ಆರ್‌ಟಿಇ ಕಾಯಿದೆ ಮಕ್ಕಳಿಗೆ ವರದಾನ: ಜಿಲ್ಲಾಧಿಕಾರಿ ಡಾ.ಕುಮಾರ

KannadaprabhaNewsNetwork |  
Published : Jan 06, 2025, 01:03 AM IST
5ಕೆಎಂಎನ್‌ಡಿ-3ಮಂಡ್ಯದ ಡಯಟ್‌ನಲ್ಲಿ ನಡೆದ ಶಿಕ್ಷಣದ ಜೊತೆಗೆ ರಕ್ಷಣೆ, ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ 2009ರ ಕುರಿತು ಜಿಲ್ಲಾಮಟ್ಟದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿದರು. | Kannada Prabha

ಸಾರಾಂಶ

2009ರಲ್ಲಿ ಪ್ರಧಾನ ಮಂತ್ರಿಯಾಗಿದ್ದ ಡಾ.ಮನಮೋಹನ್‌ಸಿಂಗ್‌ ಅವರು ಶಿಕ್ಷಣದಿಂದ ಯಾವ ಮಕ್ಕಳೂ ವಂಚಿತರಾಗಬಾರದೆಂದು ಕೊಟ್ಟ ಬಹುದೊಡ್ಡ ಕೊಡುಗೆ. ಶಿಕ್ಷಣವನ್ನು ಮೂಲಭೂತ ಹಕ್ಕನ್ನಾಗಿ ಮಾಡಲು ಕಾಯಿದೆಯನ್ನೇ ರೂಪಿಸಿದರು. 6 ರಿಂದ 14 ವರ್ಷದವರೆಗಿನ ಮಕ್ಕಳಿಗೆ ಉಚಿತ ಮತ್ತು ಗುಣಮಟ್ಟದ ಶಿಕ್ಷಣ ನೀಡುವುದು ಹಕ್ಕಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಆರ್‌ಟಿಇ ಕಾಯಿದೆ ಬಡ ಮಕ್ಕಳಿಗೆ ವರದಾನವಾಗಿದೆ. ಕಾಯ್ದೆಯ ಒಳತಿರುಳನ್ನು ಅರ್ಥೈಸಿಕೊಂಡು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.

ನಗರದ ಡಯಟ್‌ನಲ್ಲಿ ನಡೆದ ಶಿಕ್ಷಣದ ಜೊತೆಗೆ ರಕ್ಷಣೆ, ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ 2009ರ ಕುರಿತು ಜಿಲ್ಲಾ ಮಟ್ಟದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಮಕ್ಕಳನ್ನು ರಕ್ಷಣೆ ಮಾಡುವುದರ ಜೊತೆಗೆ ಅವರಿಗೆ ಗುಣಾತ್ಮಕ ಶಿಕ್ಷಣ ನೀಡುವುದು ಇಂದಿನ ತುರ್ತು ಅಗತ್ಯವಾಗಿದೆ. ಆ ನಿಟ್ಟಿನಲ್ಲಿ ಅಧಿಕಾರಿಗಳು ಇನ್ನೂ ಹೆಚ್ಚಿನ ಕೆಲಸ ಮಾಡಬೇಕು ಎಂದರು.

ಆರ್‌ಟಿಇ ಒಂದು ವಿಶೇಷವಾದ ಕಾಯ್ದೆ. ಮಕ್ಕಳಿಗೆ ಇದು ಎಲ್ಲಾ ದೃಷ್ಟಿಕೋನದಿಂದಲೂ ವರದಾನವಾಗಿದೆ. ಆರ್ಥಿಕ, ಸಾಮಾಜಿಕ ಸೇರಿದಂತೆ ಸಮರ್ಪಕವಾಗಿ ಗುಣಾತ್ಮಕ ಶಿಕ್ಷಣ ನೀಡಿ ಆದರ್ಶ ವ್ಯಕ್ತಿಯಾಗಿ ರೂಪಿಸಲು ಸಹಕಾರಿಯಾಗಿದ ಎಂದರು.

2009ರಲ್ಲಿ ಪ್ರಧಾನಮಂತ್ರಿಯಾಗಿದ್ದ ಡಾ.ಮನಮೋಹನ್‌ಸಿಂಗ್‌ ಅವರು ಶಿಕ್ಷಣದಿಂದ ಯಾವ ಮಕ್ಕಳೂ ವಂಚಿತರಾಗಬಾರದೆಂದು ಕೊಟ್ಟ ಬಹುದೊಡ್ಡ ಕೊಡುಗೆ. ಶಿಕ್ಷಣವನ್ನು ಮೂಲಭೂತ ಹಕ್ಕನ್ನಾಗಿ ಮಾಡಲು ಕಾಯಿದೆಯನ್ನೇ ರೂಪಿಸಿದರು. 6 ರಿಂದ 14 ವರ್ಷದವರೆಗಿನ ಮಕ್ಕಳಿಗೆ ಉಚಿತ ಮತ್ತು ಗುಣಮಟ್ಟದ ಶಿಕ್ಷಣ ನೀಡುವುದು ಹಕ್ಕಾಗಿದೆ ಎಂದರು.

ಕಾಯಿದೆಯಲ್ಲಿ ಅನೇಕ ವಿಚಾರಗಳಿವೆ. ಶಿಕ್ಷಕರು, ಶಿಕ್ಷಣ, ಮೂಲಸೌಕರ್ಯ, ಜಾತಿ, ಮತ, ಧರ್ಮ ಬೇಧ ಮಾಡದೆ ಎಲ್ಲರಿಗೂ ಗುಣಾತ್ಮಕ ಶಿಕ್ಷಣ ನೀಡುವುದು ಕಾಯ್ದೆಯ ಮೂಲ ಉದ್ದೇಶವಾಗಿದೆ. ತಂದೆ-ತಾಯಿಗಳಿಗೆ ಒಳ್ಳೆಯ ಖಾಸಗಿ ಶಾಲೆಗಳಿಗೆ ಶುಲ್ಕ ಕಟ್ಟಿ ಓದಿಸುವ ಆಸೆ ಇದ್ದರೂ ಆರ್ಥಿಕ ದುಸ್ಥಿತಿಯಿಂದ ಸಾಧ್ಯವಾಗದ ಪೋಷಕರಿಗೆ ಇದು ಸಹಕಾರಿ ಎಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಮಕ್ಕಳಿಗೆ ಪೊಲೀಸ್‌ ಇಲಾಖೆ ರಕ್ಷಣೆ ನೀಡಬೇಕೆಂಬುದು ಮೇಲ್ನೋಟಕ್ಕೆ ಕಾಣುತ್ತದೆ. ಪ್ರತಿಯೊಂದು ಶಾಲೆಗೂ ರಕ್ಷಣೆ ನೀಡುವುದು ಅಸಾಧ್ಯ. ಶಿಕ್ಷಣದ ಜೊತೆಗೆ ಮಕ್ಕಳನ್ನ ರಕ್ಷಣೆ ಮಾಡುವುದೂ ಕೂಡ ಶಿಕ್ಷಕರ ಜವಾಬ್ದಾರಿ ಎಂದರು.

ರಾಜ್ಯ ಮಕ್ಕಳ ಹಕ್ಕು ಆಯೋಗದ ಸದಸ್ಯ ಮಿಕ್ಕೆರೆ ವೆಂಕಟೇಶ್‌, ಡಿಡಿಪಿಐ ಶಿವರಾಮೇಗೌಡ, ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ರಶ್ಮಿ, ಡಯಟ್‌ ಪ್ರಾಚಾರ್ಯ ಪುರುಷೋತ್ತಮ್‌ ಇತರರಿದ್ದರು.

PREV

Recommended Stories

ಬಿಪಿಎಲ್‌ ಕಾರ್ಡ್‌ಗೆ 1.20 ಲಕ್ಷ ಆದಾಯ ಮಿತಿ ಕೇಂದ್ರದ್ದು: ಸಿಎಂ
ಪೇದೆ ನೇಮಕಕ್ಕೆ ವಯೋಮಿತಿ ಸಡಿಲಕ್ಕೆ ಶೀಘ್ರ ಪ್ರಸ್ತಾವ : ಪರಂ