ಗ್ರಾಮೀಣರ ಆಶಾಕಿರಣ ಬಾಡಗಂಡಿ ಆಸ್ಪತ್ರೆ: ಎಸ್.ಆರ್.ಪಾಟೀಲ

KannadaprabhaNewsNetwork |  
Published : Jun 25, 2025, 12:33 AM IST
ಬಾಡಗಂಡಿ ಎಸ್.ಆರ್. ಪಾಟೀಲ ಆಸ್ಪತ್ರೆ ಮತ್ತು ಶಂಶೋಧನಾ ಕೇಂದ್ರದಲ್ಲಿ ಮೊಣಕಾಲು ಮತ್ತು ಸೊಂಟದ ಕೀಲು ಮರು ಜೋಡಣೆ ಉಚಿತ ತಪಾಸಣೆ ಶಿಬಿರ  ಉದ್ಘಾಟಿಸಿ ಸಂಸ್ಥಾಪಕ ಅಧ್ಯಕ್ಷ ಎಸ್‌.ಆರ್‌.. ಪಾಟೀಲ ಮಾತನಾಡಿದರು. | Kannada Prabha

ಸಾರಾಂಶ

ಉತ್ತರ ಕರ್ನಾಟಕ ಭಾಗದ 14 ಜಿಲ್ಲೆಯ ಜನರು ದೂರದ ಬೆಂಗಳೂರಿನ ಆಸ್ಪತ್ರೆಗಳಿಗೆ ಹೋಗಿ ದುಬಾರಿ ವೆಚ್ಚದ ಚಿಕಿತ್ಸೆ ಪಡೆಯುವುದು ಕಷ್ಪವಾಗುತ್ತಿದೆ. ಇಂದಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿನ ಬಡಜನರ ಆರೋಗ್ಯ ಕಾಳಜಿಗಾಗಿ ಬೆಂಗಳೂರಿನ ನುರಿತ ವೈದ್ಯರೇ ಬೀಳಗಿ ತಾಲೂಕಿನ ಬಾಡಗಂಡಿ ಆಸ್ಪತ್ರೆಗೆ ಬಂದು ಉಚಿತ ಚಿಕಿತ್ಸೆ ನೀಡುತ್ತಿದ್ದಾರೆ. ಹೀಗಾಗಿ ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಎಸ್.ಆರ್.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್.ಪಾಟೀಲ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಬೀಳಗಿ

ಉತ್ತರ ಕರ್ನಾಟಕ ಭಾಗದ 14 ಜಿಲ್ಲೆಯ ಜನರು ದೂರದ ಬೆಂಗಳೂರಿನ ಆಸ್ಪತ್ರೆಗಳಿಗೆ ಹೋಗಿ ದುಬಾರಿ ವೆಚ್ಚದ ಚಿಕಿತ್ಸೆ ಪಡೆಯುವುದು ಕಷ್ಪವಾಗುತ್ತಿದೆ. ಇಂದಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿನ ಬಡಜನರ ಆರೋಗ್ಯ ಕಾಳಜಿಗಾಗಿ ಬೆಂಗಳೂರಿನ ನುರಿತ ವೈದ್ಯರೇ ಬೀಳಗಿ ತಾಲೂಕಿನ ಬಾಡಗಂಡಿ ಆಸ್ಪತ್ರೆಗೆ ಬಂದು ಉಚಿತ ಚಿಕಿತ್ಸೆ ನೀಡುತ್ತಿದ್ದಾರೆ. ಹೀಗಾಗಿ ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಎಸ್.ಆರ್.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್.ಪಾಟೀಲ ಮನವಿ ಮಾಡಿದರು.

ತಾಲೂಕಿನ ಬಾಡಗಂಡಿ ಎಸ್.ಆರ್.ಪಾಟೀಲ ಆಸ್ಪತ್ರೆ ಮತ್ತು ಶಂಶೋಧನಾ ಕೇಂದ್ರ ಹಾಗೂ ಬೆಂಗಳೂರಿನ ಸ್ಪರ್ಶ ಆಸ್ಪತ್ರೆಯವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ನಡೆದ ಮೊಣಕಾಲು ಮತ್ತು ಸೊಂಟದ ಕೀಲು ಮರು ಜೋಡಣೆ ಉಚಿತ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಬೆಂಗಳೂರಿನ ಬಹುತೇಕ ಆಸ್ಪತ್ರೆಗಳಲ್ಲಿ ಉತ್ತರ ಕರ್ನಾಟಕದ ಜನರಿಗೆ ಹೆಚ್ಚಾಗಿ ಚಿಕಿತ್ಸೆ ಪಡೆಯುವುದು ಎಲ್ಲರಿಗೂ ಗೊತ್ತು. ಅಲ್ಲಿಯ ಚಿಕಿತ್ಸೆ ವೆಚ್ಚ, ಸಮಯ ಹೀಗೆ ಸಾಕಷ್ಟು ಸಮಸ್ಯೆಗಳನ್ನು ನಮ್ಮ ಭಾಗದ ಜನರು ಅನುಭವಿಸುವುದನ್ನು ಮನಗಂಡು ಬಾಡಗಂಡಿ ಗ್ರಾಮದ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಿ, ಗುಣಮಟ್ಟದ ಚಿಕಿತ್ಸೆ ಸಿಗುವಂತೆ ಮಾಡಲಾಗಿದೆ. ಮೊಣಕಾಲು ಮತ್ತು ಸೊಂಟದ ಕೀಲು ಮರು ಜೋಡಣೆ ಶಿಬಿರ ಆರಂಭಿಸಿದ್ದು, ಇಲ್ಲಿಯೇ ಚಿಕಿತ್ಸೆ ದೊರೆಯುವಂತೆ ಮಾಡಿ ಪ್ರತಿ 15 ದಿನಗಳಿಗೊಮ್ಮೆ ಬೆಂಗಳೂರಿನ ಸ್ಪರ್ಶ ಆಸ್ಪತ್ರೆಯ ನುರಿತ ವೈದ್ಯರ ತಂಡ ಇಲ್ಲಿ ಭೇಟಿ ನೀಡಿ ಚಿಕಿತ್ಸೆ ನೀಡುತ್ತಾರೆ ಎಂದು ತಿಳಿಸಿದರು.

ಬೆಂಗಳೂರಿನ ಸ್ಪರ್ಶ ಆಸ್ಪತ್ರೆಯ ವೈದ್ಯ ಡಾ.ರವಿಕುಮಾರ ಮೂಕರ್ತಿಹಾಳ ಮಾತನಾಡಿ, ಆರ್ಥಿಕವಾಗಿ ಮತ್ತು ಸಮಯದ ಉಳಿತಾಯವಾಗುವುದರ ಜೊತೆಗೆ ಉತ್ತಮ ಆರೋಗ್ಯ ಪಡೆದುಕೊಳ್ಳಲು ಸುಸಜ್ಜಿತವಾದ ಸೌಲಭ್ಯಗಳನ್ನು ಹೊಂದಿದ ಎಸ್.ಆರ್.ಪಾಟೀಲ ಆಸ್ಪತ್ರೆ ಈ ಭಾಗದ ಜನರ ಬಾಳಿನ ಆಶಾಕಿರಣವಾಗಿದೆ. ಗ್ರಾಮೀಣ ಭಾಗದ ಉತ್ತಮ ಪರಿಸರದಲ್ಲಿರುವ ಆಸ್ಪತ್ರೆಯಲ್ಲಿ ಸ್ಪರ್ಶ ಆಸ್ಪತ್ರೆ ತಂಡ ಇರಲಿದ್ದು, ಜನರು ಸೇವೆಯೇ ವೈದ್ಯರ ಗುರಿಯಾಗಿದೆ. ಹಲವಾರು ಉಚಿತ ಚಿಕಿತ್ಸೆ ಮಾಡುತ್ತಿರುವ ಕೆಲಸದ ಕತೆ ಬಾಡಗಂಡಿ ಎಸ್.ಆರ್.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಬಡ ಜನರ ಸೇವೆ ನಡೆಯಲಿ ಎಂದರು.

ಎಸ್.ಆರ್.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಕಾರ್ಯದರ್ಶಿ ಎಂ.ಎನ್.ಪಾಟೀಲ ಮಾತನಾಡಿ, ಬಡ ಜನರಿಗೆ, ಸರ್ಕಾರಿ ನೌಕರರು ಸೇರಿದಂತೆ ಸಮಾಜದ ಎಲ್ಲ ಜನರಿಗೂ ಗುಣಮಟ್ಟದ ಚಿಕಿತ್ಸೆ ಸಿಗಬೇಕು. ಜನರು ಆರ್ಥಿಕವಾಗಿ ಬೆಳೆಯಲು, ಉತ್ತಮ ಆರೋಗ್ಯ ಪರಿಸರ ಬೆಳೆಸಬೇಕು ಎನ್ನುವ ನಿಟ್ಟಿನಲ್ಲಿ ಬಾಡಗಂಡಿ ಎಸ್.ಆರ್.ಪಾಟೀಲ ಆಸ್ಪತ್ರೆಯಲ್ಲಿ ಯಶಸ್ವಿನಿ, ಆಯುಷ್ಮಾನ್‌ ಭಾರತ, ಕರ್ನಾಟಕ ಆರೋಗ್ಯ ಸಂಜೀವಿನಿ, ಎನ್.ಎ.ಬಿ.ಎಸ್ ಯೋಜನೆಗಳನ್ನು ಪ್ರಾರಂಭಿಸಿದ್ದು, ಇವುಗಳ ಸದುಪಯೋಗ ಜನರು ಪಡೆದುಕೊಳ್ಳಲು ಕೋರಿದರು.

ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ.ಧರ್ಮರಾಯ ಇಂಗಳೆ, ವೈದ್ಯಕೀಯ ಮೇಲ್ವಿಚಾರಕ ಡಾ.ವಿಜಯಕುಮಾರ ಹಳ್ಳಿ, ಆಡಳಿತಾಧಿಕಾರಿ ಡಾ.ರಾಘವೇಂದ್ರ ಪಾಟೀಲ, ಹಣಕಾಸು ವಿಭಾಗದ ಮುಖ್ಯಸ್ಥ ಅಶೋಕ ದಾದಮಿ, ಸ್ಪರ್ಶ ಆಸ್ಪತ್ರೆಯ ವೈದ್ಯರಾದ ಡಾ.ಶ್ರೀನಾಥ, ಡಾ.ಇಂದ್ರೇಶ, ಡಾ.ರಾಜೇಶ ಇತರರು ಇದ್ದರು.

PREV

Recommended Stories

ಹೆತ್ತವರ ಕನಸು ನನಸಾಗಿಸುವುದೇ ಮಕ್ಕಳ ಗುರಿಯಾಗಿರಲಿ: ಸಚಿವೆ ಹೆಬ್ಬಾಳ್ಕರ್
ರಾಜ್ಯದ ಅರ್ಥ ವ್ಯವಸ್ಥೆ ಆರೋಗ್ಯವಂತವಾಗಿದೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್