ಅನೀಲಕುಮಾರ್ ದೇಶಮುಖ್
ಕನ್ನಡಪ್ರಭ ವಾರ್ತೆ ಔರಾದ್ಶಿಕ್ಷಕರ ಸಂಘಟಿತ ಪ್ರಯತ್ನ, ಶಾಲೆಯ ಹಳೆಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರ ಸಹಕಾರದಿಂದ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿರುವ ಜೋಜನಾ ಸರ್ಕಾರಿ ಪ್ರಾಥಮಿಕ ಶಾಲೆ ಖಾಸಗಿ ಶಾಲೆಗಳಿಗೂ ಮೀರಿಸುವಂತೆ ಬೆಳೆದು ನಿಂತಿದೆ.
ಹೌದು, ಕನ್ನಡ ಮಾಧ್ಯಮದ 1 ರಿಂದ 7ನೇ ತರಗತಿ ಹಾಗೂ 101 ವಿದ್ಯಾರ್ಥಿಗಳು 5 ಜನ ಶಿಕ್ಷಕರು ಹೊಂದಿರುವ ಈ ಶಾಲೆ ಗುಣಾತ್ಮಕ ಶಿಕ್ಷಣ, ಪ್ರಾಯೋಗಿಕ ಕಲಿಕೆ ಹಾಗೂ ಜೀವನ ಮೌಲ್ಯಗಳು ಸಾರುತ್ತ ತಾಲೂಕಿನಲ್ಲಿ ಇಂದು ಮಾದರಿ ಶಾಲೆಯಾಗಿ ಮಾರ್ಪಟ್ಟಿದೆ.ಸರ್ಕಾರಿ ಶಾಲೆಗಳೆಂದರೆ ಸಾರ್ವಜನಿಕರು ಅಲಕ್ಷ್ಯ ಮಾಡುವ ಪ್ರಸ್ತುತ ದಿನಗಳಲ್ಲಿ ಜೋಜನಾ ಶಾಲೆ ಪಾಲಕ-ಪೋಷಕರ ಮನಗೆಲ್ಲುವಲ್ಲಿ ಯಶಸ್ಸು ಸಾಧಿಸಿದೆ. ಮುಖ್ಯ ಶಿಕ್ಷಕಿ ಸವಿತಾ ಪಾಟೀಲ್ ಸೇರಿದಂತೆ ಉಳಿದೆಲ್ಲ ಶಿಕ್ಷಕರು ಶಾಲೆಯ ಅಭಿವದ್ಧಿಗೆ ಒಂದಿಲ್ಲೊಂದು ರೀತಿಯ ಕಾಣಿಕೆ ನೀಡುತ್ತ ಬರುತ್ತಿರುವುದು ಮಕ್ಕಳ, ಪಾಲಕ ಪೋಷಕರ ಉತ್ಸಾಹ ಹೆಚ್ಚಾಗಿ ಈ ಶಾಲೆಯತ್ತ ಮಕ್ಕಳು ಧಾವಿಸುವಂತೆ ಮಾಡಿದೆ.
ಈ ಹಿಂದೆ ಪರಿಸರ ಮಿತ್ರ ಶಾಲೆ ಎಂಬ ಕೀರ್ತಿ ಹೊಂದಿದ ಜೋಜನಾ ಸರ್ಕಾರಿ ಶಾಲೆ, ಶಿಕ್ಷಣದ ಜೊತೆ ಜೊತೆಗೆ ಮಕ್ಕಳಲ್ಲಿ ಜೀವನ ಕೌಶಲ, ನೈತಿಕ ಮೌಲ್ಯಗಳ ಪಾಠ ಮಾಡುತ್ತ ಪ್ರತಿ ಶುಕ್ರವಾರ ಮಕ್ಕಳ ಮನೋಸ್ಥೈರ್ಯ ಹೆಚ್ಚಿಸುವ ಕಾರ್ಯಕ್ರಮಗಳ ಆಯೋಜನೆ ಮಾಡಿ ಸಂಪನ್ಮೂಲ ವ್ಯಕ್ತಿಗಳಿಂದ ಮಾರ್ಗದರ್ಶನ ನಡೆಸಲಾಗುತ್ತದೆ.ಅಲ್ಲದೇ, ಮಕ್ಕಳಲ್ಲಿ ಓದುವ ಸಂಸ್ಕೃತಿ ಹೆಚ್ಚಿಸುವ ಮತ್ತು ಸಾಹಿತ್ಯದ ಅಭಿರುಚಿ ಹುಟ್ಟಿಸುವ ಉದ್ದೇಶದಿಂದ ‘ನನ್ನ ಪುಸ್ತಕ ನನ್ನ ಪರಿಚಯ’ಎಂಬ ವಿನೂತನ ಕಾರ್ಯಕ್ರಮ ಇಲ್ಲಿ ನಡೆಯುತ್ತಿದ್ದು, ವಿದ್ಯಾರ್ಥಿಗಳನ್ನು ಓದುವ ಹವ್ಯಾಸ ರೂಢಿಸುವ ಪ್ರಯತ್ನ ಪ್ರಾಥಮಿಕ ಹಂತದಲ್ಲೆ ನಡೆಯುತ್ತಿರುವುದು ವಿಶೇಷ.
ಶಾಲೆಯ ಹಳೆ ವಿದ್ಯಾರ್ಥಿಗಳು ಸೇರಿ ಶಾಲೆಯ ನೂತನ ಕಟ್ಟಡಕ್ಕೆ ಮತ್ತು ತರಗತಿ ಕೋಣೆಗಳಿಗೆ ಚಿತ್ರಗಳು ಬಿಡಿಸಲು 1 ಲಕ್ಷ ರು. ಕ್ಕೂ ಅಧಿಕ ಹಣ ದೇಣಿಗೆ ರೂಪದಲ್ಲಿ ನೀಡಿದ್ದು ಅನುಕರಣೀಯ. ಬಣ್ಣ ಬಣ್ಣದ ತರಗತಿ ಕೋಣೆಗಳು, ಚಿತ್ತಾಕರ್ಷಕ ಶೈಲಿಯ ಚಿತ್ರಗಳು, ಸುಂದರ ಕಲಿಕಾ ವಾತಾವರಣ ಹೊಂದಿರುವ ಈ ಶಾಲೆ ಮಕ್ಕಳನ್ನು ಕೈಬಿಸಿ ಕರೆಯುವಂತೆ ಮಾಡಿದ್ದು, ಮಕ್ಕಳು ಈ ಶಾಲೆಯಲ್ಲಿ ಹೋಗ್ತಿವಿ ಅನ್ನೋ ಹಠ ಮಾಡುವಷ್ಟರ ಮಟ್ಟಿಗೆ ಶೈಕ್ಷಣಿಕ ವಾತಾವರಣ ನಿರ್ಮಾಣ ಮಾಡುವಲ್ಲಿ ಶಿಕ್ಷಕರು ಯಶಸ್ಸು ಸಾಧಿಸಿದ್ದಾರೆ.ಪ್ರಾಥಮಿಕ ಶಾಲೆಗಳಲ್ಲಿ ಅಪರೂಪ ಎಂಬಂತೆ ಇಲ್ಲಿ ಮಾದರಿ ವಿಜ್ಞಾನ ಪ್ರಯೋಗಾಲಯ ಹೊಂದಿದೆ. ಮಕ್ಕಳು ವಿಜ್ಞಾನದ ಅನೇಕ ವಿಷಯಗಳು ಪ್ರಯೋಗಗಳ ಮೂಲಕ ಕಲಿತಾಗ ಕ್ಲಿಷ್ಟಕರವಾದ ಕಲಿಕೆ ಸರಳವಾಗಿ ಶಾಶ್ವತವಾಗಿ ಮಕ್ಕಳಲ್ಲಿ ನೆಲೆಗೊಳ್ಳುತ್ತದೆ ಎನ್ನುತ್ತಾರೆ ವಿಜ್ಞಾನ ಶಿಕ್ಷಕ ಪ್ರದೀಪ ಗುಬನೂರೆ.
ಹೀಗೆ ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ ಶ್ರಮಿಸುತ್ತಿರುವ ಈ ಶಾಲೆ ತಾಲೂಕಿನಲ್ಲಿ ಮಾದರಿಯಾಗಿ ನಿಂತಿದೆ. ಶಾಲೆ ಮಕ್ಕಳು ಪ್ರತಿಭಾ ಕಾರಂಜಿ, ಗಣಿತ ಸ್ಪರ್ಧೆ ಹಾಗೂ ಕ್ರೀಡಾ ಸ್ಪರ್ಧೆಗಳಲ್ಲಿ ಜಿಲ್ಲಾ ಮತ್ತು ವಿಭಾಗ ಮಟ್ಟದಲ್ಲಿ ಮಿಂಚಿ ಶಾಲೆಯ ಕೀರ್ತಿ ಹೆಚ್ಚಿಸುತ್ತಾರೆ ಎಂದು ಅಭಿಮಾನ ಪಡುತ್ತಾರೆ ಮುಖ್ಯ ಶಿಕ್ಷಕಿ ಸವಿತಾ ಪಾಟೀಲ್.ಶಾಲೆಯಲ್ಲಿ ಗುಣಾತ್ಮಕ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತಿದೆ. ಶಿಕ್ಷಕರ ಉತ್ತಮ ಬೋಧನೆ ಹಾಗೂ ಕಲಿಕಾ ಚಟುವಟಿಕೆ ಮಕ್ಕಳಲ್ಲಿ ಕಲಿಕೆಯ ಉತ್ಸಾಹ ಹೆಚ್ಚಿಸಿದೆ. ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಶಿಕ್ಷಣ ನೀಡುವ ನಮ್ಮ ಶಾಲೆ ನಮ್ಮ ಪಾಲಿಗೆ ವರದಾನವಾಗಿ ಮಾರ್ಪಟ್ಟಿದೆ.
- ಪ್ರಲ್ಹಾದ್ ಕೌಟಗೆ, ಅಧ್ಯಕ್ಷರು, ಎಸ್‌ಡಿಎಂಸಿ
ಸರ್ಕಾರಿ ಪ್ರಾಥಮಿಕ ಶಾಲೆ, ಜೋಜನಾಸರ್ಕಾರಿ ಶಾಲೆಗಳ ಬಲವರ್ಧನೆಗೆ ಇಲಾಖೆ ಜಾರಿಗೆ ತಂದ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತ ಮಕ್ಕಳಿಗೆ ಶಿಕ್ಷಣದ ಜೊತೆಗೆ ಜೀವನ ಕೌಶಲ್ಯ ಬೋಧಿಸುವ ಪ್ರಯೋಗ ಈ ಶಾಲೆಯಲ್ಲಿ ನಡೆಯುತ್ತಿದೆ. ಜೋಜನಾ ಸರ್ಕಾರಿ ಶಾಲೆಯನ್ನು ಮಾದರಿಯಾಗಿ ಇಟ್ಟುಕೊಂಡು ತಾಲೂಕಿನ ಪ್ರತಿಯೊಂದು ಸರ್ಕಾರಿ ಶಾಲೆಗಳು ಇದೇ ರೀತಿಯಲ್ಲಿ ಕೆಲಸ ಮಾಡಬೇಕಾಗಿದೆ. ಜೋಜನಾ ಶಾಲೆಯ ಶಿಕ್ಷಕರ ಕೆಲಸ ನಿಜಕ್ಕೂ ಶ್ಲಾಘನೀಯ.
- ಪ್ರಕಾಶ ರಾಠೋಡ್
ಕ್ಷೇತ್ರ ಸಮನ್ವಯಾಧಿಕಾರಿಗಳು, ಔರಾದ್