ಕನ್ನಡಪ್ರಭ ವಾರ್ತೆ ಹಾಸನ
ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಜವಹಾರ್ ಲಾಲ್ ನೆಹರು ಯಾರಿಗೂ ಆರ್‌ಎಸ್‌ಎಸ್ ನಿಷೇಧಿಸಲು ಸಾಧ್ಯವಾಗಲಿಲ್ಲ. ಕೆಲವರು ತೀರಿಯೇ ಹೋದರು, ಕೆಲವರು ನಾಶವಾದರು. ಈಗಲೂ ಇದೇ ದಾರಿಯಲ್ಲಿ ಕೆಲವರು ನಡೆಯುತ್ತಿದ್ದಾರೆ ಎಂದು ಮಾಜಿ ಉಪ ಮುಖ್ಯಮಂತ್ರಿ ಮತ್ತು ಹಿರಿಯ ಬಿಜೆಪಿ ನಾಯಕ ಕೆ. ಎಸ್. ಈಶ್ವರಪ್ಪ ಎಚ್ಚರಿಕೆ ನೀಡಿದರು.ಹಾಸನಾಂಬೆ ದೇವಿಯ ಸಾರ್ವಜನಿಕ ದರ್ಶನದ ನಂತರ ಮಾತನಾಡಿದ ಅವರು, ಅವರು ಪ್ರಿಯಾಂಕ್ ಖರ್ಗೆ ಹಾಗೂ ಹರಿಪ್ರಸಾದ್ ಅವರನ್ನು ನೇರವಾಗಿ ಉಲ್ಲೇಖಿಸಿ, ಆರ್‌ಎಸ್‌ಎಸ್ ಬಗ್ಗೆ ಟೀಕೆ ಮಾಡಿದರೆ ಹೀರೋ ಆಗ್ತೀನಿ ಅಂದುಕೊಂಡಿದ್ದಾರೆ. ಆದರೆ ವಿಲನ್ ಆಗುತ್ತಿದ್ದಾರೆ. ಆರ್‌ಎಸ್‌ಎಸ್ ಸೂರ್ಯನಂತೆ ಬೆಳಗುತ್ತಿದೆ. ಅದನ್ನು ಟೀಕಿಸಲು ಹೋದರೆ ಸೂರ್ಯನಿಗೆ ಉಗಿಯಲು ಹೋದರೆ ಉಗುಳು ಅವರ ಮೈಮೇಲೆ ಬೀಳುತ್ತದೆ. ಆರ್‌ಎಸ್‌ಎಸ್ ಯಾರನ್ನೂ ಮತಾಂತರ ಮಾಡಲು ಹೋಗಿಲ್ಲ. ಹಿಂದೂ ಧರ್ಮವನ್ನು ಉಳಿಸಲು ಮತ್ತು ಭಾರತೀಯ ಸಂಸ್ಕೃತಿಯನ್ನು ವಿಶ್ವಮಟ್ಟಕ್ಕೆ ತಲುಪಿಸಲು ಆರ್‌ಎಸ್‌ಎಸ್ ಶ್ರಮಿಸುತ್ತಿದೆ. ಇಡೀ ಪ್ರಪಂಚದಲ್ಲಿ ಭಾರತೀಯ ಸಂಸ್ಕೃತಿ ಉನ್ನತ ಸ್ಥಾನದಲ್ಲಿದೆ ಎಂದು ಹೇಳಿದರು.
ಸರ್ಕಾರದಲ್ಲಿ ನಡೆಯಲಿರುವ ಸಚಿವ ಸಂಪುಟ ಪುನರ್‌ರಚನೆ ಕುರಿತಂತೆ ಅವರು ತೀವ್ರವಾಗಿ ಟೀಕಿಸಿದರು. ಕೆಲವರು ತಮ್ಮ ಮಂತ್ರಿ ಸ್ಥಾನ ಉಳಿಸಿಕೊಳ್ಳಲು ಮಾಡುತ್ತಿರುವ ರಾಜಕಾರಣದಿಂದ ಸರ್ಕಾರವೇ ಉಳಿಯಲಾರದು ಎಂಬ ನಂಬಿಕೆ ನನಗಿದೆ ಎಂದು ಅವರು ಸ್ಪಷ್ಟವಾಗಿ ಹೇಳಿದರು.ಗೂಡ್ಸೆಗೂ, ಗಾಂಧಿ ಹತ್ಯೆಗೂ ಆರ್‌ಎಸ್‌ಎಸ್‌ಗೆ ಯಾವುದೇ ಸಂಬಂಧವಿಲ್ಲ. ಆ ವಿಚಾರವನ್ನು ಕೇವಲ ರಾಜಕೀಯ ಪ್ರಯೋಜನಕ್ಕಾಗಿ ಕೆಲವರು ಎಳೆದುಕೊಂಡು ಬರುತ್ತಿದ್ದಾರೆ. ಚಿತ್ತಾಪುರ ಪಥಸಂಚಲನ ಕುರಿತು ಹೈಕೋರ್ಟ್ ನೀಡಿದ ಅನುಮತಿಯನ್ನು ಉಲ್ಲೇಖಿಸಿ ಅವರು ಸಂತೋಷ ವ್ಯಕ್ತಪಡಿಸಿದರು. ಚಿತ್ತಾಪುರದಲ್ಲಿ ನವೆಂಬರ್‌ನಲ್ಲಿ ಪಥಸಂಚಲನ ನಡೆಯಲಿದೆ ಎಂದು ಹೇಳಿದ್ದಾರೆ. ಪ್ರತಿಗ್ರಾಮದಲ್ಲಿಯೂ ಆರ್‌ಎಸ್‌ಎಸ್ ಬೆಳೆಯುತ್ತಿದೆ. ಇವರು ಇದೇ ರೀತಿ ಟೀಕೆ ಮುಂದುವರಿಸಿದರೆ ಜನರು ಬೀದಿಗಿಳಿದು ಹೋರಾಟ ಮಾಡುತ್ತಾರೆ ಎಂದು ಎಚ್ಚರಿಸಿದರು.
ಇದೇ ಸಂದರ್ಭದಲ್ಲಿ ಈಶ್ವರಪ್ಪ ಅವರು ಈ ಬಾರಿ ಹಾಸನಾಂಬೆ ದರ್ಶನೋತ್ಸವದಲ್ಲಿ ಜಿಲ್ಲಾಡಳಿತದ ಕ್ರಮ, ಭಕ್ತರ ನಿರ್ವಹಣೆ ಹಾಗೂ ಸಚಿವ ಕೃಷ್ಣಬೈರೇಗೌಡರ ವ್ಯವಸ್ಥೆಯನ್ನು ಪ್ರಶಂಸಿಸಿದರು. ವಿಐಪಿಗಳಿಗೆ ಅತ್ಯಂತ ವ್ಯವಸ್ಥಿತವಾಗಿ ದರ್ಶನ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾಡಳಿತ, ಅಧಿಕಾರಿಗಳು, ಸರ್ಕಾರ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು. ಇದೇ ರೀತಿಯ ವ್ಯವಸ್ಥೆಯನ್ನು ಮುಂದಿನ ವರ್ಷಗಳಲ್ಲಿಯೂ ಮುಂದುವರಿಸಬೇಕು ಎಂದು ಅವರು ಹೇಳಿದರು.