ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಬಳಿ ಸಮಾವೇಶಗೊಂಡ ಗಣವೇಷಧಾರಿಗಳು ಸ್ಥಳದಲ್ಲಿ ಧ್ವಜವಂದನೆ ಬಳಿಕ ಪಥ ಸಂಚಲನ ಆರಂಭಿಸಿದರು. ಸರತಿ ಸಾಲಿನಲ್ಲಿ ನಿಂತ ಶಿಸ್ತಿನ ಸಿಫಾಯಿಗಳಂತೆ ಪಥ ಸಂಚಲನದಲ್ಲಿ ಸಾಗಿದರು.
ನಂತರ ಪಥ ಸಂಚಲನ ವಿನೋಭಾ ರಸ್ತೆ, ಮೈಸೂರು ಬೆಂಗಳೂರು ಹೆದ್ದಾರಿ, ಜಯಚಾಮರಾಜ ಒಡೆಯರ್ ವೃತ್ತ, ಮಹಾವೀರ ವೃತ್ತ, ವಿಶ್ವೇಶ್ವರಯ್ಯ ರಸ್ತೆ, ಹೊಸಹಳ್ಳಿ ವೃತ್ತ, ನೂರಡಿ ರಸ್ತೆ ಮಾರ್ಗವಾಗಿ ಶ್ರೀ ಕನ್ನಿಕಾ ಪರಮೇಶ್ವರಿ ದೇವಾಲಯದ ಬಳಿ ತಲುಪಿ ಸಂಪನ್ನಗೊಂಡಿತು.ಗಣವೇಷಧಾರಿಗಳು ಶಿಸ್ತಿನ ಶಿಪಾಯಿಗಳಂತೆ ರಸ್ತೆಯಲ್ಲಿ ಸಾಗುತ್ತಿದ್ದರೆ, ನಾಗರೀಕರು ಮಹಡಿಗಳ ಮೇಲಿನಿಂದ ತಮ್ಮ ಮನೆ ಬಳಿ ನಿಂತು ಪುಷ್ಪವೃಷ್ಠಿ ಮಾಡುವ ಮೂಲಕ ವಂದನೆ ಸಲ್ಲಿಸುತ್ತಿದ್ದುದು ಕಂಡುಬಂತು.
ನಗರದ ಮಹಾವೀರ ವೃತ್ತದ ಬಳಿ ನಿಂತಿದ್ದ ಅನ್ಯ ಧರ್ಮಿಯರೂ ಸಹ ಪಥಸಂಚಲನದಲ್ಲಿ ಸಾಗುತ್ತಿದ್ದ ಸ್ವಯಂ ಸೇವಕರ ಮೇಲೆ ಪುಷ್ಪಾರ್ಚನೆ ಮಾಡಿದ್ದು ವಿಶೇಷವಾಗಿತ್ತು. ಹೆದ್ದಾರಿಯಲ್ಲಿ ಗಣವೇಷಧಾರಿಗಳು ಸಾಗುತ್ತಿದ್ದರೆ, ದ್ವಿಚಕ್ರ ವಾಹನ ಸವಾರರು ರಸ್ತೆ ಪಕ್ಕದಲ್ಲಿ ಸಾಗಲು ಯತ್ನಿಸಿದಾಗ ಪೊಲೀಸರು ತಡೆದು ತಿಳಿ ಹೇಳಿದರು.
ಗಣವೇಷಧಾರಿಗಳು ಸಾಗುತ್ತಿದ್ದ ಮಾರ್ಗದಲ್ಲಿ ಪೊಲೀಸರು ವಾಹನ ಸಂಚಾರವನ್ನು ನಿರ್ಬಂಧಿಸಿದ್ದರು. ಸ್ವಯಂ ಸೇವಕರು ತೆರಳಿದ ನಂತರ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯಿತು.
ಸ್ವಯಂ ಸೇವಕರು ತೆರಳುವ ಮಾರ್ಗದುದ್ದಕ್ಕೂ ಕೇಸರಿ ಬಣ್ಣದ ತೋರಣಗಳಿಂದ ಅಲಂಕರಿಸಲಾಗಿತ್ತು. ಎಲ್ಲಾ ರಸ್ತೆಗಳಲ್ಲಿ ಕೇಸರಿ ತೋರಣಗಳು ಗಣವೇಷಧಾರಿಗಳನ್ನು ಸ್ವಾಗತಿಸುತ್ತಿದ್ದವು. ಆರ್ ಎಸ್ ಎಸ್ ಪಥಸಂಚಲನದ ಹಿನ್ನೆಲೆಯಲ್ಲಿ ನಗರದಾದ್ಯಂತ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಜಿಲ್ಲಾ ಸಶಸ್ತ್ರ ಪೊಲೀಸ್ ಪಡೆಯನ್ನು ಬಿಗಿ ಬಂದೋಬಸ್ತ್‌ಗಾಗಿ ಆಯಾಕಟ್ಟಿನ ಸ್ಥಳಗಳಲ್ಲಿ ನಿಯೋಜಿಸಲಾಗಿತ್ತು. ಗಾಂಧಿನಗರದ ಬಳಿ ಇರುವ ಮಸೀದಿ ಬಳಿಯೂ ಮುಂಜಾಗ್ರತಾ ಕ್ರಮವಾಗಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.