ಮತದಾರರ ಹೆಸರು ಡಿಲೀಟ್ ವದಂತಿ; ತಹಸೀಲ್ದಾರ್ ಕಚೇರಿಗೆ ದೌಡು

KannadaprabhaNewsNetwork |  
Published : Sep 29, 2026, 02:30 AM IST
ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಡಲಾಗಿದೆ ಎಂಬ ವದಂತಿ ಹಿನ್ನೆಲೆಯಲ್ಲಿ ಸೋಮವಾರ ಕಂಪ್ಲಿ ತಹಸೀಲ್ದಾರ್ ಕಚೇರಿಗೆ ಆಗಮಿಸಿ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತಿರುವ ಸಾರ್ವಜನಿಕರು. | Kannada Prabha

ಸಾರಾಂಶ

ಮತದಾರರ ಪಟ್ಟಿಯಿಂದ ತಮ್ಮ ಹೆಸರುಗಳನ್ನು ಕೈಬಿಡಲಾಗಿದೆ ಎಂಬ ವದಂತಿ ನಂಬಿದ 13, 9 ಹಾಗೂ 15ನೇ ವಾರ್ಡ್‌ಗಳ ಕೆಲ ಮತದಾರರು ಸೋಮವಾರ ಇಲ್ಲಿನ ತಹಸೀಲ್ದಾರ್ ಕಚೇರಿಗೆ ಏಕಾಏಕಿ ತೆರಳಿ ಅಧಿಕಾರಿಗಳನ್ನು ಪ್ರಶ್ನಿಸಿದ ಘಟನೆ ನಡೆಯಿತು.

ಕನ್ನಡಪ್ರಭ ವಾರ್ತೆ ಕಂಪ್ಲಿಮತದಾರರ ಪಟ್ಟಿಯಿಂದ ತಮ್ಮ ಹೆಸರುಗಳನ್ನು ಕೈಬಿಡಲಾಗಿದೆ ಎಂಬ ವದಂತಿ ನಂಬಿದ 13, 9 ಹಾಗೂ 15ನೇ ವಾರ್ಡ್‌ಗಳ ಕೆಲ ಮತದಾರರು ಸೋಮವಾರ ಇಲ್ಲಿನ ತಹಸೀಲ್ದಾರ್ ಕಚೇರಿಗೆ ಏಕಾಏಕಿ ತೆರಳಿ ಅಧಿಕಾರಿಗಳನ್ನು ಪ್ರಶ್ನಿಸಿದ ಘಟನೆ ನಡೆಯಿತು.ಮತದಾರರ ಪಟ್ಟಿಯಲ್ಲಿ ಹಲವು ಮತದಾರರ ಹೆಸರುಗಳನ್ನು ಉದ್ದೇಶಪೂರ್ವಕವಾಗಿ ಕೈಬಿಡಲಾಗುತ್ತಿದೆ ಎಂಬ ಮಾಹಿತಿ ಹರಡಿದ್ದರಿಂದ ಸಾರ್ವಜನಿಕರಲ್ಲಿ ಆತಂಕ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಕಚೇರಿಗೆ ಆಗಮಿಸಿದ ಕೆಲವರು ಅಧಿಕಾರಿಗಳ ಬಳಿ ಈ ಕುರಿತು ಸ್ಪಷ್ಟನೆ ನೀಡುವಂತೆ ಒತ್ತಾಯಿಸಿದರು. ಇದರಿಂದ ಕೆಲಕಾಲ ಕಚೇರಿ ಆವರಣದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು.ಈ ಸಂದರ್ಭದಲ್ಲಿ ತಹಸೀಲ್ದಾರ್ ಜೂಗಲ ಮಂಜುನಾಯಕ ಅವರು ಸಾರ್ವಜನಿಕರಿಗೆ ಮಾಹಿತಿ ನೀಡಿ, ಕರಡು ಮತದಾರರ ಪಟ್ಟಿ ಪ್ರಕಟಿಸಿದ ಬಳಿಕ ಮೃತಪಟ್ಟಿರುವ ಒಬ್ಬ ಮತದಾರರ ಹೆಸರನ್ನು ಮಾತ್ರ ನಿಯಮಾನುಸಾರ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಯಾವುದೇ ಅರ್ಹ ಮತದಾರರ ಹೆಸರನ್ನು ಉದ್ದೇಶಪೂರ್ವಕವಾಗಿ ಕೈಬಿಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು.ಮತದಾರರ ಪಟ್ಟಿಯಿಂದ ದೊಡ್ಡ ಸಂಖ್ಯೆಯಲ್ಲಿ ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿದೆ ಎಂಬುದು ಸುಳ್ಳು ವದಂತಿಯಾಗಿದೆ. ಇಂತಹ ಮಾಹಿತಿಯನ್ನು ನಂಬಿ ಸಾರ್ವಜನಿಕರು ಕಚೇರಿಗೆ ವಿಚಾರಿಸಲು ಆಗಮಿಸಿದ್ದು, ಅವರಿಗೆ ವಾಸ್ತವಾಂಶವನ್ನು ವಿವರಿಸಿ ಸೂಕ್ತ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದರು.ಅರ್ಹ ಮತದಾರರ ಹೆಸರುಗಳನ್ನು ಯಾವುದೇ ಕಾರಣಕ್ಕೂಪಟ್ಟಿಯಿಂದ ಕೈಬಿಡುವುದಿಲ್ಲ. ಅದೇ ರೀತಿ ಅನರ್ಹರನ್ನು ಮತದಾರರ ಪಟ್ಟಿಗೆ ಸೇರಿಸಲು ಅವಕಾಶ ನೀಡಲಾಗುವುದಿಲ್ಲ. ಮತದಾರರ ಪಟ್ಟಿಗೆ ಸಂಬಂಧಿಸಿದ ಯಾವುದೇ ಅನುಮಾನಗಳಿದ್ದಲ್ಲಿ ಸಾರ್ವಜನಿಕರು ನೇರವಾಗಿ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬೇಕು ಎಂದು ಹೇಳಿದರು.ನೋಟಿಸ್‌ ಕುರಿತು ವದಂತಿ:ಮುಸ್ಲಿಂ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರದೇಶಗಳಲ್ಲಿ ಬೂತ್‌ಮಟ್ಟದ ಅಧಿಕಾರಿಗಳು (ಬಿಎಲ್‌ಒ) 200ರಿಂದ 300 ಮಂದಿಗೆ ನೋಟಿಸ್ ನೀಡಲು ಮುಂದಾಗಿದ್ದಾರೆ ಎಂಬ ವದಂತಿ ಹರಡಿತ್ತು ಎನ್ನಲಾಗಿದೆ. ಅಲ್ಲದೆ, ಬಿಜೆಪಿ ಬಿಎಲ್‌ಎ-2ಗಳು ಕೂಡ ನಮೂನೆ-7ರ ಮೂಲಕ ಆಕ್ಷೇಪಣೆ ಸಲ್ಲಿಸಲು ಮುಂದಾಗಿದ್ದಾರೆ ಎಂಬ ಮಾಹಿತಿಯೂ ಸಾರ್ವಜನಿಕರಲ್ಲಿ ಹರಿದಾಡಿತ್ತು.ಈ ಹಿನ್ನೆಲೆಯಲ್ಲಿ ಕೆಲವರು ಯಾವುದೇ ಅಧಿಕೃತ ಮಾಹಿತಿ ಖಚಿತಪಡಿಸಿಕೊಳ್ಳದೆ ತಹಸೀಲ್ದಾರ್ ಕಚೇರಿಗೆ ಏಕಾಏಕಿ ಆಗಮಿಸಿ ಅಧಿಕಾರಿಗಳಿಂದ ಸ್ಪಷ್ಟನೆ ಕೇಳಿದರು ಎಂದು ತಿಳಿದುಬಂದಿದೆ.ಮತದಾರರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರುವುದನ್ನು ಪರಿಶೀಲಿಸಿಕೊಳ್ಳಬೇಕು. ಪಟ್ಟಿಗೆ ಸಂಬಂಧಿಸಿದ ಯಾವುದೇ ಆಕ್ಷೇಪಣೆ ಅಥವಾ ಅನುಮಾನಗಳಿದ್ದರೆ ನಿಗದಿತ ನಿಯಮ ಹಾಗೂ ಪ್ರಕ್ರಿಯೆಯಂತೆ ಅರ್ಜಿ ಸಲ್ಲಿಸಬೇಕು. ವದಂತಿಗಳಿಗೆ ಕಿವಿಗೊಡದೆ ಅಧಿಕೃತ ಮಾಹಿತಿಯನ್ನು ಮಾತ್ರ ಪರಿಗಣಿಸಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವೈದ್ಯರ ಕರ್ತವ್ಯಕ್ಕೆ ಅಡ್ಡಿಪಡಿಸಿದರೆ ಕ್ರಮ ಅಗತ್ಯ: ರಮಿತಾ
ಮೂಡ್ಲಕಟ್ಟೆ ನರ್ಸಿಂಗ್‌ ಕಾಲೇಜಿನಿಂದ ಆತ್ಮಹತ್ಯೆ ತಡೆ ಮಾಸಾಚರಣೆ