ಸಮಾಜದಲ್ಲಿ ರಾಜಕೀಯ ಬೆರೆಸುವ ಕೆಲಸ ಯಾರು ಮಾಡಬಾರದು. ನಾವು ಸಂಘಟಿತರಾಗಿ ನಮ್ಮ ಮಕ್ಕಳನ್ನು ಶೈಕ್ಷಣಿಕವಾಗಿ ಸದೃಢರನ್ನಾಗಿ ಮಾಡೋಣ ಎಂದು ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಅಧ್ಯಕ್ಷ ಹೇಳಿದರು.
ಕನ್ನಡಪ್ರಭ ವಾರ್ತೆ ಚಿತ್ತಾಪುರ
ರಾಜ್ಯದಲ್ಲಿ ಅತೀ ದೊಡ್ಡ ಸಮಾಜವಾಗಿರುವ ವೀರಶೈವ ಲಿಂಗಾಯತ ಸಮಾಜವು ಸಂಘಟನೆಯ ಕೊರತೆಯಿಂದ ರಾಜಕೀಯವಾಗಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸೌಲಭ್ಯಗಳನ್ನು ಪಡೆಯುವಲ್ಲಿ ವಂಚಿತರಾಗುತ್ತಿದ್ದೇವೆ. ಅದಕ್ಕಾಗಿ ಸಮಾಜ ಸಂಘಟನೆಯಲ್ಲಿ ಯಾವುದೇ ಸಮಯದಲ್ಲಾಗಲಿ ರಾಜಕೀಯ ಬೆರೆಸುವ ಕೆಲಸವನ್ನು ಯಾರು ಮಾಡಬಾರದು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಅಧ್ಯಕ್ಷ ಶರಣಕುಮಾರ ಮೊದಿ ಹೇಳಿದರು.
ಪಟ್ಟಣದ ಅಕ್ಕಮಹಾದೇವಿ ಮಂದಿರದಲ್ಲಿ ಭಾನುವಾರ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ತಾಲೂಕು ಘಟಕದ ವತಿಯಿಂದ ಹಮ್ಮಿಕೊಂಡಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಅಭಿನಂದನಾ ಮತ್ತು ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ನಾವು ಸಂಘಟಿತರಾಗಿ ನಮ್ಮ ಮಕ್ಕಳನ್ನು ಶೈಕ್ಷಣಿಕವಾಗಿ ಸದೃಢರನ್ನಾಗಿ ಮಾಡೋಣ. ಸಂಘಟನೆಯ ಸಮಯದಲ್ಲಿ ಬರುವ ಟೀಕೆಗಳನ್ನು ಹೊಗಳಿಕೆ ಎಂದು ತಿಳಿದು ಅವರ ಮಾರ್ಗದರ್ಶನದಲ್ಲಿ ನಮ್ಮ ಸಮಾಜವನ್ನು ಸಧೃಡವನ್ನಾಗಿ ಮಾಡೋಣ ಇದಕ್ಕೆ ಎಲ್ಲರ ಸಹಕಾರ ಅತಿ ಅವಶ್ಯವಾಗಿದೆ ಎಂದರು.
ವೀರಶೈವ ಲಿಂಗಾಯತ ಸಮಾಜದ ಕಡು ಬಡತನ ಹೊಂದಿರುವ ಮಕ್ಕಳಿಗಾಗಿ ಹಾಸ್ಟೆಲ್ ವ್ಯವಸ್ಥೆಯನ್ನು ಜಿಲ್ಲಾ ಕೇಂದ್ರದಲ್ಲಿ ಮಾಡಿದ್ದು, ಇದನ್ನು ತಾಲೂಕು ಮಟ್ಟದಲ್ಲಿಯೂ ವೀರಶೈವ ಭವನ ನಿರ್ಮಾಣಕ್ಕೆ ಮುಂದಾದಲ್ಲಿ ಇದಕ್ಕೆ ಜಿಲ್ಲಾ ಸಂಘದ ವತಿಯಿಂದ ರು.೧೦ ಲಕ್ಷ ಅನುದಾನ ನೀಡುವ ಭರವಸೆಯನ್ನು ಸಭೆಯಲ್ಲಿ ಘೋಷಿಸಿದರು.
ತಾಲೂಕು ಅಧ್ಯಕ್ಷ ನಾಗರಾಜ ಬಂಕಲಗಾ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಸಿದ್ದಲಿಂಗೇಶ್ವರ ಸಂಸ್ಥಾನದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಹಾಗೂ ಶಿವಶಂಕರ ಮಠ ಸೇಡಂನ ಶ್ರೀ ಶಿವಶಂಕರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.