌ಎಸ್‌ ಗಣವೇಷಧಾರಿಗಳು ಆಕರ್ಷಕ ಪಥ ಸಂಚಲನ ನಡೆಸಿದರು.

 ಬೆಂಗಳೂರು :  ಸಂಘದ ಶತಮಾನೋತ್ಸವ ಹಿನ್ನೆಲೆಯಲ್ಲಿ ಶನಿವಾರ ಶಿವಮೊಗ್ಗ ಜಿಲ್ಲೆ ಶಿರಾಳಕೊಪ್ಪ, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆ ಗಂಗಾವತಿಗಳಲ್ಲಿ ಆರ್‌ಎಸ್‌ಎಸ್‌ ಗಣವೇಷಧಾರಿಗಳು ಆಕರ್ಷಕ ಪಥ ಸಂಚಲನ ನಡೆಸಿದರು.ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಲ್ಲಿ ಪಟ್ಟಣದ ವಾಲ್ಮೀಕಿ ಭವನ ಮತ್ತು ಬಳ್ಳಿಗಾವಿ ಕ್ರಾಸ್, ಎರಡು ಕಡೆಗಳಿಂದ ಆರ್‌ಎಸ್‌ಎಸ್‌ ಸ್ವಯಂ ಸೇವಕರು ಆಕರ್ಷಕ ಪಥ ಸಂಚಲನ ನಡೆಸಿದರು.

ಪಿಐಟಿಐ ಕಾಲೇಜು ಮೈದಾನದಲ್ಲಿ ಬಹಿರಂಗ ಸಭೆ

 ಬಳಿಕ, ಪಿಐಟಿಐ ಕಾಲೇಜು ಮೈದಾನದಲ್ಲಿ ಬಹಿರಂಗ ಸಭೆ ನಡೆಯಿತು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಲೆನಾಡು ಅಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷರಾದ ಗುರುಮೂರ್ತಿ ಮತ್ತು ಪದ್ಮನಾಭ್ ಭಟ್ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್ ಮೊದಲಾದವರು ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದರು.ರಾಯಚೂರಿನಲ್ಲಿ ನಗರದ ಗದ್ವಾಲ್ ರಸ್ತೆಯಿಂದ ವಾಲ್ಕಾಟ್ ಮೈದಾನದವರೆಗೆ ಗಣವೇಷಧಾರಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಪ್ರತಿ ಗಲ್ಲಿಯಲ್ಲೂ ಹೂಮಳೆ ಸುರಿಸಿ, ಗಣವೇಷಧಾರಿಗಳಿಗೆ ಭವ್ಯ ಸ್ವಾಗತ‌‌ ಕೋರಲಾಯಿತು. ಪಥಸಂಚಲನದಲ್ಲಿ 2 ಸಾವಿರಕ್ಕೂ ಹೆಚ್ಚು ಗಣವೇಷಧಾರಿಗಳು ಪಾಲ್ಗೊಂಡಿದ್ದರು. ಗಂಗಾವತಿಯಲ್ಲಿ ನಡೆದ ಪಥಸಂಚಲನದಲ್ಲಿ ಶಾಸಕ ಜನಾರ್ಧನ ರೆಡ್ಡಿ, ಮಾಜಿ ಸಂಸದ ಶಿವರಾಮಗೌಡ ಪಾಟೀಲ್, ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ, ಬಸವರಾಜ ದಡೇಸಗೂರು ಸೇರಿ ಸಾವಿರಾರು ಜನರು ಭಾಗಿಯಾಗಿದ್ದರು. ಈ ಮಧ್ಯೆ, ಗಾಂಧಿ ವೃತ್ತದಲ್ಲಿ ಸ್ವಯಂ ಸೇವಕರ ಎರಡು ತಂಡಗಳು ಬರುತ್ತಿದ್ದಂತೆ ಎದುರುಗಡೆ ವಿಪ ಸದಸ್ಯೆ ಹೇಮಲತಾ ನಾಯಕ ಮತ್ತು ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸ್ಗೂರು ಕಾರು ಬಂದಿದ್ದರಿಂದ ಪಥ ಸಂಚಲನಕ್ಕೆ ಅಡ್ಡಿಯಾಯಿತು. ಇದರಿಂದ ಆಕ್ರೋಶಗೊಂಡ ಗಣವೇಷಧಾರಿಗಳು, ಇವರಿಗೆ ಪ್ರವೇಶ ನೀಡಿದ ಪೊಲೀಸರ ಮೇಲೆ ಹರಿಹಾಯ್ದರು.

ಚಿತ್ತಾಪುರ ಆಯ್ತು, ಈಗ ಕೆಂಭಾವಿಯಲ್ಲಿ ತಕರಾರು

 ಯಾದಗಿರಿ/ಕೆಂಭಾವಿ :  ಚಿತ್ತಾಪುರ, ಗುರುಮಠಕಲ್‌ ಬಳಿಕ ಈಗ ಯಾದಗಿರಿ ಜಿಲ್ಲೆಯ ಕೆಂಭಾವಿಯಲ್ಲೂ ಆರ್‌ಎಸ್‌ಎಸ್‌ ಮತ್ತು ದಲಿತ ಸಂಘಟನೆಗಳ ನಡುವೆ ಮೆರವಣಿಗೆ ನಡೆಸಲು ಜಿದ್ದಾಜಿದ್ದಿ ಏರ್ಪಟ್ಟಿದೆ. ಸಂಘದ ಶತಮಾನೋತ್ಸವ ಹಿನ್ನೆಲೆಯಲ್ಲಿ ನ.4ರಂದು ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಕೆಂಭಾವಿಯಲ್ಲಿ ಪಥಸಂಚಲನಕ್ಕೆ ಅನುಮತಿ ಕೋರಿ ಆರ್‌ಎಸ್‌ಎಸ್‌ ಅರ್ಜಿ ಸಲ್ಲಿಸಿದೆ. ಇದರ ಬೆನ್ನಲ್ಲೇ, ಅದೇ ದಿನ ತಮಗೂ ಪಥಸಂಚಲನಕ್ಕೆ ಅನುಮತಿ ಕೊಡಿ ಎಂದು ದಲಿತಪರ ಸಂಘಟನೆಗಳು ಅರ್ಜಿ ಸಲ್ಲಿಸಿದ್ದು, ಹೊಸ ಬಿಕ್ಕಟ್ಟು ಸೃಷ್ಟಿಯಾಗಿದೆ.

ತಾಲೂಕು ಆಡಳಿತವು ಶನಿವಾರ ಆರ್‌ಎಸ್‌ಎಸ್‌ ಹಾಗೂ ಡಿಎಸ್‌ಎಸ್‌ ಮುಖಂಡರು ಜೊತೆ ಪ್ರತ್ಯೇಕ ಶಾಂತಿ ಸಭೆ ಆಯೋಜಿಸಲಾಗಿತ್ತು. ಆದರೆ, ಶಾಂತಿಸಭೆಗಳು ಫಲಪ್ರದವಾಗಿಲ್ಲ.

ಕೆಂಭಾವಿಯಲ್ಲಿ ಆರ್‌ಎಸ್‌ಎಸ್‌ ಪಥಸಂಚಲನಕ್ಕೆ ವಿರೋಧ ವ್ಯಕ್ತಪಡಿಸಿರುವ ದಲಿತಪರ ಸಂಘಟನೆಗಳು, ಆರ್‌ಎಸ್‌ಎಸ್‌ ಪಥಸಂಚಲನ ನಡೆಸುವ ದಿನವೇ (ನ.4) ತಾವೂ ಪಥಸಂಚಲನ ನಡೆಸುವುದಾಗಿ ಪಟ್ಟು ಹಿಡಿದಿವೆ. ಜಿಲ್ಲಾಡಳಿತ ಅನುಮತಿ ಕೊಟ್ಟರೂ ಸರಿ, ಕೊಡದೇ ಇದ್ದರೂ ಸರಿ, ಅಂದು (ನ.4) ಆರ್‌ಎಸ್‌ಎಸ್‌ ಪಥಸಂಚಲನಕ್ಕೆ ಕೌಂಟರ್ ಕೊಡುವುದಾಗಿ ದಲಿತಪರ ಸಂಘಟನೆಗಳು ಎಚ್ಚರಿಕೆ ನೀಡಿವೆ.

ಆರ್‌ಎಸ್‌ಎಸ್ ಪಥಸಂಚಲನ ದಿನವೇ ಬೇರೆಯವರು ಪಥಸಂಚಲನ ಮಾಡುವುದು ಅಥವಾ ಕೇಳುವುದು ತಪ್ಪು. ಮೊದಲು ಅರ್ಜಿ ಸಲ್ಲಿಸಿದವರಿಗೆ ಅನುಮತಿ ನೀಡುವಂತೆ ಜಿಲ್ಲಾಡಳಿತಕ್ಕೆ ತಿಳಿ ಹೇಳಿದ್ದೇನೆ.

-ಶರಣಬಸಪ್ಪ ಗೌಡ ದರ್ಶನಾಪುರ, ಸಚಿವ.

PREV
Read more Articles on

Recommended Stories

ಪಾಳು ಬಿದ್ದ ರೈತ ಸಭಾ ಭವನ ಕಟ್ಟಡ
ಕೊಂಕಣಿ ನೆಲದಲ್ಲಿ ಕನ್ನಡದಲ್ಲಿ ಸಹಿ ಸಂಗ್ರಹ, ಕದಂಬ ವೃಕ್ಷ ಪೂಜಿಸಿ ರಾಜ್ಯೋತ್ಸವ ಆಚರಣೆ