ಕೆಂಭಾವಿಯಲ್ಲಿ ಆರೆಸ್ಸೆಸ್‌ ಪಥಸಂಚಲನ ಸುಸೂತ್ರ

KannadaprabhaNewsNetwork |  
Published : Nov 05, 2025, 02:00 AM IST
ಕೆಂಭಾವಿ ಪಟ್ಟಣದಲ್ಲಿ ಮಂಗಳವಾರ ನಡೆದ ಆರ್.ಎಸ್.ಎಸ್ ಪಥ ಸಂಚಲನಕ್ಕೂ ಮುನ್ನ ಸಮಾವೇಶಗೊಂಡ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗಣವೇಷಧಾರಿಗಳು. | Kannada Prabha

ಸಾರಾಂಶ

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವ ಹಿನ್ನೆಲೆ ಯಾದಗಿರಿ ಜಿಲ್ಲೆ ಸುರಪುರದ ಕೆಂಭಾವಿ ಪಟ್ಟಣದಲ್ಲಿ ನ.4ರಂದು ಆಯೋಜಿಸಲಾಗಿದ್ದ ಸ್ವಯಂ ಸೇವಕರ ಪಥಸಂಚಲನ ಖಾಕಿ ಸರ್ಪಗಾವಲಿನಲ್ಲಿ ಶಾಂತಿಯುತವಾಗಿ ಸಂಪನ್ನಗೊಂಡಿತು.

ಕನ್ನಡಪ್ರಭ ವಾರ್ತೆ ಕೆಂಭಾವಿ

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವ ಹಿನ್ನೆಲೆ ಯಾದಗಿರಿ ಜಿಲ್ಲೆ ಸುರಪುರದ ಕೆಂಭಾವಿ ಪಟ್ಟಣದಲ್ಲಿ ನ.4ರಂದು ಆಯೋಜಿಸಲಾಗಿದ್ದ ಸ್ವಯಂ ಸೇವಕರ ಪಥಸಂಚಲನ ಖಾಕಿ ಸರ್ಪಗಾವಲಿನಲ್ಲಿ ಶಾಂತಿಯುತವಾಗಿ ಸಂಪನ್ನಗೊಂಡಿತು.ಆರಂಭದಲ್ಲಿ ಪಥಸಂಚಲನ ಕುರಿತು ಆರ್‌ಎಸ್‌ಎಸ್‌ ಹಾಗೂ ಡಿಎಸ್‌ಎಸ್‌ ಸಂಘಟನೆಗಳ ನಡುವೆ ಹೊತ್ತಿಕೊಂಡಿದ್ದ ವಿವಾದದ ಕಿಡಿಯಿಂದಾಗಿ ಈ ಕಾರ್ಯಕ್ರಮ ರಾಜ್ಯಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಬಳಿಕ ದಲಿತಪರ ಸಂಘಟನೆಗಳ ಮನವೊಲಿಸುವಲ್ಲಿ ಯಶಸ್ವಿಯಾದ ಜಿಲ್ಲಾಡಳಿತ ಹಾಗೂ ಪೊಲೀಸ್‌ ಇಲಾಖೆ, ಪಥಸಂಚಲನ ಕುರಿತು ಉಂಟಾಗಿದ್ದ ಆತಂಕಗಳನ್ನು ಸೂಕ್ಷ್ಮವಾಗಿ ನಿವಾರಿಸಿದೆ.ಮಂಗಳವಾರ ಮಧ್ಯಾಹ್ನ 4.10ಕ್ಕೆ ಪುರಸಭೆ ಕಚೇರಿ ಪಕ್ಕದ ಖಾಸಗಿ ಮೈದಾನದಿಂದ ಆರಂಭವಾದ ಪಥಸಂಚಲನದಲ್ಲಿ ನಿರೀಕ್ಷೆಗೂ ಮೀರಿ 500ಕ್ಕೂ ಹೆಚ್ಚು ಗಣವೇಷಧಾರಿಗಳು ಭಾಗಿಯಾಗಿ 4 ಕಿ.ಮೀ. ಹೆಜ್ಜೆ ಹಾಕಿದರು. ಪಥಸಂಚಲನ ಸಾಗುವ ರಸ್ತೆಗಳನ್ನು ತಳಿರು ತೋರಣ, ರಂಗೋಲಿ ಮತ್ತು ಕೇಸರಿ ಧ್ವಜಗಳಿಂದ ಅಲಂಕಾರಗೊಳಿಸಲಾಗಿತ್ತು. ‘ಭಾರತ ಮಾತಾ ಕಿ ಜೈ’, ‘ವಂದೇ ಮಾತರಂ’, ‘ಜೈ ಶ್ರೀರಾಮ್‌’ ಘೋಷಣೆಗಳು ಮುಗಿಲಮುಟ್ಟಿದ್ದವು. ದಾರಿಯೂದ್ದಕ್ಕೂ ಸಾಲುಗಟ್ಟಿ ನಿಂತಿದ್ದ ಸಾವಿರಾರು ಜನರು ಸ್ವಯಂ ಸೇವಕರ ಮೇಲೆ ಪುಷ್ಪವೃಷ್ಟಿಗೈದರು. ವಾಹನದಲ್ಲಿ ಭಾರತ ಮಾತೆ ಮತ್ತು ಸಂಘ ಪರಿವಾರದ ಮಹನೀಯರ ಭಾವಚಿತ್ರಗಳ ಮೆರವಣಿಗೆಯೂ ನೋಡುಗರನ್ನು ಪುಳಕಿತರನ್ನಾಗಿಸಿತು.

ಪೊಲೀಸ್ ಭದ್ರತೆ:ಪಥಸಂಚಲನ ಆರಂಭಕ್ಕೂ ಮುನ್ನ ಪೊಲೀಸರು ರೂಟ್‌ಮಾರ್ಚ್‌ ನಡೆಸಿ, ಸಾರ್ವಜನಿಕರು ಹಾಗೂ ಸಂಘಟನೆಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಸಂದೇಶ ಸಾರಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ ನೇತೃತ್ವದಲ್ಲಿ ಹೆಚ್ಚುವರಿ ಎಸ್ಪಿ, ಮೂವರು ಡಿವೈಎಸ್ಪಿಗಳು, 8 ಜನ ಇನ್‌ಸ್ಪೆಕ್ಟರ್ಸ್‌, 26 ಪಿಎಸ್ಐ, 19 ಎಎಸ್‌ಐ, 147 ಸಿಬ್ಬಂದಿ, 5 ಡಿಎಆರ್‌ ತುಕಡಿ, 2 ಕೆಎಸ್ಆರ್‌ಪಿ ತುಕಡಿಗಳು ಸೇರಿದಂತೆ ಸುಮಾರು 300ಕ್ಕೂ ಹೆಚ್ಚು ಪೊಲೀಸರು ಬಂದೋಬಸ್ತ್‌ಗೆ ನಿಯೋಜಿತಗೊಂಡಿದ್ದರು.ಗಮನ ಸೆಳೆದ ಚಿಣ್ಣರು:

4 ವರ್ಷದ ಚಿಣ್ಣರು ಸೇರಿದಂತೆ 10 ವರ್ಷದೊಳಗಿನ ಸುಮಾರು 50ಕ್ಕೂ ಹೆಚ್ಚು ಮಕ್ಕಳು ಪಥಸಂಚಲನದಲ್ಲಿ ಗಣವೇಷಧಾರಿಗಳಾಗಿ ಗಮನ ಸೆಳೆದರು. ಯಾದಗಿರಿ, ಶಹಾಪೂರ, ಸುರಪುರ, ತಾಳಿಕೋಟೆ, ಹುಣಸಗಿ, ಜೇವರ್ಗಿ, ಕಲಬುರಗಿ, ರಾಯಚೂರ ಸೇರಿದಂತೆ ಸುತ್ತಮುತ್ತಲಿನ ಊರುಗಳಿಂದ ಸ್ವಯಂ ಸೇವಕರು ಆಗಮಿಸಿದ್ದರು. ಸಂಭಾಜಿ ಮಹಾರಾಜರ ವೇಷದಲ್ಲಿದ್ದ ಯುವಕನೋರ್ವ ಕೈ ಮತ್ತು ಕಾಲುಗಳಿಗೆ ಸರಪಳಿ ಬಿಗಿದುಕೊಂಡು ಮೈಮೇಲೆ ಕೃತಕ ರಕ್ತ ಚಲ್ಲಿಕೊಂಡು ಪ್ರದರ್ಶನ ನೋಡುಗರನ್ನು ಸೆಳೆಯಿತು.

PREV

Recommended Stories

ಶ್ರೀ ಶ್ರೀ ರವಿಶಂಕರ್‌ಗೆ ವರ್ಲ್ಡ್ ಲೀಡರ್ ಫಾರ್ ಪೀಸ್ ಆ್ಯಂಡ್‌ ಸೆಕ್ಯೂರಿಟಿ ಪ್ರಶಸ್ತಿ
ಹಾಡಹಗಲೇ ಮನೆಗೆ ನುಗ್ಗಿ ಚಹಾ ವ್ಯಾಪಾರಿಯ ಕತ್ತು ಕೊಯ್ದು ಹತ್ಯೆ