ಕನ್ನಡಪ್ರಭ ವಾರ್ತೆ ಮದ್ದೂರು
ಮದ್ದೂರು ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಬೆಲ್ಲ ಮತ್ತು ಕಬ್ಬಿನ ಹಾರ ಹಾಕಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು.ಬೆಳಗ್ಗೆ ೧೦ ಗಂಟೆಗೆ ನಿಗದಿಯಾಗಿದ್ದ ಕಾರ್ಯಕ್ರಮ ಶುರುವಾದಾಗ ಮಧ್ಯಾಹ್ನ ೧ ಗಂಟೆಯಾಗಿತ್ತು. ಮದ್ದೂರು ವಡೆ ಸವಿದು ಸಮಾರಂಭಕ್ಕೆ ಆಗಮಿಸಿದ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರನ್ನು ತೆರೆದ ವಾಹನಕ್ಕೇರಿಸಲಾಯಿತು. ಬೆಲ್ಲ ಮತ್ತು ಕಬ್ಬಿನ ಬೃಹತ್ ಹಾರಗಳನ್ನು ಕ್ರೇನ್ ಸಹಾಯದಿಂದ ಸಮರ್ಪಿಸಿ ಗೌರವಿಸಲಾಯಿತು. ಸಚಿವ ಎನ್. ಚಲುವರಾಯಸ್ವಾಮಿ, ಶಾಸಕ ಕದಲೂರು ಉದಯ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಶಿವಣ್ಣ ಹಾಜರಿದ್ದರು.
ಸಮಾರಂಭದ ಪ್ರವೇಶ ದ್ವಾರವನ್ನು ಶಿವಪುರ ಧ್ವಜ ಸತ್ಯಾಗ್ರಹದ ರೀತಿಯಲ್ಲಿ ನಿರ್ಮಿಸಲಾಗಿತ್ತು. ಪ್ರವೇಶದ್ವಾರದಿಂದ ವೇದಿಕೆಯವರೆಗೆ ನೇರವಾಗಿ ರತ್ನಗಂಬಳಿ ಹಾಸಲಾಗಿತ್ತು. ಅದರ ಮೇಲೆ ನಡೆದುಬಂದ ನಾಯಕರಿಗೆ ವೇದಿಕೆಯ ಎರಡೂ ಕಡೆಯಿಂದ ಪುಷ್ಪವೃಷ್ಟಿ ಮಾಡಲಾಯಿತು. ಸಮಾರಂಭದಲ್ಲಿ ಸಾಧುಕೋಕಿಲಾ ತಂಡದವರಿಂದ ಗಾಯನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಮಾರಂಭಕ್ಕೆ ಆಗಮಿಸಿದ್ದ ಜನರೆಲ್ಲರಿಗೂ ಬಾತ್, ಲಾಡು, ಪಕೋಡಾವನ್ನು ಪ್ಯಾಕ್ ರೂಪದಲ್ಲಿ ನೀಡಲಾಯಿತು.ಮದ್ದೂರು ವಡೆ ತಿಂದ ಸಿಎಂ
ಮದ್ದೂರು:ತಾಲೂಕಿನ ಸೋಮನಹಳ್ಳಿಯಲ್ಲಿ ಸೋಮವಾರ ನಡೆದ ಕಾಂಗ್ರೆಸ್ ಸಾಧನಾ ಸಮಾವೇಶಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಗ ಮಧ್ಯೆ ಮದ್ದೂರು ಟಿಪಾನೀಸ್ ಹೋಟೆಲ್‌ನಲ್ಲಿ ಮದ್ದೂರು ವಡೆ ತಿಂದು ಸಂತಸ ವ್ಯಕ್ತಪಡಿಸಿದರು.ಮದ್ದೂರಿಗೆ ಆಗಮಿಸಿದ್ದಾಗ ಮದ್ದೂರು ವಡೆ ತಿನ್ನುವುದು ಸಿಎಂ ಹವ್ಯಾಸವಾಗಿತ್ತು. ಅದರಂತೆ ಸಾಧನಾ ಸಮಾವೇಶಕ್ಕೆ ಆಗಮಿಸುವ ಮುನ್ನ ಮುಖ್ಯಮಂತ್ರಿಗಳು ಬೆಂಗಳೂರು- ಮೈಸೂರು ಹೆದ್ದಾರಿ ಪಕ್ಕದ ಮದ್ದೂರು ಟಿಪಾನೀಸ್ ಹೋಟೆಲ್‌ನಲ್ಲಿ ಸಚಿವ ಮಹದೇವಪ್ಪ, ಶಾಸಕ ಕೆ.ಎಂ.ಉದಯ್ ಹಾಗೂ ಕಾಂಗ್ರೆಸ್ ಮುಖಂಡರೊಂದಿಗೆ ಮದ್ದೂರು ವಡೆ ತಿಂದು ಕಾಫಿ ಸೇವಿಸಿದ ನಂತರ ಸಮಾವೇಶಕ್ಕೆ ಆಗಮಿಸಿದರು.
ಈ ವೇಳೆ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕದಲೂರು ರಾಮಕೃಷ್ಣ, ಜಿಪಂ ಮಾಜಿ ಅಧ್ಯಕ್ಷ ಸುರೇಶ್ ಕಂಠಿ, ಮನ್ಮುಲ್ ಮಾಜಿ ನಿರ್ದೇಶಕ ಲಿಂಗನದೊಡ್ಡಿ ರಾಮಕೃಷ್ಣ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಇದ್ದರು.