ಕನ್ನಡಪ್ರಭ ವಾರ್ತೆ ಹುಮನಾಬಾದ್
ಸುಸಜ್ಜಿತ ಸರ್ಕಾರಿ ಕಚೇರಿ, ರಸ್ತೆಗಳ ನಿರ್ಮಾಣ ಹೊಂದಲ್ಲಿ ಮಾತ್ರ ಪಟ್ಟಣ ಇನ್ನು ಅಭಿವೃದ್ದಿಹೊಂದಲು ಸಾಧ್ಯ ಎಂದು ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ್ ಹೇಳಿದರು.ತಾಲೂಕಿನ ಹಳ್ಳಿಖೇಡ (ಬಿ) ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಲೋಕೋಪಯೋಗಿ ಇಲಾಖೆ ನಿರ್ವಹಣೆಯಲ್ಲಿ ಹಳ್ಳಿಖೇಡ (ಬಿ) ದಿಂದ ಸೀಮಿ ನಾಗನಾಥ ಕ್ರಾಸ್‌ವರೆಗೆ 2024-25ನೇ ಸಾಲಿನ ಅಪೆಂಡಿಕ್ಸ್ -ಇ ಯೋಜನೆಯ ಅಡಿಯಲ್ಲಿ ಮಂಜೂರಾದ ₹4 ಕೋಟಿ ವೆಚ್ಛದಲ್ಲಿ ಚತ್ತುಸ್ಪತ ರಸ್ತೆ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೆರಿಸಿ ಮಾತನಾಡಿದ ಅವರು. ಮತದಾನ ಹಕ್ಕು ಚಲಾಯಿಸುವ ಮೂಲಕ ನಮಗೆ ಸೇವಕನಾಗಿ ಆಯ್ಕೆ ಮಾಡಿದ್ದು, ತಮ್ಮ ಸೇವಕನಾಗಿ ಕೆಲಸ ಮಾಡಿದರೆ ಜೀವನ ಸಾರ್ಥಕ ಎಂದರು.
ಹಿಂದುಳಿದ ವಾರ್ಡಗಳ ಅಭಿವೃದ್ಧಿಗೆ ಪುರಸಭೆಯಿಂದ ಸ್ಕೇಚ್ ನಕಾಶೆಯ ಮೇಲೆ ಸಹಿ ಹಾಕಿ ಕೊಟ್ಟಲ್ಲಿ ಸ್ಲಂ ಬೋರ್ಡ್‌ನಿಂದ ಸಾವಿರ ಮನೆಗಳನ್ನು ತರಲು ಪ್ರಯತ್ನಿಸಲಾಗುತ್ತದೆ. ನಗರೋತ್ಥಾನ ಯೋಜನೆಯ ಅನುದಾನ ಬಂದಲ್ಲಿ ಇನ್ನು ನಗರ ಸುಂದರೀಕರಣಕ್ಕೆ ಸಹಕಾರಿಯಾಗಲಿದೆ. ಪ್ರವಾಸಿ ಮಂದಿರ ನಿರ್ಮಾಣಕ್ಕೆ ₹5 ಕೋಟಿ ಪ್ರಸ್ತಾವನೆ ಸಂಬಂಧಿತ ಸಚಿವರಿಂದ ಮಂಜೂರಾತಿ ಸಿಕಿದ್ದು, ಶೀಘ್ರದಲ್ಲೇ ಕಾಮಗಾರಿ ಪ್ರಾರಂಭಿಸಲಾಗುವುದು. ಇಲ್ಲಿನ ಮಕ್ಕಳ ಉನ್ನತ ಶಿಕ್ಷಣಕ್ಕೆ ಸರ್ಕಾರಿ ಪದವಿ ಪೂರ್ವ ಹಾಗೂ ಪದವಿ ಕಾಲೇಜು ಕುರಿತು ಸಲ್ಲಿಸಿದ ಮನವಿಗೆ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ ಎಂದು ತಿಳಿಸಿದರು.ಅಪೆಂಡಿಕ್ಸ್ -ಇ ಯೋಜನೆಯಲ್ಲಿ 8 ಕೋಟಿ ಕ್ಷೇತ್ರಕ್ಕೆ ಅನುದಾನ ನೀಡಿದ್ದು, ₹4 ಕೋಟಿ ಹಳ್ಳೀಖೇಡ (ಬಿ) ಪಟ್ಟಣಕ್ಕೆ ನೀಡಲಾಗಿದೆ. ಕೆ.ಕೆ.ಆರ್.ಡಿ.ಬಿ ಯೋಜನೆ ಅಡಿಯಲ್ಲಿ ಹುಮನಾಬಾದ್, ಘಾಟಬೋರಳ, ಹಳ್ಳಿಖೇಡ (ಬಿ) ಪಟ್ಟಣಕ್ಕೆ ₹1.49 ಕೋಟಿ ವೆಚ್ಛದಲ್ಲಿ ವಿದ್ಯುತ್ ದ್ವೀಪಗಳ ಕಂಬ ಅಳವಡಿಕೆಗೆ ಮೀಸಲಿಡಲಾಗಿದೆ.
ಹಳೆಯ ಬಸ್ ನಿಲ್ದಾಣ ಹೈಟೆಕ್ ಬಸ್ ನಿಲ್ದಾಣವಾಗಿ ಪರಿವರ್ತನೆಗೆ ಸಾರಿಗೆ ಸಚಿವರಿಗೆ ಮೂರು ಕೋಟಿ ರು.ಕೇಳಿದರೆ ಸದ್ಯ ಒಂದು ಕೋಟಿ ನೀಡಿದ್ದು, ಶಾಸಕರ ಅನುದಾನದಲ್ಲಿ 1.5 ಕೋಟಿ ರು. ನೀಡಿ ₹2.5 ಕೋಟಿ ವೆಚ್ಚದ ಮೂಲಕ ಮಾದರಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಮುಂದಾಗಿದ್ದೇವೆ. ವಿಧಾನ ಪರಿಷತ್ ಸದಸ್ಯರು ಇದೆ ಕ್ಷೇತ್ರದವರು ಇಬ್ಬರು ಇದ್ದಾರೆ. ಅವರು ಸಹಿತ ಮೈಕ್ರೋ ಯೋಜನೆ ಅಡಿಯಲ್ಲಿ ಇಬ್ಬರು ಸೇರಿ 5 ಕೋಟಿ ರು. ಅನುದಾನ ಕ್ಷೇತ್ರಕ್ಕೆ ನೀಡುವ ಮೂಲಕ ಸಹಕಾರ ನೀಡಿದಾಗ ಮಾತ್ರ ಕ್ಷೇತ್ರ ಅಭಿವೃದ್ಧಿ ಹೊಂದಲು ಸಾಧ್ಯ. ಎಂದು ವಿಧಾನ ಪರಿಷತ್ ಸದಸ್ಯರಲ್ಲಿ ಮನವಿ ಮಾಡಿಕೊಂಡರು.ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ್ ಮಾತನಾಡಿ, ಕ್ಷೇತ್ರ ಅಭಿವೃದ್ಧಿಗೆ ಮೈಕ್ರೋ ಸೇರಿದಂತೆ ವಿವಿಧ ಯೋಜನೆಯಡಿ ಯಲ್ಲಿ 100 ಕೋಟಿ ರು. ಅನುದಾನ ಶಾಸಕರ ಮೂಲಕ ಬರುತ್ತಿದ್ದು, ಇದರ ಸದಪಯೋಗ ಪಡೆದುಕೊಂಡು ಕ್ಷೇತ್ರ ರಾಜ್ಯಕ್ಕೆ ಮಾದರಿ ಮಾಡಬೇಕು ಹೊರತಾಗಿ, ಬೆರೆಯವರ ಹೆಸರಿನಲ್ಲಿ ಗುತ್ತಿಗೆ ಪಡೆದು ಕಾಮಗಾರಿ ಮಾಡಿದರೆ ಕ್ಷೇತ್ರ ಎಂದಿಗೂ ಅಭಿವೃದ್ಧಿ ಕಾಣಲ್ಲ. ಜೊತೆಗೆ ಈ ವಿಷಯ ಕುರಿತು ಶೀಘ್ರದಲ್ಲೇ ಹೊರ ಬೀಳಲಿದೆ ಎಂದು ಗುತ್ತಿಗೆ ಹಾಗೂ ಜನಪ್ರತಿನಿಧಿಗಳಿಗೆ ಕಿವಿಮಾತು ಹೇಳಿದರು.
ಈ ಹಿಂದಿನ ಅವಧಿಯಲ್ಲಿ ಹುಮನಾಬಾದ್ ಮತಕ್ಷೇತ್ರಕ್ಕೆ ಅತಿ ಹೆಚ್ಚು ಅನುದಾನ ಖರ್ಚು ಮಾಡಿದ್ದೇನೆ ಎಂದು ಇದೇ ಸಂದರ್ಭದಲ್ಲಿ ಸ್ಪಷ್ಟನೆ ನೀಡಿದರು.ಕ್ಷುಲ್ಲಕ ಕಾರಣಕ್ಕೆ ಜಗಳ: ವಿಧಾನ ಪರಿಷತ್ ಸದಸ್ಯ ಮಾತನಾಡುವ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತನು ಕಾಂಗ್ರೆಸ್ ಕಾರ್ಯಕರ್ತನಿಗೆ ಅವಾಚ್ಯ ಪದ ಬಳಕೆ ಮಾಡಿದ್ದಾನೆ ಎಂದು ಇಬ್ಬರು ಕಾರ್ಯಕರ್ತರು ಬೈದಾಡಿಕೊಂಡ ಘಟನೆ ಜರುಗಿತು. ಮಧ್ಯ ಪ್ರವೇಶಿಸಿದ ಸಿಪಿಐ ಹಾಗೂ ಪಿಎಸ್‌ಐ ಕಾರ್ಯಕರ್ತರನ್ನು ಶಾಂತತೆ ಕಾಪಾಡಿಸಲು ಹರ ಸಾಹಸ ಪಡಬೇಕಾಯಿತು. ನಾವೆಲ್ಲರೂ ಒಂದೇ ಇದ್ದೇವೆ. ಚುನಾವಣೆ ಸಂಧರ್ಭದಲ್ಲಿ ಪಕ್ಷ, ಪಾರ್ಟಿ ಮಾಡೋಣ ಎಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು. ಪುರಸಭೆ ಅಧ್ಯಕ್ಷೆ ಜಗದೇವಿ ಶಂಕೆ, ಸದಸ್ಯ ನರಸಿಂಗ ಸಗರ, ಮಲ್ಲಿಕಾರ್ಜುನ ಪ್ರಭಾ, ಸುಶೀಲ್ ಕುಮಾರ, ನಾಗರಾಜ ಹಿಬಾರೆ ಸೇರಿದಂತೆ ಅನೇಕರಿದ್ದರು.