ಗೋಪಾಲ್ ಯಡಗೆರೆ
ಕನ್ನಡಪ್ರಭ ವಾರ್ತೆ ಶಿವಮೊಗ್ಗನೈರುತ್ಯ ಪದವೀಧರ ಕ್ಷೇತ್ರದಿಂದ ವಿಧಾನಪರಿಷತ್‌ಗೆ ನಡೆಯುವ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಕಾಂಗ್ರೆಸ್ ಪಕ್ಷದಲ್ಲಿ ಬಿಗ್ ಫೈಟ್ ಆರಂಭಗೊಂಡಿದೆ. ಈಗಾಗಲೇ ಕಾಂಗ್ರೆಸ್ ಪಕ್ಷದಿಂದ ಅಧಿಕೃತ ಅಭ್ಯರ್ಥಿಯಾಗಿ ಘೋಷಿಸಲ್ಪಟ್ಟ ಆಯನೂರು ಮಂಜುನಾಥ್‌ಗೆ ಚುನಾವಣೆಗೆ ದೀರ್ಘ ಕಾಲದಿಂದ ತಯಾರಿ ನಡೆಸಿ ಟಿಕೆಟ್ ಸಿಗದೆ ನಿರಾಶರಾಗಿರುವ ಎಸ್. ಪಿ.ದಿನೇಶ್ ರೆಬಲ್ ಆಗುವ ಎಲ್ಲ ಸಾಧ್ಯತೆ ಎದುರಾಗಿದ್ದು, ಸ್ವತಃ ಎಸ್. ಪಿ.ದಿನೇಶ್ ಅವರೇ ಕಾಂಗ್ರೆಸ್ ಪಕ್ಷದ ಎಲ್ಲ ನಾಯಕರಿಗೆ ಪತ್ರ ಬರೆದು ಈ ವಿಷಯ ತಿಳಿಸಿದ್ದಾರೆ.
ತಾವು ಪಕ್ಷದಲ್ಲಿ ತಳಹಂತದಿಂದ ದುಡಿದು, ಎರಡು ಬಾರಿ ಅತ್ಯಂತ ಕಡಿಮೆ ಅಂತರದಿಂದ ಸೋತರೂ ಮತದಾರರ ನಿರಂತರ ಸಂಪರ್ಕ ಸಾಧಿಸಿರುವ ಕುರಿತು ವಿವರಿಸಿದ್ದಾರೆ. ಆದರೆ ಇಷ್ಟಾಗಿಯೂ ತಮಗೆ ಟಿಕೆಟ್ ನಿರಾಕರಿಸಿ ಪಕ್ಷಕ್ಕೆ ಏನೂ ಕೊಡುಗೆ ನೀಡದ ಪಕ್ಷಾಂತರಿ ಆಯನೂರು ಮಂಜುನಾಥ್ ರಿಗೆ ಟಿಕೆಟ್ ನೀಡಿರುವುದು ಆಘಾತಕಾರಿ ವಿಷಯ. ಇದರಿಂದ ಬೇಸತ್ತ ತಾವು ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ. ಜೊತೆಗೆ ತಮ್ಮ ಮತದಾರರಿಗೆ ಪತ್ರ ಬರೆದು ತಮ್ಮ ಸ್ಪರ್ಧೆಯ ಕುರಿತು ಮಾಹಿತಿ ನೀಡಿ ಬೆಂಬಲಿಸಲು ಕೋರಿದ್ದಾರೆ.ಕಳೆದ 2 ಚುನಾವಣೆಗಳಿಂದಲೇ ದೊಡ್ಡ ಮಟ್ಟದ ತಯಾರಿ:2012 ಮತ್ತು 2018 ರಲ್ಲಿ ಕಾಂಗ್ರೆಸ್‌ನಿಂದ ಎಸ್.ಪಿ.ದಿನೇಶ್ ನೈಋತ್ಯ ಪದವೀಧರ ಕ್ಷೇತ್ರದ ಚುನಾವಣೆಗೆ ದೊಡ್ಡ ಮಟ್ಟದ ತಯಾರಿ ನಡೆಸಿದ್ದರು. ದೊಡ್ಡ ಸಂಖ್ಯೆಯಲ್ಲಿ ಮತದಾರರ ನೋಂದಾಯಿಸಿದ್ದರು. ಆದರೆ ಎರಡೂ ಬಾರಿ ಗೆಲುವು ಸಾಧಿಸಲು ಸಾಧ್ಯವಾಗದೆ ಹೋದರೂ ಪಡೆದ ಮತಗಳ ಸಂಖ್ಯೆ ಅವರ ತಯಾರಿ ಮತ್ತು ಮತದಾರರ ಸಂಪರ್ಕವನ್ನು ಬಿಂಬಿಸಿತ್ತು. ಈ ಬಾರಿಯೂ ಖಂಡಿತವಾಗಿಯೂ ತಮಗೇ ಟಿಕೆಟ್ ನೀಡುವುದಾಗಿ ಪಕ್ಷದ ವರಿಷ್ಠರು ಭರವಸೆ ನೀಡಿದ್ದರಿಂದ ಮತ್ತೆ ಎಲ್ಲ ತಯಾರಿ ನಡೆಸಿದ್ದರು.
ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಗೆಲುವು ಸಾಧಿಸಿದ್ದ ಆಯನೂರು ಮಂಜುನಾಥ್ 2023ರ ವಿಧಾನಸಭಾ ಚುನಾವಣೆಯಲ್ಲಿ ಶಿವಮೊಗ್ಗ ನಗರ ಕ್ಷೇತ್ರದಿಂದ ತಮಗೆ ಟಿಕೆಟ್ ನೀಡದ ಕಾರಣ ಬಿಜೆಪಿ ತೊರೆದು ಜೆಡಿಎಸ್‌ಗೆ ವಲಸೆ ಹೋಗಿದ್ದರು. ಆ ಚುನಾವಣೆಯಲ್ಲಿ ಸೋತ ಬಳಿಕ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದರು. ಕಾಂಗ್ರೆಸ್ ಪಕ್ಷದಲ್ಲಿ ವಕ್ತಾರ ಸ್ಥಾನ ಮಾತ್ರ ಪಡೆದ ಅವರು ಮಧು ಬಂಗಾರಪ್ಪರಿಗೆ ಹತ್ತಿರವಾದ ಕಾರಣ ಈ ಬಾರಿ ಆಯನೂರು ಮಂಜುನಾಥ್ ರಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.ವಲಸೆಗಾರರಿಗೆ ಆದ್ಯತೆ; ತೀವ್ರ ಅಸಮಾಧಾನ:ಇದರಿಂದ ದಿನೇಶ್ ಸಹಜವಾಗಿಯೇ ಕೆರಳಿದ್ದಾರೆ. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನವನ್ನಾದರೂ ತಮಗೆ ನೀಡಬಹುದಿತ್ತು. ಅದನ್ನೂ ನೀಡಲಿಲ್ಲ. ಯಾವುದೇ ನಿಗಮ ಮಂಡಳಿಯ ಸ್ಥಾನಮಾನ ಕೂಡ ನೀಡಲಿಲ್ಲ. ಇಷ್ಟು ವರ್ಷ ಪಕ್ಷಕ್ಕಾಗಿ ದುಡಿದ ಬಳಿಕ ತಮ್ಮನ್ನು ಮೂಲೆಗುಂಪು ಮಾಡಿ ವಲಸೆಗಾರರಿಗೇ ಆದ್ಯತೆ ನೀಡಿರುವುದರ ಕುರಿತು ತೀವ್ರ ಅಸಮಾಧಾನ ಹೊಂದಿದ್ದಾರೆ. ಆಯನೂರು ಮಂಜುನಾಥ್‌ಗೆ ಟಿಕೆಟ್ ಘೋಷಿಸುವ ಮುನ್ನ ಕನಿಷ್ಠ ಪಕ್ಷ ತಮ್ಮನ್ನು ಕರೆದು ಮಾತೂ ಆಡಿಸದ ಪಕ್ಷದ ವರಿಷ್ಠರ ನಿರ್ಧಾರಕ್ಕೆ ಬೇಸರಗೊಂಡಿದ್ದಾರೆ.
ತಮ್ಮದೇ ಮತಬ್ಯಾಂಕ್ ಹೊಂದಿರುವ ನಂಬಿಕೆಯಲ್ಲಿರುವ ದಿನೇಶ್ ಇದೀಗ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ನಿರ್ಧಾರ ಕೈಗೊಂಡಿದ್ದಾರೆ. ಒಂದು ಪಕ್ಷ ಬೇರೆ ಪಕ್ಷದವರು ಕರೆದು ಟಿಕೆಟ್ ಕೊಟ್ಟರೆ ಸ್ಪರ್ಧಿಸುವ ಮುಕ್ತ ಮನಸ್ಸು ಕೂಡ ಹೊಂದಿದ್ದಾರೆ. ಒಟ್ಟಾರೆ ರೆಬೆಲ್ ಆಯನೂರು ಮಂಜುನಾಥ್‌ಗೆ ಇದೀಗ ದಿನೇಶ್ ರೆಬೆಲ್ ಆಗಿ ಚುನಾವಣೆಯಲ್ಲಿ ಕಠಿಣ ಸ್ಪರ್ಧೆ ನೀಡುವುದಂತೂ ಖಚಿತ.ನಾನು ಎರಡು ಅವಧಿಯಲ್ಲಿ ಹೊಸ ಮತದಾರರ ನೋಂದಣಿ ಸೇರಿದಂತೆ ನಿರಂತರ ಸಂಪರ್ಕದಿಂದ ದೊಡ್ಡ ಮತ ಬ್ಯಾಂಕ್ ನನ್ನ ಜೊತೆಯಲ್ಲಿದೆ. ಈ ಬಾರಿ ನನ್ನ ಗೆಲುವು ನಿಶ್ಚಿತ.-ಎಸ್. ಪಿ. ದಿನೇಶ್, ಸಂಭಾವ್ಯ ರೆಬೆಲ್ ಅಭ್ಯರ್ಥಿ
----------