ಉದ್ಯೋಗ ಖಾತ್ರಿ ಮೂಲಕ ಗ್ರಾಮೀಣ ಅಭಿವೃದ್ಧಿ ಸಾಧ್ಯ: ಶಾಸಕ ಎ. ಮಂಜು

KannadaprabhaNewsNetwork | Published : Jun 19, 2024 1:01 AM

ಸಾರಾಂಶ

ಅರಕಲಗೂಡು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಕೆಡಿಪಿ ಸಭೆ ಮತ್ತು ವಿವಿಧ ಇಲಾಖೆಗಳ ಅಭಿವೃದ್ಧಿ ಪರಿಶೀಲನೆ ನಡೆಸಿ ಶಾಸಕ ಎ.ಮಂಜು ಮಾತನಾಡಿದರು.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆ । ವಿವಿಧ ಇಲಾಖೆಗಳ ಪರಿಶೀಲನೆ

ಕನ್ನಡಪ್ರಭ ವಾರ್ತೆ ಅರಕಲಗೂಡು

ನರೇಗಾ ಯೋಜನೆಯಿಂದ ಗ್ರಾಮೀಣ ಪ್ರದೇಶದ ಅಭಿವೃದ್ದಿ ಸಾಧ್ಯವಾಗುತ್ತದೆ ಎಂದು ಶಾಸಕ ಎ. ಮಂಜು ಅಭಿಪ್ರಾಯಪಟ್ಟರು.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಕೆಡಿಪಿ ಸಭೆ ಮತ್ತು ವಿವಿಧ ಇಲಾಖೆಗಳ ಅಭಿವೃದ್ಧಿ ಪರಿಶೀಲನೆ ನಡೆಸಿ ಮಾತನಾಡಿ, ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರದಿಂದ ಸಾಕಷ್ಟು ಅನುದಾನ ದೊರೆಯುತ್ತಿಲ್ಲ, ಗ್ರಾಪಂ ಮಟ್ಟದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಹಾಗೂ ರೈತರ ಕೃಷಿ ಕಾರ್ಯಗಳಲ್ಲಿ ನರೇಗಾ ಯೋಜನೆ ನೆರವಾಗುತ್ತಿದೆ, ಆದರೆ ಗ್ರಾಪಂಗಳು ಈ ಕುರಿತು ನಿರ್ಲಕ್ಷ್ಯ ವಹಿಸುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಗ್ರಾಮಗಳಲ್ಲಿ ಸ್ಮಶಾನಕ್ಕೆ ಭೂಮಿ ಗುರುತಿಸಿ ಗ್ರಾಪಂಗೆ ಹಸ್ತಾಂತರಿಸಲಾಗಿದೆ. ಇದನ್ನು ರಕ್ಷಣೆ ಮಾಡಿ ಅಭಿವೃದ್ದಿ ಪಡಿಸಲು ಕ್ರಮವಹಿಸಬೇಕು. ಗ್ರಾಪಂಗಳಲ್ಲಿ ಜನರಿಗೆ ಈ ಸ್ವತ್ತು ಮಾಡಿಕೊಡಲು ಹಣಕ್ಕೆ ಬೇಡಿಕೆ ಇಡುತ್ತಿರುವ ಕುರಿತು ವ್ಯಾಪಕ ದೂರುಗಳು ಬರುತ್ತಿವೆ. ಇದನ್ನು ಸಹಿಸುವುದಿಲ್ಲ. ಅಧಿಕಾರಿಗಳು ತಪ್ಪು ತಿದ್ದಿಕೊಂಡು ಸಾರ್ವಜನಿಕರಿಗೆ ಕಿರುಕುಳ ನಿಲ್ಲಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

ಎಸ್‌ಎಸ್‌ಎಲ್‌ಸಿ ತೇರ್ಗಡೆಯಾದ ವಿದ್ಯಾರ್ಥಿಗಳು ಸರ್ಕಾರಿ ಕಾಲೇಜುಗಳಲ್ಲೆ ಸೇರ್ಪಡೆ ಆಗುವಂತೆ ಶಿಕ್ಷಣ ಇಲಾಖೆ ಗಮನ ಹರಿಸಬೇಕು. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಕೊರತೆ ತಪ್ಪಿಸಲು ಪೂರ್ವ ಪ್ರಾಥಮಿಕ ಹಂತದ ಮಕ್ಕಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು. ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಸಂಖ್ಯೆ ಕಡಿಮೆಯಾಗುತ್ತಿದೆ. ಜನರು ಖಾಸಗಿ ಆಸ್ಪತ್ರೆಗಳಿಗೆ ತೆರಳುವಂತೆ ಪ್ರೇರೇಪಣೆ ನೀಡುತ್ತಿರುವ ಕುರಿತು ದೂರು ಕೇಳಿ ಬರುತ್ತಿದೆ, ನಿಗದಿತವಾಗಿ ರಕ್ಷಾ ಸಮಿತಿ ಸಭೆಗಳು ನಡೆಯುತ್ತಿಲ್ಲ, ಆಸ್ಪತ್ರೆಗೆ ಬರುವ ರೋಗಿಗಳೊಂದಿಗೆ ಸಿಬ್ಬಂದಿ ಉತ್ತಮ ವರ್ತನೆ ತೋರುತ್ತಿಲ್ಲ, ಇದನ್ನು ಸಹಿಸಲು ಸಾಧ್ಯವಿಲ್ಲ. ಕೂಡಲೇ ಇದನ್ನು ಸರಿಪಡಿಸಿಕೊಳ್ಳಬೇಕು ಎಂದು ತಾಕೀತು ಮಾಡಿದರು.

ಅರಣ್ಯ ಇಲಾಖೆ ತೇಗ, ಸಿಲ್ವರ್‌ನಂತಹ ಗಿಡಗಳನ್ನು ರೈತರಿಗೆ ವಿತರಿಸುವುದನ್ನು ನಿಲ್ಲಿಸಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ಆದಾಯ ಬರುವ ಹಾಗೂ ಪರಿಸರ ಸ್ನೇಹಿ ಗಿಡಗಳನ್ನು ವಿತರಿಸಬೇಕು. ಗಂಗೂರು ಜೀತ ವಿಮುಕ್ತ ಕುಟುಂಬಗಳನ್ನು ಅರಣ್ಯ ಪ್ರದೇಶದಿಂದ ಸ್ಥಳಾಂತರಿಸುವ ಮುನ್ನ ಅವರಿಗೆ ಪರ್ಯಾಯ ವ್ಯವಸ್ಥೆ ಮಾಡುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಅರಸಿಕಟ್ಟೆ ಅಮ್ಮ ದೇವಾಲಯವನ್ನು ಖಾಸಗಿ ಸಮಿತಿ ನಿರ್ವಹಣೆಯಿಂದ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಹಲವು ಬಾರಿ ಸೂಚನೆ ನೀಡಿದರೂ ಕ್ರಮ ಕೈಗೊಂಡಿಲ್ಲ, ಈ ಕುರಿತು ಸದನದಲ್ಲಿ ಪ್ರಸ್ತಾಪಸಿಸುವುದಾಗಿ ಎಚ್ಚರಿಸಿದರು.

ಗಂಗಾ ಕಲ್ಯಾಣ ಯೋಜನೆಯಡಿ ಕೊರೆಸಲಾದ ಕೊಳವೆಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ವಿಳಂಬ ಧೋರಣೆ ಅನುಸರಿಸುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿ ಈ ಕುರಿತು ಶೀಘ್ರ ಕ್ರಮಕ್ಕೆ ಸೂಚಿಸಿದರು. ಸೋಲಾರ್ ಪಂಪ್‌ಸೆಟ್ ಅಳವಡಿಸಿಕೊಳ್ಳಲು ಶೇ. 90 ರಷ್ಟು ರಿಯಾಯಿತಿ ದೊರೆಯುತ್ತಿದ್ದು ಈ ಕುರಿತು ರೈತರಲ್ಲಿ ಜಾಗೃತಿ ಮೂಡಿಸಲು ವಿದ್ಯುತ್ ಇಲಾಖೆ ಮುಂದಾಗಬೇಕು ಎಂದರು.

ಬೆಳಗಿನ ಮತ್ತು ಸಂಜೆ ಸಮಯದಲ್ಲಿ ಗ್ರಾಮೀಣ ಭಾಗಗಳಿಗೆ ವ್ಯವಸ್ಥಿತ ಬಸ್ ವ್ಯವಸ್ಥೆ ಕಲ್ಪಿಸಿ ವಿದ್ಯಾರ್ಥಿಗಳಿಗೆ ಮತ್ತು ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವಂತೆ ರಸ್ತೆ ಸಾರಿಗೆ ಸಂಸ್ಥೆಯ ಡಿಪೋ ವ್ಯಸ್ಥಾಪಕರಿಗೆ ಸೂಚಿಸಿದರು,

ಕೊಣನೂರು ಮತ್ತು ಹುಲಿಕಲ್ ಏತ ನೀರಾರಿ ಯೋಜನೆಗಳಿಗೆ ಬಜೆಟ್‌ನಲ್ಲಿ ಅನುಮೋದನೆ ದೊರೆತಿದ್ದು ಇದರ ಅನುಷ್ಠಾನಕ್ಕೆ ತ್ವರಿತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ತಾಪಂ ಆಡಳಿತಾಧಿಕಾರಿ ಎಂ.ಸಿ.ಚಂದ್ರಶೇಖರ್, ಇಒ ಪ್ರಕಾಶ್, ಸಿಪಿಐ ವಸಂತ್ ಇದ್ದರು.

Share this article