ಕೆಂಪೇಗೌಡ ಜಯಂತಿಯಂದು ಎಸ್.ಎಂ. ಕೃಷ್ಣ ರಸ್ತೆ ದಶಪಥ ರಸ್ತೆ ಸಂಚಾರಕ್ಕೆ ಮುಕ್ತ

KannadaprabhaNewsNetwork |  
Published : Jun 26, 2026, 03:45 AM ISTUpdated : Jun 26, 2026, 05:05 AM IST
Road

ಸಾರಾಂಶ

ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ನಿರ್ಮಾಣವಾಗಿ ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಿರುವ ‘ಎಸ್.ಎಂ. ಕೃಷ್ಣ ರಸ್ತೆ’ ಹೆಸರಿನ ಟೋಲ್-ರಹಿತ ರಸ್ತೆಯು ಜೂ.27 ರಂದು ಲೋಕಾರ್ಪಣೆಗೊಳ್ಳಲಿದ್ದು, ಮಾಗಡಿ ರಸ್ತೆ ಹಾಗೂ ಮೈಸೂರು ರಸ್ತೆಯ ನಡುವಿನ ಸಂಚಾರ ಅವಧಿಯನ್ನು 1 ಗಂಟೆಯಿಂದ 15 ನಿಮಿಷಗಳಿಗೆ ತಗ್ಗಿಸಲಿದೆ.

 ಬೆಂಗಳೂರು :  ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ನಿರ್ಮಾಣವಾಗಿ ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಿರುವ ‘ಎಸ್.ಎಂ. ಕೃಷ್ಣ ರಸ್ತೆ’ ಹೆಸರಿನ ಟೋಲ್-ರಹಿತ ರಸ್ತೆಯು ಜೂ.27 ರಂದು ಲೋಕಾರ್ಪಣೆಗೊಳ್ಳಲಿದ್ದು, ಮಾಗಡಿ ರಸ್ತೆ ಹಾಗೂ ಮೈಸೂರು ರಸ್ತೆಯ ನಡುವಿನ ಸಂಚಾರ ಅವಧಿಯನ್ನು 1 ಗಂಟೆಯಿಂದ 15 ನಿಮಿಷಗಳಿಗೆ ತಗ್ಗಿಸಲಿದೆ.

ಮಾಗಡಿ ರಸ್ತೆಯ ಕಡಬಗೆರೆ ಕ್ರಾಸ್‌ನಿಂದ ಮೈಸೂರು ರಸ್ತೆ ಚಲ್ಲಘಟ್ಟ ಮೆಟ್ರೋ ನಿಲ್ದಾಣದವರೆಗೆ ಸಂಪರ್ಕ ಕಲ್ಪಿಸುವುದರ ಜೊತೆಗೆ ನಾಡಪ್ರಭು ಕೆಂಪೇಗೌಡ ಬಡಾವಣೆಯ ಎಲ್ಲಾ 9 ಬ್ಲಾಕ್‌ಗಳನ್ನು ಸಂಪರ್ಕಿಸುತ್ತದೆ. ಮಾಗಡಿ ರಸ್ತೆಯಿಂದ ಮೈಸೂರು ರಸ್ತೆ ಸಂಪರ್ಕಿಸುವ ವಾಹನಗಳು ಪ್ರಸ್ತುತ ನೈಸ್ ರಸ್ತೆ ಅಥವಾ ನಾಯಂಡಹಳ್ಳಿ -ಸಮ್ಮನಹಳ್ಳಿ ಜಂಕ್ಷನ್ ಮುಖಾಂತರ ಚಲಿಸಬೇಕಾಗಿದ್ದು ಈ ಮಾರ್ಗದ ವಾಹನ ಸಂಚಾರ ಅವಧಿ 60 ನಿಮಿಷಗಳಷ್ಟಿತ್ತು. ಆದರೀಗ ‘ಎಸ್.ಎಂ.ಕೃಷ್ಣ’ ರಸ್ತೆಯು ಸಂಚಾರ ಅವಧಿಯನ್ನು 15 ನಿಮಿಷಗಳಿಗೆ ತಗ್ಗಿಸಲಿದೆ.

ಈ ರಸ್ತೆ ಕಂಬೀಪುರ, ಕೊಮ್ಮಘಟ್ಟ ಹಾಗೂ ಕೆಂಚನಪುರ ಪ್ರದೇಶಗಳಿಗೆ ಸುಗಮ ಸಂಪರ್ಕ ಒದಗಿಸಲಿದೆ. ಜೊತೆಗೆ ಮಾಚೋಹಳ್ಳಿ, ಕೊಡಿಗೆಹಳ್ಳಿ, ಕನ್ನಳ್ಳಿ, ಕೆಂಚನಪುರ, ಸೂಲಿಕೆರೆ, ಕೊಮ್ಮಘಟ್ಟ ಹಾಗೂ ಚಲ್ಲಘಟ್ಟ ಗ್ರಾಮಗಳಿಗೆ ಹೊಂದಿಕೊಂಡಂತಿದ್ದು, ಗ್ರಾಮಗಳ ಸರ್ವಾಂಗೀಣ ಅಭಿವೃದ್ದಿಗೆ ಸಹಕಾರಿಯಾಗಲಿದೆ. ಮೈಸೂರು, ಮಾಗಡಿ, ಹಾಸನ, ಕುಣಿಗಲ್, ಮಂಡ್ಯ ಹಾಗೂ ರಾಮನಗರ ಭಾಗಗಳಿಂದ ಬೆಂಗಳೂರಿಗೆ ಸಂಚರಿಸುವ ಸಾವಿರಾರು ಪ್ರಯಾಣಿಕರಿಗೆ ಹಣ ಮತ್ತು ಸಮಯ ಉಳಿತಾಯ ಮಾಡುವ ಪ್ರಮುಖ ಮಾರ್ಗವಾಗಲಿದೆ.

ಹೊರವರ್ತುಲ ರಸ್ತೆಗೆ ಉಂಗುರ:

ಪಿ.ಆರ್.ಆರ್-2 ರಸ್ತೆಯು ಎಲೆಕ್ಟ್ರಾನಿಕ್ ಸಿಟಿ ಬಳಿ ಹೊಸೂರು ರಸ್ತೆಯಿಂದ ಪ್ರಾರಂಭಿಸಿ ಬನ್ನೆರಘಟ್ಟ ರಸ್ತೆ-ಕನಕಪುರ ರಸ್ತೆ-ಮೈಸೂರು ರಸ್ತೆ-ಮಾಗಡಿ ರಸ್ತೆ ಮುಖಾಂತರ ತುಮಕೂರು ರಸ್ತೆಯನ್ನು ಸಂಪರ್ಕಿಸುತ್ತದೆ. ಬಳಿಕ ಪಿ.ಆರ್.ಆರ್-1 ರ ರಸ್ತೆಗೆ ಸೇರ್ಪಡೆಗೊಂಡು ಬೆಂಗಳೂರು ನಗರಕ್ಕೆ ಹೊರವರ್ತುಲ ರಸ್ತೆಗೆ ಉಂಗುರವಾಗಿ ಮಾರ್ಪಡುತ್ತದೆ.

ಆಧುನಿಕ ಸರ್ವಿಸ್ ರಸ್ತೆ, 10 ಕಿ.ಮೀ. ಸೈಕಲ್‌ ಪಥ:

631 ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಯೋಜನೆಯಲ್ಲಿ 3 ಪ್ರಮುಖ ಅಂಡರ್‌ಪಾಸ್‌ಗಳು, 11 ಸೇತುವೆಗಳು, 270 ಮೀಟರ್ ಉದ್ದದ ಸುರಂಗ ಮಾರ್ಗ, ಆಧುನಿಕ ಸರ್ವಿಸ್ ರಸ್ತೆ, ಸೈಕಲ್ ಟ್ರಾಕ್ ವ್ಯವಸ್ಥೆ ಒಳಗೊಂಡಿವೆ. ಪರಿಸರಸ್ನೇಹಿ ಸಾರಿಗೆಯನ್ನು ಉತ್ತೇಜಿಸಲು ಈ ರಸ್ತೆಯಲ್ಲಿ 10.7 ಕಿ.ಮೀ. ಉದ್ದದವರೆಗೆ ಸೈಕಲ್ ಪಥ ನಿರ್ಮಾಣವಾಗಲಿದೆ. 10.7 ಕಿ.ಮೀ. ಉದ್ದದ, 100 ಮೀ ಅಗಲದ (330 ಅಡಿ), 10 ಲೇನ್‌ಗಳು ರಸ್ತೆಯ ಎರಡೂ ಬದಿಗಳಲ್ಲಿ 27.0ಮೀ. ಅಗಲದ (89 ಅಡಿ x 2 ಅಗಲ) ಪ್ರದೇಶವನ್ನು ಮರದ ತೋಪು ನಿರ್ಮಾಣಕ್ಕಾಗಿ (ಬುಲೆವಾರ್ಡ್‌) ಕಾಯ್ದಿರಿಸಲಾಗಿದೆ. ಈ ರಸ್ತೆಯಲ್ಲಿ 3.0ಮೀ. ಅಗಲದ ರಸ್ತೆ ವಿಭಜಕ (ಮೀಡಿಯನ್) ಅಳವಡಿಸಿಕೊಳ್ಳಲಾಗಿದ್ದು ಭವಿಷ್ಯದಲ್ಲಿ ಬೆಂಗಳೂರು ಮೆಟ್ರೋ ಜಾಲವನ್ನು ವಿಸ್ತರಿಸಲು ಯೋಜಿಸಲಾಗಿದೆ.

ಸವಾಲು ಮೆಟ್ಟಿನಿಂತು ಕೆಲಸ:

ರಸ್ತೆಯ ಆರಂಭದ ಸರಪಳಿಯ 750 ಮೀ. ಉದ್ದದ ಪ್ರದೇಶದಲ್ಲಿ ಗ್ರಾನೈಟ್ ಕಾರ್ಖಾನೆಗಳು ಹಾಗೂ ಇತರೆ ವಾಣಿಜ್ಯ ಚಟುವಟಿಕೆ ಪ್ರದೇಶವಾಗಿದ್ದು, ಕಾಮಗಾರಿಯ ಪ್ರಗತಿ ಸವಾಲಿನ ಕೆಲಸವಾಗಿತ್ತು. ಈ ಎಲ್ಲಾ ಪ್ರಕರಣಗಳನ್ನು ಒಗ್ಗೂಡಿಸಿ ನ್ಯಾಯಾಲಯದಲ್ಲಿ ಸೂಕ್ತ ಆದೇಶ ಪಡೆದು ಸುಮಾರು 50 ರಿಂದ 60 ಕಾರ್ಖಾನೆಗಳನ್ನು 3 ದಿನಗಳ ದಾಖಲೆ ಅವಧಿಯಲ್ಲಿ ಸ್ಥಳಾಂತರಿಸಿದ್ದು, ಚಲ್ಲಘಟ್ಟ ಮೆಟ್ರೋ ಡಿಪೋ ಕಳಗೆ 260 ಅಡಿ ಅಗಲದ ರಸ್ತೆ ನಿರ್ಮಿಸಲಾಗಿದೆ.

ರೈಲು ಸಂಚಾರಕ್ಕೆ ಅಡ್ಡಿಯಾಗದಂತೆ ಕಾಮಗಾರಿ:

ರಸ್ತೆಯು ಬೆಂಗಳೂರು-ಮೈಸೂರು ಜೋಡಿ ಮಾರ್ಗದ ರೈಲ್ವೆ ಹಳಿಗಳಿಗೆ ಅಡ್ಡಲಾಗಿ ಹಾದುಹೋಗಿದ್ದು, ರೈಲು ಸಂಚಾರಕ್ಕೆ ಅಡ್ಡಿಯಾಗದಂತೆ ಕಾಮಗಾರಿ ಅನುಷ್ಠಾನಗೊಳಿಸಲಾಗಿದೆ.

ವಾಲ್ ಆಫ್ ಗ್ರಾಟಿಟ್ಯೂಡ್ ನಲ್ಲಿ ಜಮೀನು ಮಾಲೀಕರ ಹೆಸರು:

‘ಎಸ್.ಎಂ.ಕೃಷ್ಣ ರಸ್ತೆ‘ಗೆ 321 ಎಕರೆ ಭೂಮಿ ವಶಪಡಿಸಿಕೊಂಡಿದ್ದು, ಜಮೀನು ನೀಡಿರುವ 170ಕ್ಕೂ ಹೆಚ್ಚು ಮಂದಿ ಮಾಲೀಕರ ಹೆಸರನ್ನು ವಾಲ್ ಆಫ್ ಗ್ರಾಟಿಟ್ಯೂಡ್ (ವಾಲ್‌ ಆಫ್‌ ಗ್ರಾಟಿಟ್ಯೂಡ್‌)ನಲ್ಲಿ ಪ್ರಕಟಿಸುವ ಕಾರ್ಯವನ್ನು ಬಿಡಿಎ ಮಾಡಿದೆ.

‘ಎಸ್.ಎಂ.ಕೃಷ್ಣ’ ರಸ್ತೆ ಬೆಂಗಳೂರು ನಗರ ಮೂಲಸೌಕರ್ಯ ಅಭಿವೃದ್ಧಿಯ ಹೊಸ ಅಧ್ಯಾಯಕ್ಕೆ ಸಾಕ್ಷಿಯಾಗಲಿದೆ. ಈ ರಸ್ತೆ ದಕ್ಷಿಣ ಮತ್ತು ಪಶ್ಚಿಮ ಬೆಂಗಳೂರನ್ನು ಬೆಸೆಯಲಿದೆ. ಸಂಚಾರ ದಟ್ಟಣೆ ತಗ್ಗಿಸುವುದರ ಜೊತೆಗೆ ಹೊಸ ವಾಣಿಜ್ಯ ಚಟುವಟಿಕೆಗಳಿಗೆ ಉತ್ತೇಜನ ಸಿಗಲಿದ್ದು, ಉದ್ಯೋಗ ಸೃಷ್ಟಿಗೆ ಅವಕಾಶ ಸಿಗಲಿದೆ.

-ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ 

 ಅತ್ಯುತ್ತಮ ಮೂಲಸೌಕರ್ಯ ಯೋಜನೆಗಳ ಮೂಲಕ ಬಿಡಿಎ ಬೆಂಗಳೂರಿನ ಬೆಳವಣಿಗೆಗೆ ನಿರಂತರವಾಗಿ ಕೊಡುಗೆ ನೀಡುತ್ತಿದೆ. ಇದರ ಮುಂದುವರಿದ ಭಾಗವೇ ‘ಎಸ್.ಎಂ.ಕೃಷ್ಣ ರಸ್ತೆ’. ಸಾಕಷ್ಟು ಸವಾಲುಗಳ ನಡುವೆ ರಸ್ತೆ ನಿರ್ಮಾಣ ಕಾರ್ಯ ಪೂರ್ಣಗೊಳಿಸಲಾಗಿದೆ.

-ಮಣಿವಣ್ಣನ್, ಬಿಡಿಎ ಆಯುಕ್ತ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಕ್ರಿಪ್ಟೋ ಕರೆನ್ಸಿ ಬದಲಾವಣೆ ನೆಪದಲ್ಲಿ ಟೆಕ್ಕಿ ಬಳಿ ದರೋಡೆ ಮಾಡಿದ್ದ 12 ಮಂದಿ ಬಂಧನ
₹75 ಕೋಟಿಯ 12 ಬಿಡಿಎ ಸೈಟ್‌ ಕಬಳಿಕೆ: ಪಾಲಿಕೆ ಮಾಜಿ ಸದಸ್ಯರ ವಿರುದ್ಧ ದೂರು