ಶಿವಮೊಗ್ಗ: ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ-ಸಡಗರ ಶಿವಮೊಗ್ಗ ಸೇರಿದಂತೆ ಜಿಲ್ಲೆಯಾದ್ಯಂತ ಕಂಡುಬಂದಿದೆ. ಹಬ್ಬಕ್ಕೆ ಬೇಕಾದ ಅಗತ್ಯ ವಸ್ತುಗಳ ಖರೀದಿ ಭರಾಟೆ ಬಲು ಜೋರಾಗಿ ಸಾಗಿದೆ.
ಸೋಮವಾರ ಮತ್ತೆ ಮಂಗಳವಾರ ಅಮಾವಾಸ್ಯೆ ಇರುವುದರಿಂದ ಲಕ್ಷ್ಮಿ ಪೂಜೆ ಸಂಭ್ರಮ ಎಲ್ಲೆಡೆ ಕಂಡುಬಂದಿದೆ. ಅಂಗಡಿ ಮಳಿಗೆಗಳಲ್ಲಿ, ಕಾರ್ಖಾನೆಗಳಲ್ಲಿ ಲಕ್ಷ್ಮಿ ಪೂಜೆಗೆ ಸಿದ್ಧತೆ ಭರದಿಂದ ನಡೆದಿದೆ. ಗ್ರಾಮೀಣ ಭಾಗದಲ್ಲಿ ದೀಪಾವಳಿಯ ಸಂಭ್ರಮದ ವಾತಾವರಣ ಕಂಡು ಬಂದಿದೆ. ಉದ್ಯೋಗದ ಸಲುವಾಗಿ ಪರ ಊರುಗಳಲ್ಲಿ ನೆಲೆಸಿರುವವರು ತಮ್ಮ ತಮ್ಮ ಸ್ವಗ್ರಾಮಗಳಿಗೆ ಹಿಂದಿರುಗುತ್ತಿರುವುದರಿಂದ ರೈಲು ಹಾಗೂ ಬಸ್ಸುಗಳಲ್ಲಿ ಪ್ರಯಾಣಿಕರ ದಟ್ಟಣೆ ಕಂಡು ಬಂದಿದೆ. ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರಿಗೆ ತೊಂದರೆ ಆಗಬಾರದು ಎಂದು ಕೆಎಸ್‌ಆರ್‌ಟಿಸಿ ವಿವಿಧ ಮಾರ್ಗಗಳಲ್ಲಿ ಹೆಚ್ಚುವರಿ ಬಸ್ ಸೌಲಭ್ಯವನ್ನು ಕಲ್ಪಿಸಿದೆ. ಗಮನ ಸೆಳೆದ ಆಕಾಶಬುಟ್ಟಿನಗರದ ಹಲವು ಅಂಗಡಿಗಳ ಎದುರು ನೇತುಹಾಕಿದ್ದ ಆಕಾಶಬುಟ್ಟಿಗಳು ಗಮನ ಸೆಳೆಯುತ್ತಿವೆ. ನಕ್ಷತ್ರ ಮಾದರಿ ಆಕಾಶ ಬುಟ್ಟಿ, ಚಂದ್ರನ ಆಕಾರದ ಆಕಾಶಬುಟ್ಟಿ ಜನರನ್ನು ಆಕರ್ಷಿಸುತ್ತಿವೆ. ಮಹಾರಾಷ್ಟ್ರ, ದೆಹಲಿ, ರಾಜಸ್ತಾನ ಮೊದಲಾದ ಕಡೆಗಳಿಂದ ವಿವಿಧ ವಿನ್ಯಾಸದ ಆಕಾಶ ಬುಟ್ಟಿಗಳು ಬಂದಿದ್ದು, ಮಾರುಕಟ್ಟೆಯುದ್ದಕ್ಕೂ ಕಂಗೊಳಿಸುತ್ತಿವೆ. ವರ್ಣ ವೈವಿಧ್ಯ ಹಾಗೂ ಗಾತ್ರವನ್ನುಆಧರಿಸಿ ಆಕಾಶಬುಟ್ಟಿಯ ದರವು ಕನಿಷ್ಠ 150 ರಿಂದ ಗರಿಷ್ಠ 800 ರು.ವರೆಗೂ ದರವಿದೆ.
ಪಟಾಕಿ ಖರೀದಿಗೆ ಮುಗಿಬಿದ್ದಿ ಜನ
ದೀಪಾವಳಿ ಅಂಗವಾಗಿ ಶಿವಮೊಗ್ಗ ನಗರದಲ್ಲಿ ವಿವಿಧ ಮಳಿಗೆಗಳಲ್ಲಿ ಖರೀದಿ ಬಿರುಸುಗೊಂಡಿದೆ. ನಗರದ ಅಲ್ಲಮಪ್ರಭು ಮೈದಾನದಲ್ಲಿ ವಿವಿಧ ಮಳಿಗೆಗಳಲ್ಲಿ ಜನರು ಪಟಾಕಿ ಖರೀದಿಗೆ ಮುಗಿಬಿದ್ದಿದ್ದರು.ಅಲ್ಲಮಪ್ರಭು ಮೈದಾನದಲ್ಲಿ ಸುಮಾರು 30ಕ್ಕೂ ಹೆಚ್ಚು ಮಳಿಗೆಗಳಲ್ಲಿ ಪಟಾಕಿ ಮಾರಾಟ ಮಾಡಲಾಗುತ್ತಿದ್ದು, ನೂರಾರು ರುಪಾಯಿಯಿಂದ ಸಾವಿರಾರು ರುಪಾಯಿವರೆಗೆ ವಿವಿಧ ಬಗೆಯ ಪಟಾಕಿಗಳು ಖರೀದಿಸಲಾಗುತ್ತಿದೆ.