ಹೆಚ್ಚು ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಸಫಾರಿ ಕೇಂದ್ರ

KannadaprabhaNewsNetwork | Published : Oct 16, 2024 12:38 AM

ಸಾರಾಂಶ

ಮಲೆ ಮಹದೇಶ್ವರ ವನ್ಯಧಾಮದಲ್ಲಿ ಹುಲಿ, ನಕ್ಷತ್ರ ಆಮೆ ವನ್ಯ ಮೃಗಗಳು ಪ್ರವಾಸಿಗರಿಗೆ ಪ್ರತ್ಯಕ್ಷವಾಗಿದ್ದು, ಸಫಾರಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕನ್ನಡಪ್ರಭ ವಾರ್ತೆ ಹನೂರು ಮಲೆ ಮಹದೇಶ್ವರ ವನ್ಯಧಾಮದಲ್ಲಿ ಹುಲಿ, ನಕ್ಷತ್ರ ಆಮೆ ವನ್ಯ ಮೃಗಗಳು ಪ್ರವಾಸಿಗರಿಗೆ ಪ್ರತ್ಯಕ್ಷವಾಗಿದ್ದು, ಸಫಾರಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಪಿಜಿ ಪಾಳ್ಯ ವಲಯ ಅರಣ್ಯ ಪ್ರದೇಶದ ಸಫಾರಿ ವೇಳೆಯಲ್ಲಿ ಪ್ರವಾಸಿಗರಿಗೆ ಹುಲಿ ಕಾಣಿಸಿಕೊಂಡಿದ್ದು ಪ್ರವಾಸಿಗರು ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುವ ಮೂಲಕ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಸಹ ಹುಲಿ ಇರುವ ಬಗ್ಗೆ ಸ್ಪಷ್ಟಪಡಿಸಿದ್ದು ಪಿಜಿ ಪಾಳ್ಯ ಸಫಾರಿ ಕೇಂದ್ರಕ್ಕೆ ಇತ್ತೀಚೆಗೆ ಹೆಚ್ಚು ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಿದ್ದು, ಹೆಚ್ಚುವರಿಯಾಗಿ ಮಲೆ ಮಾದೇಶ್ವರ ವನ್ಯಧಾಮದ ಅಜ್ಜಿಪುರದಲ್ಲೂ ಸಫಾರಿಗೆ ಅವಕಾಶ ಕಲ್ಪಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು ಈ ಭಾಗದಲ್ಲಿ ಕಾಡಾನೆಗಳು ಹುಲಿ ಚಿರತೆ ಹಾಗೂ ಸಾವಿರಾರು ಜಿಂಕೆಗಳು ಇದ್ದು, ಜೊತೆಗೆ ಕಾಡೆಮ್ಮೆ ಮೊಸಳೆ ಇನ್ನಿತರ ಪ್ರಾಣಿ ಪಕ್ಷಿಗಳು ಸಹ ಅರಣ್ಯ ಪ್ರದೇಶದಲ್ಲಿ ಪ್ರವಾಸಿಗರಿಗೆ ಕಂಡುಬಂದಿದೆ. ಹೀಗಾಗಿ ಸಫಾರಿ ಕೇಂದ್ರ ಇತ್ತೀಚೆಗೆ ಪ್ರಾಣಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಹೆಚ್ಚು ಹೆಚ್ಚು ಪ್ರವಾಸಿಗರನ್ನು ಸಫಾರಿ ಕೇಂದ್ರ ಆಕರ್ಷಿಸುತ್ತಿದೆ.

ನಕ್ಷತ್ರ ಆಮೆ ಪ್ರತ್ಯಕ್ಷ:

ಸಫಾರಿಗೆ ತೆರಳಿದ್ದ ವೇಳೆ ಪ್ರವಾಸಿಗರಿಗೆ ನಕ್ಷತ್ರ ಆಮೆ ಕಂಡುಬಂದಿದ್ದು ಈ ಬಗ್ಗೆ ಡಿಸಿಎಫ್ ಸಂತೋಷ್ ಕುಮಾರ್ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಹುಲಿ ಇರುವ ಬಗ್ಗೆಯೂ ಸಹ ಮಾಹಿತಿ ಹಂಚಿಕೊಂಡಿದ್ದಾರೆ. ಹೀಗಾಗಿ ಸಫಾರಿ ಕೇಂದ್ರದಲ್ಲಿ ಹೆಚ್ಚು ಪ್ರವಾಸಿಗರು ಬರುತ್ತಿದ್ದು, ಮಲೆ ಮಾದೇಶ್ವರ ಬೆಟ್ಟಕ್ಕೆ ಬರುವ ಭಕ್ತಾದಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಫಾರಿ ಕೇಂದ್ರ ತೆರೆದಿರುವುದಾಗಿ ಪ್ರವಾಸಿಗರು ಹೆಚ್ಚು ಹೆಚ್ಚು ಭೇಟಿ ನೀಡಿ ಇಲ್ಲಿನ ವನ್ಯಕುಲ ಪ್ರಾಣಿ ಪಕ್ಷಿಗಳನ್ನು ವೀಕ್ಷಿಸುವ ಮೂಲಕ ಸದ್ಬಳಕೆ ಮಾಡಿಕೊಳ್ಳಿ ಎಂದು ತಿಳಿಸಿದ್ದಾರೆ.ಹಸಿರುಮಯವಾದ ಕಾನನ:

ಇತ್ತೀಚೆಗೆ ಹಲವಾರು ದಿನಗಳಿಂದ ಬೀಳುತ್ತಿರುವ ಮಳೆಯಿಂದಾಗಿ ಪಿಜಿ ಪಾಳ್ಯ ಸಫಾರಿ ಕೇಂದ್ರದಲ್ಲಿ ಪ್ರಾಣಿ ಪಕ್ಷಿಗಳ ಕಲರವ ಕಂಡು ಜೊತೆಗೆ ಹಸಿರುಮಯವಾಗಿರುವ ಕಾನನ ನಡುವೆ ಸಫಾರಿ ಕೇಂದ್ರವನ್ನು 18 ಕಿಲೋಮೀಟರ್ ವ್ಯಾಪ್ತಿಯಲ್ಲಿ ಪ್ರವಾಸಿಗರಿಗೆ ವನಸಿರಿಯ ನಡುವೆ ಹಾದು ಹೋಗುವ ಈ ರಸ್ತೆಯಲ್ಲಿ ಹಳ್ಳ ದಿಣ್ಣೆಗಳು ಜೊತೆಗೆ ಅರಣ್ಯದ ಮಧ್ಯಭಾಗದಲ್ಲಿರುವ ಕೆರೆಕಟ್ಟೆಗಳ ಬಳಿ ಪ್ರಾಣಿ ಪಕ್ಷಿಗಳ ಸಂಖ್ಯೆ ಹೆಚ್ಚುತ್ತಿದೆ. ಅರಣ್ಯ ಇಲಾಖೆ ಸಹ ಸಫಾರಿ ಕೇಂದ್ರಕ್ಕೆ ಬರುವ ಪ್ರವಾಸಿಗರಿಗೆ ಮಾಹಿತಿ ನೀಡುವ ಮೂಲಕ ಪಟ್ಟಣ ಸೇರಿದಂತೆ ವಿವಿಧೆಡೆ ಮಲೆ ಮಾದೇಶ್ವರ ಬೆಟ್ಟಕ್ಕೆ ತೆರಳುವ ಮಾರ್ಗ ಮಧ್ಯದಲ್ಲಿಯೂ ಸಹ ನಾಮಫಲಕಗಳನ್ನು ಅಳವಡಿಸಿ ಸಫಾರಿ ಕೇಂದ್ರಕ್ಕೆ ಭೇಟಿ ನೀಡುವಂತೆ ಅದರಲ್ಲಿ ದೂರವಾಣಿ ಸಂಖ್ಯೆ ಸಹ ನಮೂದಿಸುವ ಮೂಲಕ ಪ್ರವಾಸಿಗರಿಗೆ ಉತ್ತಮ ಮಾಹಿತಿ ರವಾನಿಸಿದ್ದಾರೆ.

Share this article