ಸಶಸ್ತ್ರ ಪೊಲೀಸ್‌ ಹುದ್ದೆ ಆಯ್ಕೆಗೆ ತೃತೀಯ ಲಿಂಗಿಗಳಿಗೆ ನಿಯಮವೇ ತಡೆ!

KannadaprabhaNewsNetwork |  
Published : Jul 25, 2024, 01:15 AM IST
೧ | Kannada Prabha

ಸಾರಾಂಶ

ಪೊಲೀಸ್‌ ಇಲಾಖೆ ಸೇರುವ ತೃತೀಯ ಲಿಂಗಿಗಳ ಕನಸಿಗೆ ದೈಹಿಕ ಪರೀಕ್ಷೆಯಲ್ಲಿ ಪುರುಷರ ಮಾನದಂಡ ವಿಧಿಸಿರುವುದು ಅಡ್ಡಿಯಾಗಿ ಪರಿಣಮಿಸಿದೆ.

ಆತ್ಮಭೂಷಣ್‌

ಕನ್ನಡಪ್ರಭ ವಾರ್ತೆ

ತೃತೀಯ ಲಿಂಗಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವೇ ನೇಮಕಾತಿಗಳಲ್ಲಿ ಶೇ.1ರ ಮೀಸಲಾತಿ ನಿಗದಿಪಡಿಸಿದೆ. ಅದರಂತೆ ಕರ್ನಾಟಕ ರಾಜ್ಯ ಸಶಸ್ತ್ರ ಪೊಲೀಸ್‌ ಕಾನ್‌ಸ್ಟೇಬಲ್‌ (ಸಿಎಆರ್‌/ಡಿಎಆರ್‌) ಹುದ್ದೆಗಳಿಗೆ ನೇಮಕಾತಿಯಲ್ಲೂ ಈ ಮೀಸಲಾತಿ ಅನುಷ್ಠಾನಗೊಳಿಸಲಾಗುತ್ತಿದೆ. ಆದರೆ ಮಾನದಂಡದಲ್ಲಿ ಯಾವುದೇ ಬದಲಾವಣೆ ಮಾಡದ ಕಾರಣ ತೃತೀಯ ಲಿಂಗಿಗಳಿಗೆ ಕೈಗೆ ಬಂದ ತುತ್ತು ಬಾಯಿಗೆ ಇಲ್ಲ ಎಂಬಂತಾಗಿದೆ.

2022-23ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಸಶಸ್ತ್ರ ಪೊಲೀಸ್‌ ಕಾನ್‌ಸ್ಟೇಬಲ್‌ (ಸಿಎಆರ್‌/ಡಿಎಆರ್‌) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಒಟ್ಟು 3,064 ಹುದ್ದೆಗಳ ಪೈಕಿ 2,996 ಪುರುಷರಿಗೆ ಹಾಗೂ ಶೇ.1ರಷ್ಟು ಅಂದರೆ 68 ಹುದ್ದೆಯನ್ನು ತೃತೀಯ ಲಿಂಗಿಗಳಿಗೆ ಮೀಸಲಿರಿಸಲಾಗಿತ್ತು. 68 ಹುದ್ದೆಗಳಿಗೆ ಅವಕಾಶ ಇದ್ದರೂ ಅರ್ಜಿ ಸಲ್ಲಿಸಿರುವ ತೃತೀಯ ಲಿಂಗಿಗಳ ಸಂಖ್ಯೆ ಕೇವಲ 14 ಮಾತ್ರ.

ಲಿಖಿತದಲ್ಲಿ ಪಾಸ್‌, ದೈಹಿಕದಲ್ಲಿ ಫೇಲ್‌: ಪ್ರಸಕ್ತ ನೇಮಕಾತಿ ಪ್ರಕ್ರಿಯೆ ಆರಂಭವಾಗಿದ್ದು, ಲಿಖಿತ ಪರೀಕ್ಷೆ ಮುಕ್ತಾಯಗೊಂಡಿದೆ. ಲಿಖಿತ ಪರೀಕ್ಷೆಯಲ್ಲಿ ಎಲ್ಲ 14 ಮಂದಿಯೂ ಉತ್ತೀರ್ಣರಾಗಿದ್ದಾರೆ. ಆದರೆ ದೈಹಿಕ ಅರ್ಹತಾ ಪರೀಕ್ಷೆಯಲ್ಲಿ ತೃತೀಯ ಲಿಂಗಿ ಅಭ್ಯರ್ಥಿಗಳೆಲ್ಲರೂ ಅನುತ್ತೀರ್ಣಗೊಂಡಿದ್ದಾರೆ.

ಪುರುಷರ ಮಾನದಂಡವೇ ಅಡ್ಡಿ: ಪೊಲೀಸ್‌ ಇಲಾಖೆ ಸೇರುವ ತೃತೀಯ ಲಿಂಗಿಗಳ ಕನಸಿಗೆ ದೈಹಿಕ ಪರೀಕ್ಷೆಯಲ್ಲಿ ಪುರುಷರ ಮಾನದಂಡ ವಿಧಿಸಿರುವುದು ಅಡ್ಡಿಯಾಗಿ ಪರಿಣಮಿಸಿದೆ.

ಸಾಮಾನ್ಯ ಪುರುಷರಿಗೆ ವಿಧಿಸಿರುವಂತೆ ನಿಗದಿತ ಕಾಲಮಿತಿಯಲ್ಲಿ 1,600 ಮೀಟರ್‌ ಓಟ, ಲಾಂಗ್‌ಜಂಪ್‌, ಹೈಜಂಪ್‌ ಮೊದಲಾದ ಮಾನದಂಡವನ್ನೇ ತೃತೀಯ ಲಿಂಗಿಗಳಿಗೂ ವಿಧಿಸಲಾಗಿದೆ. ಇದರಿಂದಾಗಿ ಹಾರ್ಮೋನ್‌ ವ್ಯತ್ಯಾಸದಿಂದ ದೈಹಿಕವಾಗಿ ಪುರುಷರಷ್ಟು ಸಾಮರ್ಥ್ಯ ಹೊಂದಿಲ್ಲದ ತೃತೀಯ ಲಿಂಗಿಗಳು ದೈಹಿಕ ಪರೀಕ್ಷೆಯಲ್ಲಿ ಫೇಲ್‌ ಆಗಿದ್ದಾರೆ. ದೈಹಿಕ ಪರೀಕ್ಷೆಯಲ್ಲಿ ಪಾಸ್‌ ಆದವರಿಗೆ ನೇಮಕಾತಿ ವೇಳೆ ವೈದ್ಯಕೀಯ ಪರೀಕ್ಷೆ ಇರುತ್ತದೆ. ಆದರೆ ಈಗ ದೈಹಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿರುವುದರಿಂದ ವೈದ್ಯಕೀಯ ಪರೀಕ್ಷೆಗೆ ಹಾಜರಾಗುವುದರಿಂದ ವಂಚಿತಗೊಂಡಂತಾಗಿದೆ.

ಈ ಹಿನ್ನೆಲೆಯಲ್ಲಿ ಪುರುಷರ ಮಾನದಂಡ ಸಡಿಲಿಸಿ ಮರು ದೈಹಿಕ ಪರೀಕ್ಷೆ ನಡೆಸುವಂತೆ ಆಗ್ರಹಿಸುತ್ತಿದ್ದಾರೆ. ಬಹುತೇಕ ತೃತೀಯ ಲಿಂಗಿಗಳು 29ರ ವಯೋಮಾನ ಮೀರಿದ್ದಾರೆ. ಹಾಗಾಗಿ ವಯೋಮಾನದ ಮಿತಿಯನ್ನೂ ಏರಿಕೆ ಮಾಡುವಂತೆ ಒತ್ತಾಯಿಸುತ್ತಿದ್ದಾರೆ.

ತೃತೀಯ ಲಿಂಗಿಗಳಲ್ಲಿ 10ನೇ ತರಗತಿಯಿಂದ ಎಂಜಿನಿಯರಿಂಗ್‌ ವರೆಗೆ ಪದವಿ ಪಡೆದವರಿದ್ದಾರೆ. ಸರಿಯಾದ ಉದ್ಯೋಗವಿಲ್ಲದ ಕಾರಣ ಭಿಕ್ಷಾಟನೆಯಲ್ಲಿ ತೊಡಗಿಸಿಕೊಂಡಿರುತ್ತಾರೆ.

2 ವರ್ಷದ ಹಿಂದೆ ನಾನು ಅರ್ಜಿ ಸಲ್ಲಿಸಿದ್ದು, ಈಗ ನನಗೆ 30 ವರ್ಷ. ಹಾಗಾಗಿ ಅರ್ಜಿ ಸಲ್ಲಿಕೆಯ ವಯೋಮಿತಿಯನ್ನು ಏರಿಕೆ ಮಾಡಬೇಕು. ಅಲ್ಲದೆ ತೃತೀಯ ಲಿಂಗಿಗಳಿಗೆ ಪುರುಷರ ದೈಹಿಕ ಅರ್ಹತಾ ಪರೀಕ್ಷೆಯನ್ನು ಮಾನದಂಡವಾಗಿ ಪರಿಗಣಿಸಬಾರದು. ಹೀಗಾಗಿ ಮತ್ತೆ ಮರು ದೈಹಿಕ ಪರೀಕ್ಷೆ ನಡೆಸಬೇಕು.

-ಗಗನಶ್ರೀ ಚಿಕ್ಕಮಗಳೂರು, ದೈಹಿಕ ಪರೀಕ್ಷೆ ಅನುತ್ತೀರ್ಣಗೊಂಡ ತೃತೀಯ ಲಿಂಗಿ ಅಭ್ಯರ್ಥಿಸರ್ಕಾರದ ಈ ಮಾನದಂಡ ತೃತೀಯ ಲಿಂಗಿಗಳಿಗೆ ಒಂದು ಕೈಯಲ್ಲಿ ಉದ್ಯೋಗದ ಅವಕಾಶ ನೀಡಿ, ಇನ್ನೊಂದು ಕೈನಿಂದ ಕಿತ್ತುಕೊಳ್ಳುವ ಕೆಲಸ ಮಾಡಿದಂತಾಗುತ್ತದೆ. ಉದ್ಯೋಗದಲ್ಲಿ ಮೀಸಲಾತಿ ನೀಡಿದ ಸರ್ಕಾರ, ಆಯ್ಕೆ ಪ್ರಕ್ರಿಯೆಯಲ್ಲಿ ವಯೋಮಾನ ಹೆಚ್ಚಳ ಹಾಗೂ ದೈಹಿಕ ಅರ್ಹತಾ ಪರೀಕ್ಷೆಯಲ್ಲಿ ಮಾನದಂಡ ಸಡಿಲ ಮಾಡಬೇಕು. ಆಗ ಮಾತ್ರ ತೃತೀಯ ಲಿಂಗಿಗಳು ಸರ್ಕಾರಿ ಉದ್ಯೋಗಕ್ಕೆ ಸೇರ್ಪಡೆಯಾಗಲು ಸಾಧ್ಯ.

-ಡಾ.ರೇಷ್ಮಾ ಉಳ್ಳಾಲ್‌, ತೃತೀಯ ಲಿಂಗಿಗಳ ಕುರಿತ ಸಂಶೋಧಕಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!