ವದಂತಿ: ಕೆವೈಸಿ ಅಪ್ಡೇಟ್‌ಗಾಗಿ ಸಾಲುಗಟ್ಟಿ ನಿಂತ ಜನತೆ

KannadaprabhaNewsNetwork | Updated : Dec 28 2023, 01:47 AM IST

ಸಾರಾಂಶ

ಇ-ಕೆವೈಸಿ ಮಾಡಿಸಲು ಡಿ. 31ರ ವರೆಗೆ ಮಾತ್ರ ಅವಕಾಶವಿದ್ದು, ನಂತರ ಇ-ಕೆವೈಸಿ ಮಾಡಿಸಿದರೆ ಸಬ್ಸಿಡಿ ಹಣ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ ಎಂಬ ವದಂತಿ ಎಲ್ಲೆಡೆ ಹರಡಿದೆ.

- ಹೊಸ ವರ್ಷದ ನಂತರ ಕಡಿಮೆ ಹಣಕ್ಕೆ ಸಿಲಿಂಡರ್ ಸಿಗುತ್ತದೆ ಎಂಬ ವದಂತಿ

- ಗ್ಯಾಸ್ ಏಜೆನ್ಸಿಗಳ ಮುಂದೆ ಕ್ಯೂ ನಿಂತ ಜನ

- ಮುಂದಿನ‌ ದಿನಗಳಲ್ಲಿ ₹500ಕ್ಕೆ ಸಿಲಿಂಡರ್ ಸಿಗುತ್ತದೆ ಎನ್ನುವ ವದಂತಿಅಜೀಜಅಹ್ಮದ ಬಳಗಾನೂರ

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಸಾಮಾಜಿಕ ಜಾಲತಾಣಗಳಲ್ಲಿ ಡಿ. 31ರೊಳಗೆ ಇ-ಕೆವೈಸಿ ಮಾಡಿಸದಿದ್ದರೆ ಗ್ಯಾಸ್‌ ಸಿಲಿಂಡರ್‌ಗಳ ಸಂಪರ್ಕ ಕಡಿತಗೊಳ್ಳಲಿದೆ ಎಂಬ ವದಂತಿ ಹಿನ್ನೆಲೆಯಲ್ಲಿ ಹು-ಧಾ ಮಹಾನಗರ ಸೇರಿದಂತೆ ಜಿಲ್ಲಾದ್ಯಂತ ಕಳೆದ 2-3 ದಿನಗಳಿಂದ ಗ್ಯಾಸ್‌ ಪೂರೈಕೆ ಮಾಡುವ ಏಜೆನ್ಸಿಗಳ ಮುಂದೆ ಬೆಳಗ್ಗೆಯಿಂದ ಸಾವಿರಾರು ಜನರು ಸರದಿಯಲ್ಲಿ ನಿಂತಿದ್ದಾರೆ.

ಹಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಈಗಿರುವ ಸಂಪರ್ಕ ಮುಂದುವರಿಯಲು ಎಲ್ಲರೂ ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಬೇಕು. ಕೇಂದ್ರ ಸರ್ಕಾರದಿಂದ ಗ್ಯಾಸ್ ಸಂಪರ್ಕ ಹೊಂದಿರುವ ಗ್ರಾಹಕರ ಬ್ಯಾಂಕ್ ಖಾತೆಗೆ ₹5 ಸಾವಿರ ಸಬ್ಸಿಡಿ ಹಣ ಜಮಾ ಮಾಡಲಾಗುತ್ತದೆ. ಇ-ಕೆವೈಸಿ ಮಾಡಿಸಲು ಡಿ. 31ರ ವರೆಗೆ ಮಾತ್ರ ಅವಕಾಶವಿದ್ದು, ನಂತರ ಇ-ಕೆವೈಸಿ ಮಾಡಿಸಿದರೆ ಸಬ್ಸಿಡಿ ಹಣ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ ಎಂಬ ವದಂತಿ ಹರಡಿರುವುದು ಈ ಅವಾಂತರಕ್ಕೆ ಕಾರಣವಾಗಿದೆ.

ಬೆಳಗ್ಗೆ 6ಕ್ಕೆ ಸರದಿ:

ಕಳೆದ 2-3 ದಿನಗಳಿಂದ ಇದರ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಮೊದಮೊದಲು ಬೆರಳೆಣಿಕೆಯ ಸಂಖ್ಯೆಯಲ್ಲಿದ್ದರೆ ಈಗ ನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ಗ್ರಾಹಕರು ಗ್ಯಾಸ್‌ ಏಜೆನ್ಸಿಗಳ ಮುಂದೆ ಮಹಿಳೆಯರು, ವೃದ್ಧರು, ಮಕ್ಕಳು ಕಾದು ಕುಳಿತಿದ್ದಾರೆ. ದಿನಕ್ಕೆ ಒಂದೊಂದು ಏಜೆನ್ಸಿ ಕೇಂದ್ರಗಳಲ್ಲಿ 200ಕ್ಕೂ ಅಧಿಕ ಪಾಸ್‌ಬುಕ್‌ಗಳ ಅಪ್ಡೇಟ್‌ ಮಾಡಲಾಗುತ್ತಿದೆ. ಆದರೂ ನಿಯಂತ್ರಣಕ್ಕೆ ಬರುತ್ತಿಲ್ಲ ಎಂಬುದು ಏಜೆನ್ಸಿ ಮಾಲೀಕರ ಅಳಲು.

ನೋಂದಣಿಗೆ ದಿನ ನಿಗದಿಯಾಗಿಲ್ಲ:

ಈ ಕುರಿತು ಗ್ಯಾಸ್‌ ಏಜೆನ್ಸಿಯವರಿಗೆ ಕೇಳಿದರೆ. ಯಾವುದೇ ರೀತಿಯ ಸಬ್ಸಿಡಿಯಾಗಲಿ, ಬುಕ್‌ ರದ್ದಾಗಲಿದೆ ಎಂಬ ಮಾಹಿತಿಯಿಲ್ಲ. ಕಳೆದ 8-10 ವರ್ಷಗಳಿಂದ ಹಲವರು ಸಿಲಿಂಡರ್‌ ತೆಗೆದುಕೊಳ್ಳುವ ಕಾರ್ಡ್‌ಗಳ ಅಪ್ಡೇಟ್‌ ಮಾಡಿಲ್ಲ. ಅಂಥವರು ಏಜೆನ್ಸಿಗೆ ಬಂದು ಇ-ಕೆವೈಸಿ ಅಪ್ಡೇಟ್‌ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ಗ್ರಾಹಕರು ಸಿಲಿಂಡರ್‌ ಹೋಂ ಡಿಲೇವರಿ ತೆಗೆದುಕೊಳ್ಳುವ ವೇಳೆ ಇ-ಕೆವೈಸಿ ಅಪ್ಡೇಟ್‌ ಮಾಡಿಸಬಹುದು. ತೊಂದರೆದಾಯಕ ಇರುವ ಕಾರ್ಡ್‌ಗಳನ್ನಷ್ಟೇ ಏಜೆನ್ಸಿಗೆ ತೆರಳಿ ಅಲ್ಲಿ ಅಪ್ಡೇಟ್‌ ಮಾಡಿಸುವಂತೆ ತಿಳಿಸಲಾಗಿದೆ. ಡಿ. 31ರೊಳಗೆ ಅಪ್ಡೇಟ್‌ ಮಾಡಿಸಬೇಕು ಎಂದು ಎಲ್ಲಿಯೂ ಹೇಳಿಲ್ಲ. ಯಾವಾಗ ಬೇಕಾದರೂ ಬಂದು ಇ-ಕೆವೈಸಿ ಅಪ್ಡೇಟ್‌ ಮಾಡಿಸಬಹುದಾಗಿದೆ. ಆದರೆ, ಯಾರೋ ಸುಳ್ಳು ಸುದ್ದಿ ಹರಡಿರುವುದರಿಂದ ಅದನ್ನೇ ನಿಜವೆಂದು ನಂಬಿದ ಗ್ರಾಹಕರು ಈ ರೀತಿಯಾಗಿ ಸರದಿಯಲ್ಲಿ ನಿಂತು ಅಪ್ಡೇಟ್‌ ಮಾಡಿಸುತ್ತಿದ್ದಾರೆ ಎಂದು ಏಜೆನ್ಸಿಯ ಸಿಬ್ಬಂದಿ ಮಂಗಳಾ ಎಂಬುವವರು ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.

ಯಾರನ್ನೇ ಕೇಳಿದರೂ ಇದನ್ನೇ ಹೇಳುತ್ತಾರೆ. ಡಿ. 31ರೊಳಗೆ ಇ-ಕೆವೈಸಿ ಅಪ್ಡೇಟ್‌ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ನಿಮ್ಮ ಕಾರ್ಡ್‌ ರದ್ದಾಗಲಿವೆ ಎನ್ನುತ್ತಿದ್ದಾರೆ. ಇದರಿಂದ ಭಯವಾಗಿ ಬೆಳಗ್ಗೆ 6ಗಂಟೆಗೆ ಗ್ಯಾಸ್‌ ಏಜೆನ್ಸಿ ಅಂಗಡಿಯ ಮುಂದೆ ಆಗಮಿಸಿ ಸರದಿಯಲ್ಲಿ ನಿಂತು ಕಾರ್ಡ್‌ ಅಪ್ಡೇಟ್‌ ಮಾಡಿಸಿಕೊಳ್ಳುತ್ತಿದ್ದೇನೆ ಎಂದು ಇ-ಕೆವೈಸಿ ಅಪ್ಡೇಟ್‌ ಮಾಡಿಸಲು ಬಂದ ಮಹಿಳೆ ಶ್ರೀದೇವಿ ಕರಿ ಹೇಳಿದರು.

ಇದೆಲ್ಲ ಸುಳ್ಳು ಸುದ್ದಿ. ಇ-ಕೆವೈಸಿ ಅಪ್ಡೇಟ್‌ ಮಾಡಿಸಲು ಸೂಚಿಸಲಾಗಿದೆ. ಇದಕ್ಕೆ ಡಿ. 31 ಕೊನೆಯ ದಿನ ಎಂದು ಎಲ್ಲಿಯೂ ಹೇಳಿಲ್ಲ. ಈ ಕುರಿತು ಹೊರಗೆ ಸೂಚನಾ ಫಲಕವನ್ನೂ ಹಾಕಲಾಗಿದೆ. ಆದರೆ, ಜನರು ಕೇಳುತ್ತಲೇ ಇಲ್ಲ. ಇಂದೇ ನಮ್ಮ ಕಾರ್ಡ್‌ನ ಇ-ಕೆವೈಸಿ ಮಾಡಿಕೊಡಿ ಎನ್ನುತ್ತಿದ್ದಾರೆ ಎನ್ನುತ್ತಾರೆ ಎಚ್‌ಪಿ ಗ್ಯಾಸ್‌ ಏಜೆನ್ಸಿ ಸಿಬ್ಬಂದಿ ಅರವಿಂದ,

Share this article