ಶಿಗ್ಗಾಂವಿ: ತಾಲೂಕಿನ ಗ್ರಾಮೀಣ ಭಾಗದಲ್ಲಿರುವ ರುದ್ರಭೂಮಿಗಳನ್ನು ಸ್ವಚ್ಛವಾಗಿಡಬೇಕು. ಯಾವುದೇ ರುದ್ರಭೂಮಿಗಳ ಕುರಿತು ದೂರುಗಳು ಬಂದರೆ ಆ ಭಾಗದ ಪಿಡಿಓಗಳ ಕುರಿತು ಮೇಲಧಿಕಾರಿಗಳಿಗೆ ಬರೆಯಲಾಗುವುದು ಎಂದು ಶಾಸಕ ಯಾಸೀರ್ ಅಹ್ಮದ್‌ಖಾನ್ ಪಠಾಣ್ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ನಿರಂತರವಾಗಿ ನೀರಾವರಿ ಇಲಾಖೆಯೊಂದಿಗೆ ಸಂಪರ್ಕದಲ್ಲಿ ಇದ್ದು, ಕ್ಷೇತ್ರದ ಕೆರೆಗಳನ್ನು ವರದಾ ನದಿ ನೀರಿನಿಂದ ತುಂಬಿಸಲು ಪ್ರಯತ್ನಿಸಲಾಗುತ್ತಿದೆ. ಪಂಚಾಯಿತಿ ಅಧಿಕಾರಿಗಳು ಪೂರ್ಣ ಪ್ರಮಾಣದಲ್ಲಿ ಅದರ ಕೆಲಸ ಮಾಡಬೇಕು. ಕ್ಷೇತ್ರದಲ್ಲಿ ಬಾಕಿ ಇರುವ ಕೆಲಸ ಮಾಡುವುದರ ಮೂಲಕ ಜನರಿಗೆ ಅವಶ್ಯವಿರುವ ಕೆಲಸಗಳನ್ನು ಆಧ್ಯತೆಯ ಮೇರೆಗೆ ಮಾಡಲಾಗುತ್ತಿದೆ. ೧೪-೧೫ ಹಣಕಾಸು ಯೋಜನೆಯ ಸಂಪೂರ್ಣ ಕಾಮಗಾರಿಗಳ ಮಾಹಿತಿ ಪರಿಶೀಲಿಸಿದರು.
ತಾಲೂಕಿನ ಗೌಳೆರದಡ್ಡಿ ಗ್ರಾಮದಲ್ಲಿ ಮತದಾರರ ಸಂಖ್ಯೆ ಕಡಿಮೆ ಇರುವುದರಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಅಲ್ಲಿನ ಜನರಿಗೆ ಬದಕುವ ಹಕ್ಕು ಇರುವುದರಿಂದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮೊದಲ ಆದ್ಯತೆಯ ಮೇರೆಗೆ ಆ ಗ್ರಾಮದಲ್ಲಿ ಮೂಲಭೂತ ಸೌಕರ್ಯ ಒದಗಿಸಿಕೊಡಬೇಕು ಎಂದು ತಾಕೀತು ಮಾಡಿದರು.ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರನ್ನು ಒದಗಿಸಲು ವಿದ್ಯುತ್ ಸಂಪರ್ಕಗಳಿಗೆ ಹೆಸ್ಕಾಂ ಇಲಾಖೆ ಸಹಕರಿಸುತ್ತಿಲ್ಲ ಎಂಬ ಪಿಡಿಓಗಳ ದೂರಿನ ಮೇರೆಗೆ ಹೆಸ್ಕಾಂ ಇಲಾಖೆ ಅಧಿಕಾರಿಗಳನ್ನು ಸಭೆಗೆ ಸಭೆಗೆ ಕರೆಯಿಸಿ ಆದ್ಯತೆಗೆ ಅನುಸಾರವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ಹೆಸ್ಕಾಂ ಎಇಇ ಅವರಿಗೆ ತಾಕೀತು ಮಾಡಿದರು.
ಸಭೆಯಲ್ಲಿ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಎಸ್.ಎಫ್. ಮಣಕಟ್ಟಿ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುಡ್ಡಪ್ಪ ಜಲದಿ, ಜಿಪಂ ಕೆಡಿಪಿ ಸದಸ್ಯ ಶಂಭುಲಿಂಗಪ್ಪ ಆಜೂರ, ಶಿಗ್ಗಾಂವಿ ತಾಪಂ ಇಓ ಮಂಜುನಾಥ ಸಾಳೊಂಕೆ, ಸವಣೂರ ತಾ.ಪಂ. ಇಓ ಬಸವರಾಜ ಶಿಡೇನೂರ ಸೇರಿದಂತೆ ಶಿಗ್ಗಾಂವಿ-ಸವಣೂರ ತಾಲೂಕಿನ ಪಿಡಿಓಗಳು, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.