ಕನ್ನಡಪ್ರಭ ವಾರ್ತೆ ದೇವನಹಳ್ಳಿಹಳ್ಳಿ
ಮಕ್ಕಳಿಗೂ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗಬೇಕೆಂಬ ನಿಟ್ಟಿನಲ್ಲಿ ಸರ್ಕಾರ ಶೈಕ್ಷಣಿಕ ಕ್ಷೇತ್ರದಲ್ಲಿ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.ಇಲ್ಲಿನ ಕೊರಚರಪಾಳ್ಯ ಸರ್ಕಾರಿ ಶಾಲೆಯ ಶತಮಾನೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಏ.28ರಂದು ಜಿಲ್ಲೆಯ 101 ಪಂಚಾಯಿತಿಗಳಲ್ಲಿ 150 ಕೋಟಿ ವೆಚ್ಚದ ಕಾಮಗಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಈ ಕಾಮಗಾರಿಗಳಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿ ಯೋಜನೆಗಳು ಇದೆ. ಸರ್ಕಾರಿ ಶಾಲಾ ಮಕ್ಕಳು ಇಂದಿನ ದಿನಗಳಲ್ಲಿ ಉತ್ತಮ ಪ್ರತಿಭೆ ತೋರುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ವಿವಿಧ ಸವಲತ್ತುಗಳೊಂದಿಗೆ ದೊರೆಯುವ ಗುಣಮಟ್ಟದ ಶಿಕ್ಷಣ ಲಭ್ಯವಿದೆ. ಪೋಷಕರು ಆಂಗ್ಲ ವ್ಯಾಮೋಹ ಬಿಟ್ಟು ಸರ್ಕಾರಿ ಶಾಲೆಗಳಲ್ಲಿ ಮಕ್ಕಳನ್ನು ಸೇರಿಸಬೇಕು ಎಂದು ಕಿವಿಮಾತು ಹೇಳಿದರು.
ಬುದ್ಧಿವಂತ ಮಕ್ಕಳಿಗೆ ಖಾಸಗಿ ಶಾಲೆಯೇ ಆಗಬೇಕು. ಆಂಗ್ಲ ಮಾಧ್ಯವೇ ಆಗಿರಬೇಕೆಂದೂನು ಇಲ್ಲ. ಓದುವ ಮಕ್ಕಳಿಗೆ ಯಾವ ಶಾಲೆಯಾದರೂ ಚೆನ್ನಾಗಿಯೇ ಓದ್ತಾರೆ. ಹಾಗಾಗಿ ಪೋಷಕರು ಆಂಗ್ಲ ವ್ಯಾಮೋಹದ ತಪ್ಪು ಕಲ್ಪನೆಯಿಂದ ಹೊರಬಂದು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಲು ಮುಂದಾಗಬೇಕು. ಮಕ್ಕಳಿಗೆ ಶಿಕ್ಷಣ ಕೊಡಿಸುವುದು ಮುಖ್ಯ, ಶಾಲೆಯಲ್ಲ ಎಂದು ಸಚಿವ ಮುನಿಯಪ್ಪ ಹೇಳಿದರು.ಸ್ಮರಣ ಸಂಚಿಕೆ ಬಿಡುಗಡೆ ಮಾಡಿದ ಸಂಸದ ಡಾ.ಕೆ.ಸುಧಾಕರ್ ಮಾತನಾಡಿ, ಯಾವ ರಾಜ್ಯ ಸರ್ಕಾರಗಳು ನೂತನ ಶಿಕ್ಷಣ ನೀತಿ ಅಳವಡಿಸಿಕೊಳ್ಳದೇ ಇರುವುದರಿಂದ ಕೇಂದ್ರ ಸರ್ಕಾರದ ಅನುದಾನ ಕುಂಠಿತವಾಗುತ್ತದೆ. ರಾಜ್ಯದಲ್ಲಿ ನೂತನ ಶಿಕ್ಷಣ ನೀತಿ ಅಳವಡಿಸಿಕೊಂಡಿಲ್ಲ. ರಾಜ್ಯ ಸರ್ಕಾರ ಶಿಕ್ಷಣ ನೀತಿ ತರುತ್ತೇವೆ ಎಂದು ಹೇಳಿ ಎರಡು ವರ್ಷ ಕಳೆದರೂ ಯಾವುದನ್ನು ಜಾರಿಗೆ ತರಲಿಲ್ಲ ಎಂದು ಆರೋಪಿಸಿದರು.
ಪೋಷಕರು ಗಂಡು ಮಕ್ಕಳಿಗೆ ನೀಡುವ ಶಿಕ್ಷಣದ ಪ್ರಾಧಾನ್ಯತೆ ಹೆಣ್ಣು ಮಕ್ಕಳಿಗೂ ನೀಡಬೇಕು. ಇಂದು ಅತ್ಯುನ್ನತ ಹುದ್ದೆಗಳಲ್ಲಿರುವವರು, ಮಹನೀಯರು ಸರ್ಕಾರಿ ಶಾಲೆಗಳಲ್ಲಿ ಕಲಿತವರೇ ಆಗಿದ್ದಾರೆ. ನಮ್ಮ ತಂದೆ ಸಹ ಸರ್ಕಾರಿ ಶಾಲೆಯಲ್ಲಿ ಸೇವೆ ಮಾಡಿದ್ದಾರೆ. ಇಂದಿನ ದಿನಗಳಲ್ಲಿ ಮನುಷ್ಯನಿಗೆ ಶಿಕ್ಷಣ ಬಹಳ ಮುಖ್ಯ. ಈಗಿನ ದಿನಗಳಲ್ಲಿ ಮಕ್ಕಳೇನು ಓದಿದ್ದಾರೆ, ಏನು ಮಾಡುತ್ತಾರೆ ಎಂದು ಕೇಳುತ್ತಾರೆಯೇ ಹೊರತು, ನಿಮಗೆಷ್ಟು ಆಸ್ತಿ ಇದೆ. ಅಂತಸ್ತಿದೆ, ಹಣವಿದೆ ಎಂದು ಯಾರೂ ಕೇಳುವುದಿಲ್ಲ ಎಂದು ಹೇಳಿದರು.ಹೆಣ್ಣು ಮಕ್ಕಳಿಗೆ ಶಿಕ್ಷಣ ದೊರೆಯಲು ಸಾವಿತ್ರಿ ಬಾಯಿ ಪುಲೆ ಹಾಗೂ ಡಾ.ಅಂಬೇಡ್ಕರ್ ಅವರ ಶ್ರಮವನ್ನು ಸ್ಮರಿಸಿದರು. ಅವರೆಲ್ಲರೂ ಸರ್ಕಾರಿ ಶಾಲೆಗಳಲ್ಲಿ ಓದಿದವರೇ. ಅವರು ಶಿಕ್ಷಣ ಪಡೆಯಲು ಮತ್ತು ಶಿಕ್ಷಣ ಕೊಡಿಸಲು ಪಟ್ಟ ಪಾಡು ಕಡಿಮೆಯಲ್ಲ. ಅದಕ್ಕೆ ಪೋಷಕರು ಮಕ್ಕಳಿಗೆ ಆಸ್ತಿ ಮಾಡುವ ಬದಲು ಶಿಕ್ಷಣ ಕೊಡಿಸಬೇಕು. ಶಿಕ್ಷಣ ಕೊಡಿಸಲು ಹೆಣ್ಣುಗಂಡೆಂಬ ಬೇಧಭಾವ ಮಾಡದೆ ಸಮಾನವಾಗಿ ಶಿಕ್ಷಣ ನೀಡಬೇಕು ಎಂದು ಹೇಳಿದರು.
ಸಮಾರಂಭದಲ್ಲಿ ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರನ್ನು ಸನ್ಮಾನಿಸಲಾಯಿತು. ಮಾಜಿ ಶಾಸಕ ಜಿ. ಚಂದ್ರಣ್ಣ, 5ನೇ ಹಣಕಾಸು ಆಯೋಗ ಅಧ್ಯಕ್ಷ ಸಿ.ನಾರಾಯಣಸ್ವಾಮಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಬಿ.ರಾಜಣ್ಣ, ತಾಲೂಕು ಅಧ್ಯಕ್ಷ ಹಾಗೂ ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಸಿ.ಜಗನ್ನಾಥ್, ಬಯಪ ಅಧ್ಯಕ್ಷ ವಿ.ಶಾಂತಕುಮಾರ್, ಮಾಜಿ ಅಧ್ಯಕ್ಷ ಎಸ್‌ಎಲ್‌ಎನ್ ಅಶ್ವತ್ಥನಾರಾಯಣ್, ಪುರಸಭಾಧ್ಯಕ್ಷ ಮುನಿಕೃಷ್ಣ, ಸದಸ್ಯ ವೇಣುಗೋಪಾಲ್, ಸಾಹಿತಿ ವಿ.ನಾಗೇಂದ್ರಪ್ರಸಾದ್, ಇದೇ ಶಾಲೆಯಲ್ಲಿ ವ್ಯಾಸಂಗ ಮಾಡಿ ಉನ್ನತ ಹುದ್ದೆಗಳನ್ನು ಅಲಂಕರಿಸಿರುವ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಬಿ.ಪುಟ್ಟಸ್ವಾಮಿ, ಸಹ ಶಿಕ್ಷಕರು ಉಪಸ್ಥಿತರಿದ್ದರು.