ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ರಾಷ್ಟ್ರೀಯ ಸ್ವಯಂ ಸೇವಕ ಸಂಘದ 100ನೇ ವರ್ಷದ ಸಂಭ್ರಮಾಚರಣೆ ಅಂಗವಾಗಿ ಪಟ್ಟಣದಲ್ಲಿ ರವಿವಾರ ಆಕರ್ಷಕ ಪಥಸಂಚಲನ ನಡೆಯಿತು.ಗಣವೇಷಧಾರಿಗಳು ಶಿಸ್ತು ಬದ್ಧವಾಗಿ ಹೆಜ್ಜೆ ಹಾಕಿದರು. ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಸೇರಿದ್ದ ಗಣವೇಶಧಾರಿಗಳು ಧ್ವಜ ವಂದನೆ ಸಲ್ಲಿಸಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು.
ಬಳಿಕ ಪಟ್ಟಣದ ಬಸ್ ನಿಲ್ದಾಣದ ಮುಖ್ಯ ಬೀದಿಯಲ್ಲಿ ಪಥ ಸಂಚಲನ ಸಾಗಿತು. ಅಲ್ಲಿಂದ ದಾನಪ್ಪಗೌಡ ಮಡಗೊಂಡ(ಪಾಟೀಲ) ತೋಟದ ಹತ್ತಿರ ಸಭೆ ಸೇರಿತು. ಪಥ ಸಂಚಲನದಲ್ಲಿ ಭಾರತ ಮಾತೆ, ಕೇಶವ ಬಲಿರಾಮ ಹೆಡಿಗೆವಾರ ಮತ್ತು ಗೋಲ್ವಾಲ್ಕರ್ ಭಾವಚಿತ್ರಗಳಿಗೆ ವಂದಿಸಿದರು. ಪಟ್ಟಣದ ಪ್ರಮುಖರು ಗಣ್ಯರು ಗಣವೇಶಧರಿಸಿ ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದರು.ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಪಪಂ ಉಪಾಧ್ಯಕ್ಷ ರಮೇಶ ಮಸಿಬಿನಾಳ ಕೇವಲ ಒಂದು ಸಮುದಾಯ ಓಲೈಸಲು ಕಾಂಗ್ರೆಸ್ ಆರ್‌ಎಸ್ಎಸ್ ಬ್ಯಾನ್ ಮಾಡಲು ಚಿಂತಿಸುತ್ತಿದೆ. ಆರ್‌ಎಸ್ಎಸ್ ಭಯೋತ್ಪಾದಕ ಸಂಘಟನೆಯಲ್ಲ. ಅದು ದೇಶಭಕ್ತಿಯ ಪ್ರತೀಕ ಇದನ್ನು ಅರ್ಥಮಾಡಿಕೊಳ್ಳದ ಸಚಿವ ಪ್ರಿಯಾಂಕ ಖರ್ಗೆ ಆರ್‌ಎಸ್ಎಸ್ ಕುರಿತು ಹಗುರವಾಗಿ ಮಾತನಾಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದರು.ಶತಮಾನದಿಂದ ದೇಶ ಬಲಪಡಿಸುವ ನಿಟ್ಟಿನಲ್ಲಿ ಸಾಗುತ್ತಿರುವ ಆರ್‌ಎಸ್ಎಸ್ ಈಗ ಮತ್ತಷ್ಟು ಬಲಶಾಲಿಯಾಗುತ್ತಿದೆ. ಈ ಬೆಳವಣಿಗೆಯನ್ನು ಕಾಂಗ್ರೆಸ್‌ಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಆರ್‌ಎಸ್ಎಸ್ ಕಂಡರೆ ಭಯ ಎಂದು ಹೇಳಿದರು.
ವಿಜಯಪುರ ಗ್ರಾಮೀಣ ಡಿವೈಎಸ್ಪಿ ಟಿ.ಎಸ್.ಸುಲ್ಫಿ ನೇತೃತ್ವದಲ್ಲಿ ಸಿಪಿಐ ರಮೇಶ ಅವಜಿ, ಪಿಎಸ್ಐಗಳಾದ ಸಚಿನ್ ಆಲಮೇಲಕರ್, ಐ.ಎಂ.ದುಂಡಸಿ, ದೇವರಾಜ ಉಳ್ಳಾಗಡ್ಡಿ ಹಾಗೂ ಸಿಬ್ಬಂದಿ ಬಂದೂಬಸ್ತ್ ಕೈಗೊಂಡಿದ್ದರು.ಸ್ಥಳೀಯ ಜಡಿ ಮಠದ ಜಡಿಸಿದ್ದೇಶ್ವರ ಶಿವಾಚಾರ್ಯರು, ಉತ್ತರ ಕರ್ನಾಟಕ ಗ್ರಾಮ ವಿಕಾಸ ಪ್ರಾಂತ ಸಂಯೋಜಕ ದಾಮೋದರಜಿ, ತಾಲೂಕು ಸಂಘದ ಪ್ರಮುಖ ರಾಜು ದೇಸಾಯಿ, ಆರ್‌ಎಸ್‌ಎಸ್ ಮುಖಂಡರಾದ ಅಶೋಕ ಅಲ್ಲಾಪೂರ, ಡಾ.ಆರ್.ಆರ್.ನಾಯಕ, ಅವ್ವಣಗೌಡ ಗ್ವಾತಗಿ, ಮಹಾಂತೇಶ ಬಿರಾದಾರ ಸೇರಿ ನೂರಾರು ಮುಖಂಡರು ಪಾಲ್ಗೊಂಡಿದ್ದರು.