ಸೈಕ್ಲಿಂಗ್ ಪ್ರೇಮಿಗಳ ಸೆಳೆಯುವ ರೂಪಾಲಿ ಬೇರಿ

KannadaprabhaNewsNetwork |  
Published : Jun 03, 2026, 01:30 AM IST
 ತಮ್ಮ ಸೈಕಲ್‌ ಜೊತೆಗೆ ರೂಪಾಲಿ ಬೇರಿ | Kannada Prabha

ಸಾರಾಂಶ

ದೂರದ ಲೂದಿಯಾನದಿಂದ ಬಂದು ಮಲೆನಾಡಿನಲ್ಲಿ ಇಲ್ಲಿನ ಪರಿಸರದ ಜೊತೆಯಾಗಿ ಸೈಕ್ಲಿಂಗ್‌ ಸಾಹಸ ಮಾಡುತ್ತಿರುವ ಯುವತಿ ರೂಪಾಲಿ ಸೈಕ್ಲಿಂಗ್ ಪ್ರೇಮಿಗಳ ಗಮನ ಸೆಳೆಯುತ್ತಿದ್ದಾರೆ.!

ಗೋಪಾಲ್‌ ಯಡಗೆರೆ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ದೂರದ ಲೂದಿಯಾನದಿಂದ ಬಂದು ಮಲೆನಾಡಿನಲ್ಲಿ ಇಲ್ಲಿನ ಪರಿಸರದ ಜೊತೆಯಾಗಿ ಸೈಕ್ಲಿಂಗ್‌ ಸಾಹಸ ಮಾಡುತ್ತಿರುವ ಯುವತಿ ರೂಪಾಲಿ ಸೈಕ್ಲಿಂಗ್ ಪ್ರೇಮಿಗಳ ಗಮನ ಸೆಳೆಯುತ್ತಿದ್ದಾರೆ.!

ಪಂಜಾಬಿನ ಲೂದಿಯಾನ ನಿವಾಸಿಯಾದ ರೂಪಾಲಿ ಬೇರಿಯವರು ಇಲ್ಲಿನ ಶಾಹಿ ಗಾರ್ಮೆಂಟ್‌ನಲ್ಲಿ ಖರೀದಿ ವಿಭಾಗದಲ್ಲಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಎರಡು ವರ್ಷಗಳ ಹಿಂದೆ ಶಿವಮೊಗ್ಗಕ್ಕೆ ಸ್ಥಳಾಂತರಗೊಂಡ ಬಳಿಕ ಇಲ್ಲಿನ ಪರಿಸರ ಕಂಡ ಬಳಿಕ ತಮ್ಮ ಸುದೀರ್ಘ 10 ವರ್ಷದ ಸೈಕ್ಲಿಂಗ್‌ ಅಭ್ಯಾಸ, ಸಾಧನೆಗೆ ಇನ್ನಷ್ಟು ಮೆರಗು ಮೂಡಿಸುವ ಆಸಕ್ತಿ ಹೆಚ್ಚಾಯಿತು. ಇಲ್ಲಿಗೆ ಆಗಮಿಸಿದ ಕೇವಲ 15 ದಿನದಲ್ಲಿಯೇ ಇಲ್ಲಿನ ಸೈಕಲ್‌ ಕ್ಲಬ್‌ನ ಪ್ರಮುಖರನ್ನು ಭೇಟಿ ಮಾಡಿ ಸೈಕ್ಲಿಂಗ್‌ ಲೋಕದ ತಮ್ಮ ಪಯಣ ಮುಂದುವರೆಸಿದರು.

ವಿಶ್ವ ಬೈಸಿಕಲ್‌ ದಿನವಾದ ಜೂನ್‌ 3ರ ಬುಧವಾರದಂದು ತಮ್ಮ 27 ಸಾವಿರ ಕಿ. ಮೀ. ಕ್ರಮಿಸುವ ಸಾಧನೆಯನ್ನು ಪೂರ್ಣಗೊಳಿಸುವ ತವಕದಲ್ಲಿದ್ದಾರೆ.

ಬಾಲ್ಯದಲ್ಲಿ ಖುಷಿಗಾಗಿ ಆರಂಭಿಸಿದ ಸೈಕಲ್‌ ಆಸೆ ಬಳಿಕ ಆರೋಗ್ಯದ ಕಾರಣಕ್ಕೆ ಒಂದು ಅಭ್ಯಾಸವನ್ನಾಗಿ ಮಾಡಿಕೊಂಡರು. ಇದೇ ಅವರ ಹವ್ಯಾಸವಾಯಿತು. ಸಾಧನೆಯ ಹಾದಿ ತೆರೆದುಕೊಂಡಿತು.

ಸೈಕ್ಲಿಂಗ್ ನನಗೆ ಕೇವಲ ಒಂದು ಕ್ರೀಡೆಯಲ್ಲ, ಅದು ನನ್ನ ಜೀವನದ ಅವಿಭಾಜ್ಯ ಅಂಗವಾಗಿದೆ. ಕಳೆದ ಹಲವು ವರ್ಷಗಳಲ್ಲಿ ಹಲವಾರು ಪ್ರಶಸ್ತಿಗಳ ಜೊತೆಗೆ ಸೈಕ್ಲಿಂಗ್ ಪಯಣದ ಅತ್ಯಂತ ಸವಾಲಿನ ಹಾಗೂ ಹೆಮ್ಮೆಯ ಸಾಧನೆಗಳಲ್ಲಿ ಒಂದಾದ ಎಂಟಿಬಿ ಶಿಮ್ಲಾ ಸ್ಪರ್ಧೆಯಲ್ಲಿ ಎರಡು ಬಾರಿ ಪೋಡಿಯಂ ಸ್ಥಾನ ಗಳಿಸಿದ್ದೇನೆ. ಭಾರತದ ಅತ್ಯಂತ ಕಠಿಣ ಮೌಂಟನ್ ಬೈಕಿಂಗ್ ಸ್ಪರ್ಧೆಗಳಲ್ಲಿ ಒಂದೆಂದು ಪರಿಗಣಿಸಲ್ಪಡುವ ಈ ಸ್ಪರ್ಧೆಯ ಏರುದಾರಿಗಳು ಮತ್ತು ದುರ್ಗಮ ಹಾದಿಗಳು ನನಗೆ ಸಹಿಷ್ಣುತೆ, ಧೈರ್ಯ ಹಾಗೂ ಮಾನಸಿಕ ದೃಢತೆಯನ್ನು ಕಲಿಸಿವೆ ಎನ್ನುತ್ತಾರೆ.

ಪಂಜಾಬಿನಿಂದ ಶಿವಮೊಗ್ಗಕ್ಕೆ ಬಂದ ಬಳಿಕ ನನ್ನ ಜೀವನದ ಪಯಣ ಹೊಸ ತಿರುವು ಪಡೆದುಕೊಂಡಿತು. ಹೊಸ ರಾಜ್ಯ, ಹೊಸ ಭಾಷೆ ಮತ್ತು ಹೊಸ ಸಂಸ್ಕೃತಿಗೆ ಹೊಂದಿಕೊಳ್ಳುವುದು ಒಂದು ಸವಾಲಾಗಿದ್ದರೂ, ಅದೇ ಸಮಯದಲ್ಲಿ ಅದು ಒಂದು ಸುಂದರ ಅನುಭವವೂ ಆಗಿತ್ತು. ಕನ್ನಡ ಭಾಷೆಯನ್ನು ಕಲಿತು, ಇಲ್ಲಿನ ಸಂಸ್ಕೃತಿ, ಶ್ರೀಮಂತ ಪರಂಪರೆಯನ್ನು ಅರಿತು, ಕರ್ನಾಟಕವನ್ನು ನಾನು ಹೃದಯಪೂರ್ವಕವಾಗಿ ಸ್ವೀಕರಿಸಿದೆ. ಕಾಲಕ್ರಮೇಣ ಶಿವಮೊಗ್ಗ ಕೇವಲ ಒಂದು ನಗರವಾಗಿರದೆ, ನನ್ನ ಮನೆಯಾಯಿತು. ಇಲ್ಲಿನ ಜನ ನನಗೆ ಬೆಂಬಲವಾಗಿದ್ದಾರೆ ಎಂದು ಹೇಳುತ್ತಾರೆ.

ಇಂದು ನಾನು ಶಿವಮೊಗ್ಗದ ಸುಂದರ ರಸ್ತೆಗಳಲ್ಲಿ ಸೈಕಲ್ ಸವಾರಿ ಮುಂದುವರಿಸುತ್ತಿದ್ದೇನೆ. ಇಲ್ಲಿ ಸೈಕ್ಲಿಂಗ್ ಸಂಸ್ಕೃತಿ ಇನ್ನೂ ಬೆಳವಣಿಗೆಯ ಹಂತದಲ್ಲಿದ್ದು, ಸೈಕ್ಲಿಸ್ಟ್‌ಗಳ ಸಂಖ್ಯೆಯೂ ಕಡಿಮೆಯಾಗಿದೆ. ಆದರೆ ಇದೇ ಸಂಗತಿ ನನಗೆ ಇನ್ನಷ್ಟು ಪ್ರೇರಣೆ ನೀಡುತ್ತದೆ. ಹೆಚ್ಚಿನ ಜನರು ಸೈಕ್ಲಿಂಗ್ ಅನ್ನು ಅಳವಡಿಸಿಕೊಳ್ಳಬೇಕು ಹಾಗೂ ಇಲ್ಲಿ ಬಲಿಷ್ಠ ಸೈಕ್ಲಿಂಗ್ ಸಮುದಾಯ ನಿರ್ಮಾಣವಾಗಬೇಕು ಎಂಬುದು ನನ್ನ ಆಶಯ ಎನ್ನುತ್ತಾರೆ.

ಶಿವಮೊಗ್ಗಕ್ಕೆ ಬಂದ ಬಳಿಕ ಎರಡು ಬಾರಿ ಸೆಂಚುರಿ ರೈಡ್‌ಗಳನ್ನು ಪೂರೈಸಿರುವುದು ಇವರ ಸಾಧನೆಯಾಗಿದೆ.

ವಿಶ್ವ ಬೈಸಿಕಲ್ ದಿನವನ್ನು ಆಚರಿಸುವ ಈ ಸಂದರ್ಭದಲ್ಲಿ, ಇನ್ನಷ್ಟು ಜನರು ಸೈಕ್ಲಿಂಗ್‌ನ ಸಂತೋಷವನ್ನು ಅನುಭವಿಸಲಿ ಎಂದು ನಾನು ಆಶಿಸುತ್ತೇನೆ.

ಇವರ ಸೈಕ್ಲಿಂಗ್ ಸಾಧನೆಗಳು: 2022, 2023 ಮತ್ತು 2024ರಲ್ಲಿ ನಡೆದ ಚಂಡೀಗಢ ರಾಜ್ಯ ಮೌಂಟೇನ್ ಬೈಕಿಂಗ್ (MTB) ಸ್ಪರ್ಧೆಗಳಲ್ಲಿ ಭಾಗವಹಿಸಿ, ಟೈಮ್ ಟ್ರಯಲ್ ಹಾಗೂ ಕ್ರಾಸ್ ಕಂಟ್ರಿ ಎರಡೂ ವಿಭಾಗಗಳಲ್ಲಿಯೂ ವಿಜೇತರಾಗಿದ್ದಾರೆ.

2022 ಮತ್ತು 2024ರ ರಾಷ್ಟ್ರೀಯ ಮಟ್ಟದ MTB ಸ್ಪರ್ಧೆಗಳಲ್ಲಿ ಭಾಗವಹಿಸಿ 11ನೇ ಸ್ಥಾನ ಪಡೆದಿದ್ದಾರೆ. ದೇಶದ ಪ್ರತಿಷ್ಠಿತ MTB ಶಿಮ್ಲಾ ಸ್ಪರ್ಧೆಯಲ್ಲಿ 2023ರಲ್ಲಿ ದ್ವಿತೀಯ ಸ್ಥಾನ, 2022ರಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಚಂಡೀಗಢ-ಕಸೌಲಿ ಸೈಕಲ್ ರೇಸ್‌ನಲ್ಲಿ, 200 ಕಿ.ಮೀ. ಬ್ರೆವೆಟ್ ರೈಡ್ ಅನ್ನು ಮೂರು ಬಾರಿ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.

ಶಿವಮೊಗ್ಗದಲ್ಲಿ 2025ರಲ್ಲಿ ಸ್ಥಳೀಯ ಆಡಳಿತ ಆಯೋಜಿಸಿದ್ದ ಶಿವಮೊಗ್ಗ ಸೈಕಲ್ ರೇಸ್‌ನಲ್ಲಿ ಮತ್ತು 2026ರಲ್ಲಿ ನಂಜಪ್ಪ ಆಸ್ಪತ್ರೆಯವರು ಆಯೋಜಿಸಿದ್ದ ಶಿವಮೊಗ್ಗ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.

ನಾಳೆ ನನ್ನ ಸೈಕ್ಲಿಂಗ್ ಪಯಣದ ಒಟ್ಟು ದೂರ 27,000 ಕಿಲೋಮೀಟರ್‌ಗಳನ್ನು ತಲುಪಲಿದೆ, ಇದು ನನ್ನ ಸೈಕ್ಲಿಂಗ್ ಮೇಲಿನ ಪ್ರೀತಿ, ಬದ್ಧತೆ ಮತ್ತು ಪರಿಶ್ರಮದ ಪ್ರತೀಕವಾಗಿದೆ ಎನ್ನುತ್ತಾರೆ ರೂಪಾಲಿ ಬೇರಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಿ ಶಾಲೆ ಮಕ್ಕಳಿಗೆ ಮನ್ಮುಲ್ ಒಕ್ಕೂಟದ ದರ್ಶನ: ಸಿ.ಶಿವಕುಮಾರ್
ರೈತ ಫಲಾನುಭವಿಗಳಿಗೆ ಮನ್ಮುಲ್‌ನಿಂದ ಡಿಜಿಟಲ್ ಪೇಮೆಂಟ್: ಸಿ.ಶಿವಕುಮಾರ್