ಕನ್ನಡಪ್ರಭ ವಾರ್ತೆ, ತುಮಕೂರು
ನಗರದ ಕನ್ನಡ ಭವನದಲ್ಲಿ ಜಿ.ಸೋಮಶೇಖರದಾಸ್ ಪ್ರತಿಷ್ಠಾನ ಬೆಂಗಳೂರು ಇವರು, ಚಿರಂತ ಸಾಂಸ್ಕೃತಿಕ ಟ್ರಸ್ಟ್ ಮತ್ತು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ಹರಿದಾಸರ ಸಮಾವೇಶ-2025ನ್ನು ಉದ್ಭಾಟಿಸಿ ಮಾತನಾಡಿದರು. ಸುಗಮ ಸಂಗೀತ, ನೃತ್ಯ, ಗಮಕ ಇಂತಹ ಕಲೆಗಳಿಗೆ ಅದರದ್ದೇ ಪ್ರೇಕ್ಷಕರ ವರ್ಗವಿದೆ. ಆದರೆ ಹರಿಕಥೆಗೆ ಎಲ್ಲಾ ವರ್ಗದ ಪ್ರೇಕ್ಷಕರು ಸಹ ಆಗಮಿಸಿ, ಕೇಳಿ ಆಸ್ವಾದಿಸುತ್ತಾರೆ. ಇದು ಉಳಿದು ಬೆಳೆಯಬೇಕಿದೆ ಎಂದರು.
ನಾನು ಸಹ ಬಾಲ್ಯದಿಂದಲೂ ಹರಿಕಥೆಯನ್ನು ಕೇಳಿ ಬೆಳದವ. ಕಾಲೇಜು ದಿನಗಳಲ್ಲಿ ಗುರುರಾಜುಲುನಾಯ್ಡು ಅವರ ಹರಿಕಥಾ ಕಾರ್ಯಕ್ರಮಕ್ಕೆ ತಪ್ಪದೇ ಹೋಗುತ್ತಿದ್ದೇ, ನನ್ನ ಗಾಯನದ ಮೇಲೆ ಹರಿಕಥೆಯ ಪ್ರಭಾವವಿದೆ. ಹರಿಕಥೆ ಮಾಡುವುದು ಸುಲಭವಲ್ಲ. ಬಹಳ ಕ್ಲಿಷ್ಟಕರವಾದ ಕಲೆ. ಶರೀರದ ಜೊತೆಗೆ, ಶಾರೀರವೂ ಮುಖ್ಯ. ನವರಸಗಳನ್ನು ಒಳಗೊಂಡು ಒಂದು ಸಂಕೀರ್ಣ ಕಲೆ. ಹಾಗಾಗಿ ಪುರಾಣಗಳು, ರಾಮಾಯಣ, ಮಹಾಭಾರತ, ಗೀತೆ ಸೇರಿದಂತೆ ಸಾಹಿತ್ಯಗಳ ಅಧ್ಯಯನ, ನಿರಂತರ ಪರಿಶ್ರಮದಿಂದ ಮಾತ್ರ ಈ ಕ್ಷೇತ್ರದಲ್ಲಿ ಯಶಸ್ಸುಗಳಿಸಲು ಸಾಧ್ಯ. ಆಗ ಮಾತ್ರ ಪರಿಣಾಮಕಾರಿಯಾಗಿ ಪ್ರೇಕ್ಷಕರನ್ನು ತಲುಪಲು ಸಾಧ್ಯ ಎಂದು ಆರ್.ಕೆ.ಪದ್ಮನಾಭನ್ ತಿಳಿಸಿದರು.ಹರಿದಾಸರಿಗೆ ಕನ್ನಡವೇ ಆರಾಧ್ಯ ದೈವ. ನಮ್ಮ ಭಾಷೆಯ ಮೇಲೆ ಹಿಡಿತ ಸಾಧಿಸಿದರೆ, ಇತರೆ ಭಾಷೆಗಳಲ್ಲಿ ಕಾರ್ಯಕ್ರಮ ನೀಡುವಷ್ಟು ಪ್ರೌಢಿಮೆ ಬೆಳೆಸಿಕೊಳ್ಳಬಹುದು. ಹೆಸರಿಗಷ್ಟೇ ಹರಿದಾಸರಾದರೆ ಸಾಲದು, ನಿಜ ಜೀವನದಲ್ಲಿಯೂ ಹರಿದಾಸರಾಗಿ, ನಾಲ್ವರಿಗೆ ಬೇಕಾದ ಮನುಷ್ಯರಾಗಿ ಬದುಕಿ ಎಂದು ಸಲಹೆ ನೀಡಿದ ಅವರು, ಯುವಕರನ್ನು ಈ ಕ್ಷೇತ್ರಕ್ಕೆ ಕರೆತರುವ ನಿಟ್ಟಿನಲ್ಲಿ ಯುವ ಹರಿಕಥಾ ವಿದ್ವಾಂಸ ಸಮಾವೇಶ ನಡೆಸಿದರೆ, ನನ್ನ ಕೈಲಾದ ಧನ ಸಹಾಯ ಮಾಡುವ ಭರವಸೆಯನ್ನು ಆರ್.ಕೆ.ಪದ್ಮನಾಭನ್ ನೀಡಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಜಿ.ಸೋಮಶೇಖರದಾಸ್ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಕಾರ್ಯಕ್ರಮದ ಆಯೋಜಕರಾದ ಜಿ.ಸೋಮಶೇಖರದಾಸ್, ಹರಿಕಥಾ ಕ್ಷೇತ್ರಕ್ಕೆ ಅದರದ್ದೇ ಆದ ಪುರಾತನ ಪರಂಪರೆ ಇದೆ. ತಂಬೂರ ನಾರದರಿಂದ ಆರಂಭವಾಗುವ ಹರಿದಾಸ ಪರಂಪರೆ ತ್ಯಾಗರಾಜರು, ಪುರಂದರ ದಾಸರು, ಕನಕದಾಸರ ಹೀಗೆ ಮುಂದುವರೆದುಕೊಂಡು ಬರುತ್ತಿದೆ. ಆದರೆ ಇತ್ತೀಚಿನ ಸಾಮಾಜಿಕ ಮಾಧ್ಯಮಗಳ ಹಾವಳಿಯಿಂದ ಹರಿಕಥೆ ಕೇಳುವವರು, ಮಾಡುವವರು ಇಬ್ಬರು ಕಡಿಮೆಯಾಗಿದ್ದಾರೆ. ಜಗಕ್ಕೆ ಒಳ್ಳೆಯ ಸಂದೇಶ ನೀಡುವ ಇಂತಹ ಕಲೆಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ನಮ್ಮ ಪ್ರತಿಷ್ಠಾನ ಪ್ರತಿವರ್ಷ ಇಂತಹ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಹರಿದಾಸರಿಗೆ ವೇದಿಕೆ ಕಲ್ಪಿಸುವುದರ ಜೊತೆಗೆ, ಯುವ ಕಲಾವಿದರಿಗೆ ಅವಕಾಶ ಕಲ್ಪಿಸುವ ಕೆಲಸ ಮಾಡುತ್ತಿದೆ.ಇದರ ಜೊತೆಗೆ ವಾದ್ಯ ಕಲಾವಿದರು ಮತ್ತು ಹರಿದಾಸರ ಸಮನ್ವಯದ ಕೊಂಡಿಯಾಗಿ ಈ ಸಮಾವೇಶ ಕೆಲಸ ಮಾಡಲಿದೆ. ದಾಸ ಸಾಹಿತ್ಯ, ಶರಣ ಸಾಹಿತ್ಯ, ಸನಾತನ ಧರ್ಮದ ಉಳಿವಿಗೆ ಹರಿಕಥೆ ಸಹಕಾರಿಯಾಗಿದೆ ಎಂದರು.
ಇದೇ ವೇಳೆ ಕಲಾವಿದರಾದ ಡಾ.ಕಲ್ಕೆರೆ ನರಸಿಂಹಮೂರ್ತಿ, ಜಗದೀಶ್ ಆಚಾರ್, ಬಾಬು, ಕೃಷ್ಣಮೂರ್ತಿ ಕೆಂಗನಹಳ್ಳಿ, ವಿ.ಎನ್.ಅಶ್ವಥ್, ಡಿ.ಡಿ.ಕೃಷ್ಣಪ್ಪ, ನಂಜಪ್ಪ ಶೆಟ್ರು, ಡಿ.ಎನ್.ರಾಮಯ್ಯದಾಸರು, ಶಿವಕುಮಾರಾಚಾರ್, ರಾಜೇಶ್ವರಿ ಅವರುಗಳನ್ನು ಅಭಿನಂದಿಸಲಾಯಿತು.