ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ನಾಡೋಜ ಎಸ್.ಎಲ್.ಭೈರಪ್ಪ ನಿಧನದಿಂದ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಪ್ರೆಸ್ ಕ್ಲಬ್ ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳ ನೇತೃತ್ವದಲ್ಲಿ ಆಯೋಜಿಸಿದ್ದ ಎಸ್.ಎಲ್. ಭೈರಪ್ಪರ ಶ್ರದ್ಧಾಂಜಲಿ ಸಭೆಯಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಸಂತೇಶಿವರ ಗ್ರಾಮದ ಸಾಮಾನ್ಯ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಭೈರಪ್ಪ ಅವರು, ಬಾಲ್ಯದಲ್ಲಿಯೇ ತಮ್ಮ ತಾಯಿಯನ್ನು ಕಳೆದುಕೊಂಡರು. ಅತ್ಯಂತ ಬಡತನದಲ್ಲಿ ವಿದ್ಯಾಭ್ಯಾಸವನ್ನು ಮಾಡಿ ನಾಡಿನ ಶ್ರೇಷ್ಠಕಾದಂಬರಿಕಾರರಲ್ಲಿ ಒಬ್ಬರಾದರು ಎಂದರು.ತಾಯಿ ಸರಸ್ವತಿ ವರಪುತ್ರರಾಗಿ ಸರಸ್ವತಿ ಸಮ್ಮಾನ್ ಸಾಹಿತ್ಯ ಲೋಕದ ಸರ್ವ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದ ಭೈರಪ್ಪ ಕನ್ನಡದ ಅಸ್ಮಿತೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ಕೀರ್ತಿ ಭೈರಪ್ಪ ಅವರ ಕಾದಂಬರಿಗಳಿಗೆ ಸಲ್ಲುತ್ತದೆ. 94 ವರ್ಷಗಳ ತುಂಬು ಜೀವನ ಕಳೆದಿರುವ ಭೈರಪ್ಪರ ನಿಧನ ತುಂಬಲಾರದ ನಷ್ಟವಾಗಿದೆ ಎಂದು ಕಂಬನಿ ಮಿಡಿದರು.
ತಾಲೂಕು ಕಸಾಪ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ ಮಾತನಾಡಿ, ಭೈರಪ್ಪ ಅವರ ಮೇರು ವ್ಯಕ್ತಿತ್ವವು ಇಂದಿನ ಯುವ ಸಾಹಿತಿಗಳಿಗೆ ಮಾದರಿಯಾಗಿದೆ. ಅವರು ರಚಿಸಿರುವ ಕಾದಂಬರಿಗಳನ್ನು ಓದಿ ಮನನ ಮಾಡಿಕೊಂಡು ಜ್ಞಾನ ಹೆಚ್ಚಿಸಿಕೊಳ್ಳಬೇಕು ಎಂದರು.ಈ ವೇಳೆ ತಾಲೂಕು ಕಸಾಪ ಮಾಜಿ ಅಧ್ಯಕ್ಷ ಕೆ.ಆರ್.ನೀಲಕಂಠ, ಉಪನ್ಯಾಸಕ ಬಲ್ಲೇನಹಳ್ಳಿ ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಎನ್.ಪ್ರವೀಣ್, ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಕತ್ತರಘಟ್ಟ ವಾಸು, ಗಾನಗಂಧರ್ವ ಸುಗಮ ಸಂಗೀತ ಸಂಸ್ಥೆ ರವಿ ಶಿವಕುಮಾರ್, ಜಯಶ್ರೀ ಚಿಮ್ಮಲ್, ಪತ್ರಕರ್ತರಾದ ಆರ್.ಶ್ರೀನಿವಾಸ್, ಹೊನ್ನೇನಹಳ್ಳಿ ರವಿ, ಚೇತನಾ ಮಹೇಶ್, ಶಶಿಧರ್ ಸಂಗಾಪುರ, ಚಲುವಯ್ಯ, ಲಕ್ಷ್ಮಣಗೌಡ, ಪ್ರಕಾಶ್ ಸೇರಿದಂತೆ ಭೈರಪ್ಪರ ನೂರಾರು ಅಭಿಮಾನಿಗಳು ಭಾಗವಹಿಸಿದ್ದರು.