(ಬಾಟಂ) ಎಸ್. ಬಂಗಾರಪ್ಪ ಹಿಂದುಳಿದ ವರ್ಗಗಳ ಏಳ್ಗೆ ಬಯಸಿದ ರಾಜಕಾರಣಿ

KannadaprabhaNewsNetwork | Updated : Oct 28 2024, 01:08 AM IST

ಸಾರಾಂಶ

ಸೊರಬ ಪಟ್ಟಣದ ಬಂಗಾರದಾಮ ಆವರಣದಲ್ಲಿ ಮಾಜಿ ಸಿಎಂ ಎಸ್. ಬಂಗಾರಪ್ಪನವರ 92ನೇ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಸಾಧಕರಿಗೆ ಬಂಗಾರ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಕನ್ನಡಪ್ರಭ ವಾತೆ ಸೊರಬ

ಸಮಾಜದ ಹಿಂದುಳಿದ ವರ್ಗಗಳ ಏಳಿಗೆ ಬಯಸಿದ ಎಸ್.ಬಂಗಾರಪ್ಪ ಅವರು ಮುಖ್ಯಮಂತ್ರಿಯಾದ ಅವಧಿಯಲ್ಲಿ ಜನಪರ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಜನಮಾನಸದಲ್ಲಿ ಉಳಿಯುವ ಜೊತೆಗೆ ಯುವ ರಾಜಕಾರಣಿಗಳಿಗೆ ಸ್ಪೂರ್ತಿಯಾಗಿದ್ದರು ಎಂದು ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ಬಂಗಾರಧಾಮದ ಆವರಣದಲ್ಲಿ ಎಸ್.ಬಂಗಾರಪ್ಪ ಫೌಂಡೇಶನ್ ಹಾಗೂ ಎಸ್.ಬಂಗಾರಪ್ಪ ವಿಚಾರ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಎಸ್.ಬಂಗಾರಪ್ಪನವರ 92ನೇ ಜನ್ಮದಿನೋತ್ಸವ ಹಾಗೂ ನಮನ-ಚಿಂತನ-ಸನ್ಮಾನ, ಜಾನಪದ ವೈಭವ ಮತ್ತು ಬಂಗಾರ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಎಸ್.ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಯುವ ಶಾಸಕರಿಗೆ ಆದ್ಯತೆ ನೀಡಿ ಸಚಿವ ಸ್ಥಾನ ಒದಗಿಸಿದ್ದರು. ಎಂದಿಗೂ ಸಹ ಅಧಿಕಾರದ ವ್ಯಾಮೋಹವನ್ನು ಹೊಂದಿರಲಿಲ್ಲ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಸಂದರ್ಭದಲ್ಲಿಯೂ ಪಕ್ಷದ ಶಾಸಕರೊಂದಿಗೆ ಯಾವುದೇ ಅಳುಕಿಲ್ಲದೆ ಸಹಜವಾಗಿಯೇ ಇದ್ದರು. ಇದು ಪ್ರಸ್ತುತ ರಾಜಕಾರಣಿಗಳಿಗೆ ಮಾದರಿಯಾಗಿದೆ ಎಂದರು.

ರಾಜಕಾರಣಿಗಳನ್ನು ವಕ್ರದೃಷ್ಠಿಯಲ್ಲಿ ನೋಡುವ ಸ್ಥಿತಿ ಜನತೆಯಲ್ಲಿ ನಿರ್ಮಾಣವಾಗಿರುವುದ ದುರ್ದೈವದ ಸಂಗತಿ. ಇವುಗಳ ನಡುವೆ ಜನರ ಭಾವನೆಗಳನ್ನು ಅರ್ಥೈಸಿಕೊಂಡು ಡಾ.ಬಿ.ಆರ್.ಅಂಬೇಡ್ಕರ್, ಕಾರ್ಲ್ ಮಾರ್ಕ್ಸ್, ಗಾಂಧೀಜಿ ಹಾಗೂ ಲೋಹಿಯಾ ಅವರ ಸಿದ್ಧಾಂತಗಳ ಅಡಿಯಲ್ಲಿ ರಾಜಕೀಯ ಮಾಡಿದ ಬಂಗಾರಪ್ಪ ಅವರು ಸಮಸಮಾಜ ನಿರ್ಮಾಣ ಮಾಡುವ ಅಚಲ ವಿಶ್ವಾಸ ಹೊಂದಿದ್ದರು ಎಂದು ನುಡಿದರು.

ರಾಜ್ಯದಲ್ಲಿ ಈ ಹಿಂದೆ ಸುಮಾರು 160 ಕೋಟಿ ರು. ವ್ಯಹಿಸಿ ಜಾತಿಗಣತಿ ನಡೆಸಲಾಗಿದೆ. ಹಿಂದುಳಿದ ಸಮುದಾಯಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ಗಣತಿ ನಡೆಸಲಾಯಿತು. ಜಾತಿಗಣತಿಯ ವರದಿ ಬಿಡುಗಡೆಗೆ ವಿರೋಧ ವ್ಯಕ್ತಪಡಿಸುವುದು ಸಲ್ಲದು. ವರದಿ ಬಿಡುಗಡೆಯ ತರುವಾಯ ಭಿನ್ನಾಭಿಪ್ರಾಯಗಳಿದ್ದರೆ ಅವುಗಳನ್ನು ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಾಹಿತಿಗಳಿಗೆ ರಕ್ಷಣೆ ಒದಗಿಸುವ ಕೆಲಸ ಮಾಡಲಾಗುತ್ತಿದೆ. ಸಾಹಿತಿಗಳಿಗೆ ಬೆದರಿಕೆ ಪತ್ರ ಬಂದ ಸಂದರ್ಭದಲ್ಲಿ ಕಾನೂನು ಪ್ರಕಾರ ಕೈಗೊಳ್ಳುವ ಕೆಲಸವನ್ನು ಮಾಡಲಾಗುತ್ತಿದೆ ಎಂದರು.

ನಟ ಡಾ.ಶಿವರಾಜ್ ಕುಮಾರ್ ಮಾತನಾಡಿ, ಬಂಗಾರಪ್ಪನವರು ಬಡವರ ಪರವಾಗಿ ನೀಡಿದ ಕೊಡುಗೆ ಅಪಾರವಾಗಿದೆ. ಕುಂ.ವೀರಭದ್ರಪ್ಪ ಅವರು ಬರೆದ ಕೃತಿಗಳನ್ನು ಆಧರಿಸಿ ಎರಡು ಸಿನಿಮಾ ಮಾಡಿದ್ದೇನೆ. ಅವರ ಸಾಹಿತ್ಯದಲ್ಲಿ ತುಳಿತಕ್ಕೆ ಒಳಗಾದ ಸಮುದಾಯಕ್ಕೆ ನ್ಯಾಯ ಒದಗಿಸುವ ಉದ್ದೇಶವಿತ್ತು. ದೊರೆ ಮತ್ತು ಆಳು ಎಂಬ ಪದ್ಧತಿಗೆ ತಿಲಾಂಜಲಿ ಇಡುವ ಕೆಲಸ ಮಾಡಲಾಗಿತ್ತು ಎಂದು ಹೇಳಿದರು.

ಎಸ್. ಬಂಗಾರಪ್ಪ ಫೌಂಡೇಶನ್ ಅಧ್ಯಕ್ಷ ಹಾಗೂ ಸಚಿವ ಎಸ್.ಮಧು ಬಂಗಾರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸೇವಾ ಬಂಗಾರ ಪ್ರಶಸ್ತಿಯನ್ನು ಎಸ್.ಜಿ.ಸುಶೀಲಮ್ಮ, ಸಾಹಿತ್ಯ ಬಂಗಾರ ಪ್ರಶಸ್ತಿಯನ್ನು ಕುಂ.ವೀರಭದ್ರಪ್ಪ, ರಂಗ ಬಂಗಾರ ಪ್ರಶಸ್ತಿಯನ್ನು ಪ್ರತಿಭಾ ನಾರಾಯಣ್ ರವರಿಗೆ ನೀಡಿ, ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಬಂಗಾರಪ್ಪ ಅವರ ಕುರಿತು ನಡೆದ ಭಾಷಣ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಗಾರಪ್ಪ ಅವರ ಒಡನಾಡಿ ಬಸಪ್ಪ ಅಂಕರವಳ್ಳಿ ವಹಿಸಿದ್ದರು.

ಬಂಗಾರಪ್ಪ ವಿಚಾರ ವೇದಿಕೆ ಅಧ್ಯಕ್ಷ ವೇಣು ಗೋಪಾಲ್ ನಾಯಕ್, ರಾಜ್ಯ ನಾಟಕ ಅಕಾಡೆಮಿ ಅಧ್ಯಕ್ಷ ನಾಗರಾಜ ಮೂರ್ತಿ, ಶಾಸಕ ಭೀಮಣ್ಣ ನಾಯಕ್, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿ, ಬಲ್ಕೀಷ್ ಭಾನು, ಕಾಂಗ್ರೆಸ್ ಜಿಲ್ಲಾದ್ಯಕ್ಷ ಅರ್. ಪ್ರಸನ್ನಕುಮಾರ್, ಗೀತಾ ಶಿವರಾಜ್ ಕುಮಾರ್, ಅನಿತಾ ಮಧು ಬಂಗಾರಪ್ಪ, ಸೂರ್ಯ ಮಧು ಬಂಗಾರಪ್ಪ, ಮುಖಂಡರಾದ ಕಲಗೋಡು ರತ್ನಾಕರ, ನಾಗರಾಜ ಗೌಡ ಶಿಕಾರಿಪುರ, ವೈ.ಎಚ್.ನಾಗರಾಜ್, ಡಿ.ಬಿ.ಅಣ್ಣಪ್ಪ ಸದಾನಂದಗೌಡ ಬಿಳಗಲಿ, ಕೆ.ಪಿ.ರುದ್ರಗೌಡ, ಎಚ್.ಗಣಪತಿ, ಎಂ.ಡಿ. ಶೇಖರ್, ಶಿವಲೀಂಗೇಗೌಡ, ಸುರೇಶ್ ಭಂಡಾರಿ, ರಾಜೇಶ್ ಸನ್ನಿ, ರವಿ ಕೇಸರಿ, ಪ್ರವೀಣ್ ಕುಮಾರ್ ಶಾಂತಗೇರಿ ಸೇರಿ ಇತರರಿದ್ದರು.

Share this article