ಆನಂದಪುರ: ಸಮೀಪದ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚನ್ನಶೆಟ್ಟಿಕೊಪ್ಪ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ವಿಶೇಷ ನೋನಿ ಹಬ್ಬವನ್ನು ಸೋಮವಾರ ಸಂಭ್ರಮದಿಂದ ಆಚರಿಸಲಾಯಿತು.
ತಲಾತಲಾಂತರದಿಂದ ನಡೆದುಕೊಂಡು ಬಂದ ಸಂಪ್ರದಾಯದಂತೆ ಗ್ರಾಮದ ಶೀಲವಂತ ದೇವರಿಗೆ ಪೂಜೆ ಸಲ್ಲಿಸುವುದು ಸಾವಿರಾರು ವರ್ಷಗಳ ಇತಿಹಾಸವಿದೆ. ಗ್ರಾಮದ ಕೆರೆಯ ತುದಿಯಲ್ಲಿರುವ ಗ್ರಾಮದೇವರು ಪ್ರತ್ಯೇಕವಾದ ದೇವರ ಬಲವಿದ್ದು ಈ ಬಲದಲ್ಲಿ ಇಡೀ ಗ್ರಾಮಸ್ಥರೆಲ್ಲ ಸೇರಿ ಪೂಜೆ ಸಲ್ಲಿಸಿ ಹಣ್ಣುಕಾಯಿ ನೈವೇದ್ಯ ಮಾಡಲಾಯಿತು.ಈ ಸ್ಥಳದಲ್ಲಿ 48ಕ್ಕೂ ಹೆಚ್ಚು ದೇವತೆಗಳ ಬೆಳ್ಳಿ, ತಾಮ್ರ, ಹಿತ್ತಾಳೆ, ಕಂಚು ಸೇರಿದಂತೆ ಇತ್ಯಾದಿ ಲೋಹದಿಂದ ತಯಾರಿಸಿದ್ದ ದೇವರ ವಿಗ್ರಹವನ್ನು ಅಕ್ಕಿಯ ರಾಶಿಯಲ್ಲಿಟ್ಟು ಪೂಜಿಸಲಾಗುತ್ತದೆ. ಈ ಗ್ರಾಮ ದೇವತೆಯ ವಿಶೇಷವೇನೆಂದರೆ, ವಿವಿಧ ಲೋಹಗಳಿಂದ ತಯಾರಿಸಿದಂತಹ ದೇವರ ವಿಗ್ರಹಗಳನ್ನು ಪ್ರತಿವರ್ಷ ದೀಪಾವಳಿಯ ಅಮಾವಾಸ್ಯೆಯ ದಿನ ಮಣ್ಣಿನ ಮಡಿಕೆಯಲ್ಲಿ ಮಣ್ಣಿನ ಅಡಿಯಲ್ಲಿ ಹೋತ್ತಿಟ್ಟಂತಹ ದೇವರ ವಿಗ್ರಹಗಳನ್ನು ಪುರೋಹಿತರ ಸಮ್ಮುಖದಲ್ಲಿ ಹೊರತೆಗೆದು ಶುದ್ಧ ಮಾಡಿ ಪೂಜೆ ಸಲ್ಲಿಸುತ್ತಾರೆ. ಈ ಸಮಯದಲ್ಲಿ ಗ್ರಾಮದ 150ಕ್ಕು ಹೆಚ್ಚು ಕುಟುಂಬದವರು ದೇವರ ಬನಕ್ಕೆ ತೆರಳಿ ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸಿದರು.
ಗ್ರಾಮದೇವರ ಪೂಜೆ ಮುಗಿದ ನಂತರ ದೇವರ ಎಲ್ಲ ವಿಗ್ರಹಗಳನ್ನು ಮಣ್ಣಿನ ಮಡಕೆಯಲ್ಲಿಟ್ಟು ಕಾಡಿನಲ್ಲಿ ನೆಲದಲ್ಲಿ ಗುಂಡಿ ತೋಡಿ ಮುಚ್ಚಿಡುತ್ತಾರೆ. ಈ ವಿಗ್ರಹಕ್ಕೆ ಮತ್ತೆ ಪೂಜೆಯಾಗಬೇಕಾದರೆ ಮುಂದಿನ ವರ್ಷದ ದೀಪಾವಳಿಯವರೆಗೆ ಕಾಯಬೇಕಾಗುತ್ತದೆ.ಈ ಗ್ರಾಮದ ನೋನಿ ಹಬ್ಬದ ಆಚರಣೆಗೆ ಗ್ರಾಮದ ಜನರು ಕಟ್ಟುನಿಟ್ಟಿನ ಪಾಲನೆಯ ಮೂಲಕ ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಾರೆ. ನೋನಿ ಹಬ್ಬದ ದಿನದಂದು ಮನೆಯ ಪ್ರತಿಯೊಬ್ಬ ಕುಟುಂಬದ ಸದಸ್ಯರು ಉಪವಾಸವಿದ್ದು, ಗ್ರಾಮ ದೇವರಿಗೆ ಹಣ್ಣುಕಾಯಿ ನೈವೇದ್ಯ ಮಾಡುವುದಲ್ಲದೆ, ಸಂಜೆ ವೇಳೆಗೆ ನಡೆಯುವ ಗ್ರಾಮದ ಪ್ರತಿಯೊಂದು ಶೀಲವಂತ ದೇವರಿಗೂ ಹಣ್ಣುಕಾಯಿ ನೈವೇದ್ಯಮಾಡಿ, ನಂತರ ಗ್ರಾಮದ ಕೆರೆಯ ತುದಿಯಲ್ಲಿರುವ ಇನ್ನೊಂದು ದೇವರಿಗೆ ಪ್ರಾಣಿ ಬಲಿ ನೀಡಿದ ನಂತರ ನೀರು, ಆಹಾರ ಸೇವನೆ ಮಾಡುತ್ತಾರೆ. ಇಂತಹ ಒಂದು ಕಟ್ಟುನಿಟ್ಟಿನ ನೋನಿ ಹಬ್ಬವನ್ನು ಗ್ರಾಮಸ್ಥರು ಒಂದಾಗಿ ಸಡಗರ ಸಂಭ್ರಮದಿಂದ ಚನ್ನಶೆಟ್ಟಿಕೊಪ್ಪ ಗ್ರಾಮಸ್ಥರು ಆಚರಿಸಿದರು.