ಲೋಕೋ ಪೈಲೆಟ್‌, ರೈಲ್ವೆ ಮ್ಯಾನೇಜರ್‌ಗಳ ವಿಶ್ರಾಂತಿಗೆ ರನ್ನಿಂಗ್‌ ರೂಮ್‌ ನಿರ್ಮಾಣ: ವಿಷ್ಣು ಭೂಷನ್

KannadaprabhaNewsNetwork | Published : Apr 21, 2025 12:57 AM

ಸಾರಾಂಶ

ಬೇರೆ ಬೇರೆ ಕಡೆಯಿಂದ ಹುಬ್ಬಳ್ಳಿಗೆ ಆಗಮಿಸುವ ಗೋಡ್ಸ್‌, ಪ್ಯಾಸೆಂಜರ್ ರೈಲುಗಳ ಲೋಕೋ ಪೈಲೆಟ್, ಸಹ ಲೋಕೋ ಪೈಲೆಟ್ ಹಾಗೂ ಮ್ಯಾನೇಜರ್‌ಗಳಿಗೆ ಮಾತ್ರ ಈ ರನ್ನಿಂಗ್ ರೂಮಗಳ ಸೇವೆ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಹುಬ್ಬಳ್ಳಿ: ನೈಋತ್ಯ ರೈಲ್ವೆ ಹುಬ್ಬಳ್ಳಿ ವಿಭಾಗದಿಂದ ಲೋಕೋ ಪೈಲೆಟ್, ಸಹ ಲೋಕೋ ಪೈಲೆಟ್ ಹಾಗೂ ರೈಲ್ವೆ ಮ್ಯಾನೇಜರ್‌ಗಳ ವಿಶ್ರಾಂತಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಹೊಸದಾಗಿ ‘ರನ್ನಿಂಗ್ ರೂಮ್’ ನಿರ್ಮಿಸಲಾಗಿದೆ ಎಂದು ಎಡಿಷನಲ್ ರೈಲ್ವೆ ಮ್ಯಾನೇಜರ್ ವಿಷ್ಣು ಭೂಷನ್ ತಿಳಿಸಿದರು.

ನಗರದ ಶ್ರೀ ಸಿದ್ಧಾರೂಢ ಸ್ವಾಮಿ ರೈಲು ನಿಲ್ದಾಣದ ಆವರಣದಲ್ಲಿರುವ ರೈಲ್ವೆ ರನ್ನಿಂಗ್ ರೂಮ್‌ನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಬೇರೆ ಬೇರೆ ಕಡೆಯಿಂದ ಹುಬ್ಬಳ್ಳಿಗೆ ಆಗಮಿಸುವ ಗೋಡ್ಸ್‌, ಪ್ಯಾಸೆಂಜರ್ ರೈಲುಗಳ ಲೋಕೋ ಪೈಲೆಟ್, ಸಹ ಲೋಕೋ ಪೈಲೆಟ್ ಹಾಗೂ ಮ್ಯಾನೇಜರ್‌ಗಳಿಗೆ ಮಾತ್ರ ಈ ರನ್ನಿಂಗ್ ರೂಮಗಳ ಸೇವೆ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಇದನ್ನು ಹೊರತುಪಡಿಸಿ ಬೇರೆ ಯಾವುದೇ ವಿಭಾಗದ ರೈಲ್ವೆ ಅಧಿಕಾರಿ ಮತ್ತು ಸಿಬ್ಬಂದಿಗೆ ಅವಕಾಶ ಇರುವುದಿಲ್ಲ ಎಂದರು.

ವಿಶ್ರಾಂತಿಗೆ ಆಗಮಿಸುವ ರೈಲ್ವೆ ಫೈಲೆಟ್‌ಗಳ ವಾಕಿಟಾಕಿ ಚಾರ್ಜಿಂಗ್, ಬಟ್ಟೆಗಳನ್ನು ಐರನ್ ಮಾಡಿಕೊಳ್ಳಲು ಹಾಗೂ ತಮ್ಮಿಷ್ಟದ ಅಡುಗೆ ಬಿಸಿ ಮಾಡಿಕೊಳ್ಳಲು ಅವಕಾಶ ಇರಲಿದೆ. ಒಬ್ಬ ಪೈಲೆಟ್ ಗರಿಷ್ಠ 8 ಗಂಟೆಗಳ ಕಾಲ ಮಾತ್ರ ವಿಶ್ರಾಂತಿ ಮಾಡಲು ಅವಕಾಶ ಇದೆ, ನಿತ್ಯ 50ಕ್ಕೂ ಹೆಚ್ಚು ಜನರು ಈ ಸೇವೆಯ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ.

ಮಹಿಳಾ ಪೈಲೆಟ್‌ಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ರನ್ನಿಂಗ್ ರೂಮ್‌ಗಳ ನಿರ್ವಹಣೆಗೆ ಒಟ್ಟು 52 ಜನ ಗುತ್ತಿಗೆ ಸಿಬ್ಬಂದಿ ನೇಮಿಸಲಾಗಿದೆ.

ಏನೇನಿದೆ?: ಈಗ ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಬಳಿ ಅತ್ಯಾಧುನಿಕ ಸೌಲಭ್ಯ ಹಾಗೂ ಸಂಪೂರ್ಣ ಹವಾನಿಯಂತ್ರಕ ವ್ಯವಸ್ಥೆಯ 36 ರೂಮ್ ಮತ್ತು 72 ಬೆಡ್ ಒಳಗೊಂಡ ನೂತನ ರನ್ನಿಂಗ್ ರೂಮ್ ನಿರ್ಮಿಸಲಾಗಿದೆ. ಒಂದು ರೂಮ್‌ನಲ್ಲಿ ಎರಡು ಬೆಡ್ ವ್ಯವಸ್ಥೆ, ಶೌಚಾಲಯ, ಕುಡಿಯುವ ನೀರು, ಸೊಳ್ಳೆ ಪರದೆ ಸೇರಿದಂತೆ ಇತರೆ ಎಲ್ಲ ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದೆ .

ರನ್ನಿಂಗ್ ರೂಮ್‌ನ ಜತೆಗೆ ಲೋಕೋ ಪೈಲೆಟ್‌ಗಳಿಗೆ ಕೇವಲ ₹5 ಕನಿಷ್ಠ ದರದಲ್ಲಿ ಶುಚಿ- ರುಚಿಯಾದ ಊಟ-ಉಪಹಾರ ನೀಡಲಾಗುತ್ತಿದೆ. ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಧ್ಯಾನ, ಯೋಗಾಸನ, ಪುಟ್ ಮಸಾಜರ್ ಹಾಗೂ ಒಳಾಂಗಣ ಕ್ರೀಡೆಗಳಿಗೂ (ಕೇರಮ್ ಮತ್ತು ಚೆಸ್ ಆಟಕ್ಕೆ) ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ. ಇದರ ಜತೆಗೆ ಪುಸ್ತಕ ಪ್ರೀಯರಿಗೆ ಗ್ರಂಥಾಲಯವನ್ನು ನಿರ್ಮಿಸಲಾಗಿದ್ದು, ಸುರಕ್ಷತೆಯ ದೃಷ್ಠಿಯಿಂದ ಎಲ್ಲೆಡೆ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ ಎಂದರು.

ಎಷ್ಟಿವೆ?: ಹುಬ್ಬಳ್ಳಿ ವಿಭಾಗದಲ್ಲಿ ವಿವಿಧೆಡೆ ಈಗಾಗಲೇ 9 ರನ್ನಿಂಗ್ ರೂಮಗಳನ್ನು ನಿರ್ಮಿಸಲಾಗಿದ್ದು, ಒಟ್ಟು 431 ಬೆಡ್ ಸಾಮರ್ಥ್ಯ ಒಳಗೊಂಡಿವೆ.ಸುದ್ದಿಗೋಷ್ಠಿಯಲ್ಲಿ ಸಿನಿಯರ್ ಡಿವಿಜನ್ ಮೆಕ್ಯಾನಿಕಲ್ ಎಂಜಿನೀಯರ್(ಪವರ್) ಜೆ.ಎಸ್. ರುದ್ರಸ್ವಾಮಿ, ಸಾರ್ವಜನಿಕ ಸಂಪರ್ಕಾಕಾರಿಗಳಾದ ರಾಜಕುಮಾರ ಡಿ, ರಾಧಾರಾಣಿ ಸೇರಿದಂತೆ ಅನೇಕರಿದ್ದರು.

Share this article