ಗ್ರಾಮೀಣ ನೀರು ಪೂರೈಕೆಗೆ ₹67,000 ಕೋಟಿ ವೆಚ್ಚ

KannadaprabhaNewsNetwork |  
Published : Oct 26, 2026, 01:30 AM IST
ಪೋಟೋ: 25ಎಸ್‌ಎಂಜಿಕೆಪಿ06ಶಿವಮೊಗ್ಗ ನಗರದ ಅಂಬೇಡ್ಕರ್‌ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಮಾತನಾಡಿದರು.  | Kannada Prabha

ಸಾರಾಂಶ

Rural Development Department Progress Review Meeting

-ಸಚಿವ ಖಂಡ್ರೆ ಹೇಳಿಕೆ । ಗ್ರಾಮೀಣಾಭಿವೃದ್ಧಿ ಇಲಾಖೆ ಪ್ರಗತಿ ಪರಿಶೀಲನಾ ಸಭೆ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಅಂತರ್ಜಲ ಮಟ್ಟ ಎಲ್ಲೆಡೆ ಕುಸಿಯುತ್ತಿದ್ದು, ಮೇಲ್ಮೈ ನೀರಿನಿಂದ ಗ್ರಾಮೀಣ ಪ್ರದೇಶಗಳಿಗೆ ನೀರು ಪೂರೈಕೆ ಮಾಡಲು ಬಹುಗ್ರಾಮ ಕುಡಿಯುವ ನೀರು ಯೋಜನೆ ಮತ್ತು ಏಕ ಗ್ರಾಮ ಕುಡಿಯುವ ನೀರು ಯೋಜನೆಗೆ ₹67 ಸಾವಿರ ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿ, ಏಕಗ್ರಾಮ ಕುಡಿಯುವ ನೀರು ಯೋಜನೆಯು ಶೇ.80ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯು ಶೇ.40ರಷ್ಟು ಕಾಮಗಾರಿ ಇನ್ನೂ ಆಗಬೇಕಾಗಿದೆ. ಈ ಎಲ್ಲ ಕಾಮಗಾರಿಗಳನ್ನು ಸಮರೋಪಾದಿಯಲ್ಲಿ ಮುಗಿಸಿ, ಜನರಿಗೆ ಶುದ್ಧ ಕುಡಿವ ನೀರು ಪೂರೈಸುವಂತೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಗ್ರಾಮೀಣ ನೀರು ಪೂರೈಕೆಗೆ ಸಾಕಷ್ಟು ಹಣವಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ಹಣ ಬಳಕೆ ಆಗಿರುವುದು ಕಂಡುಬಂದಿಲ್ಲ. ಎಲ್ಲೆಲ್ಲಿ ನೀರಿನ ಸಮಸ್ಯೆ ಇದೆಯೋ ಅಲ್ಲಿ ಕೊಳವೆಬಾವಿ ಕೊರೆಸಬೇಕು. ಕೆಲವು ಗ್ರಾಮಗಳಿಗೆ ಬಹುಗ್ರಾಮ ಕುಡಿವ ನೀರು ಯೋಜನೆ ಮತ್ತು ಏಕಗ್ರಾಮ ಕುಡಿವ ನೀರು ಯೋಜನೆಯಡಿ ಕೊಳವೆ ಅಳವಡಿಸಲು ಅರಣ್ಯ ಪ್ರದೇಶ ಇರುವ ಕಾರಣ ವಿಳಂಬವಾಗಿದೆ. ಈ ಸಂಬಂಧ ಅರಣ್ಯ ಸಚಿವರು ಹಾಗೂ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಶೀಘ್ರದಲ್ಲಿ ಬೆಂಗಳೂರಿನಲ್ಲಿ ಸಭೆ ಕರೆದು ಸಮಸ್ಯೆ ಪರಿಹರಿಸುವುದಾಗಿ ತಿಳಿಸಿದರು.

ಗ್ರಾಮೀಣ ಜನರ ಆಸ್ತಿಗೆ ಸಂಬಂಧಿಸಿದಂತೆ ಇ-ಸ್ವತ್ತು ನೀಡುವುದು ಕೂಡ ಪಂಚಾಯತಿಗಳ ಜವಾಬ್ದಾರಿಯಾಗಿದೆ. ಆದರೆ, ಅನಗತ್ಯವಾಗಿ ವಿಳಂಬವಾಗುತ್ತಿರುವ ದೂರುಗಳು ಬರುತ್ತಿದ್ದು, ಜನರು ಪಂಚಾಯತಿ ಕಚೇರಿಗಳಿಗೆ ಅಲೆದಾಡದಂತೆ ಅವರಿಗೆ ಸೇವೆಗಳನ್ನು ಒದಗಿಸುವಂತೆ ನಿರ್ದೇಶನ ನೀಡಿದರು.

ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕರಾದ ಬಿ.ಕೆ. ಸಂಗಮೇಶ್, ಶಾರದಾ ಪೂರ್ಯಾನಾಯ್ಕ, ಬಲ್ಕಿಶ್ ಭಾನು, ಆಯುಕ್ತರಾದ ವೈ.ಎಸ್. ಪಾಟೀಲ್, ಜಿ.ಪಂ. ಸಿಇಒ ರಿಷಿ ಆನಂದ್ ಇದ್ದರು.

....ಬಾಕ್ಸ್‌....

24 ತಾಸಲ್ಲಿ ಕುಡಿವ ನೀರಿನ ಸಮಸ್ಯೆ ಪರಿಹರಿಸಿ

ಜಿಲ್ಲೆಯ ಯಾವುದೇ ಗ್ರಾಮದಲ್ಲಿ ಕುಡಿವ ನೀರಿನ ಸಮಸ್ಯೆ ಆದರೆ 24 ಗಂಟೆಯೊಳಗೆ ಕ್ರಮ ವಹಿಸದಿದ್ದರೆ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸಚಿವ ಈಶ್ವರ ಬಿ ಖಂಡ್ರೆ ತಾಕೀತು ಮಾಡಿದರು. ಭದ್ರಾವತಿಯ ದಡಮಘಟ್ಟ ಗ್ರಾಮ ಪಂಚಾಯತಿಯಲ್ಲಿ ನೀರಿನ ಸಮಸ್ಯೆ ಬಗ್ಗೆ ಶಾಸಕ ಬಿ.ಕೆ.ಸಂಗಮೇಶ್ ಗಮನಕ್ಕೆ ತಂದಾಗ ಪಿಡಿಒ ಮತ್ತು ಗ್ರಾಮೀಣ ನೀರು ಪೂರೈಕೆ ಮತ್ತು ನೈರ್ಮಲ್ಯ ವಿಭಾಗದ ಎಂಜಿನಿಯರ್ ಅವರನ್ನು ತರಾಟೆಗೆ ತೆಗೆದುಕೊಂಡ ಸಚಿವರು 24 ಗಂಟೆಯೊಳಗೆ ನೀರು ಪೂರೈಕೆ ಮಾಡದಿದ್ದರೆ ಸಂಬಂಧಿಸಿದ ಅಧಿಕಾರಿಗಳನ್ನೇ ಹೊಣೆ ಮಾಡಿ ಶಿಸ್ತುಕ್ರಮ ಜರುಗಿಸುವಂತೆ ಜಿಪಂ ಸಿಇಒಗೆ ಸೂಚಿಸಿದರು.

-------------------

ಪೋಟೋ: 25ಎಸ್‌ಎಂಜಿಕೆಪಿ06

ಶಿವಮೊಗ್ಗ ನಗರದ ಅಂಬೇಡ್ಕರ್‌ ಭವನದಲ್ಲಿ ಏರ್ಪಡಿಸಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಿ ಶಾಲೆಗಳ ಬಲವರ್ಧನೆ ನಮ್ಮೆಲ್ಲರ ಜವಾಬ್ದಾರಿ
ಕಾಡಾನೆ ಹಾವಳಿ ತಡೆಯದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ