ಸಾಗರ ಒಮ್ಮತದ ಅಭ್ಯರ್ಥಿ: ಮಾಜಿ ಸಚಿವ ರಾಜಶೇಖರ ಪಾಟೀಲ್‌

KannadaprabhaNewsNetwork |  
Published : Apr 17, 2024, 01:24 AM IST
ಚಿತ್ರ 16ಬಿಡಿಆರ್‌8ಹುಮನಾಬಾದ್‌ ಪಟ್ಟಣದ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ತಮ್ಮ ನೇತೃತ್ವದಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಭೆ ಹಾಗೂ ಬೀದರ್‌ ಕಾಂಗ್ರೆಸ್‌ ಅಭ್ಯರ್ಥಿ ಸಾಗರ ಖಂಡ್ರೆ ಪರ ಪ್ರಚಾರ ಸಭೆಯಲ್ಲಿ ಮಾಜಿ ಸಚಿವ ರಾಜಶೇಖರ ಪಾಟೀಲ್‌ ಮಾತನಾಡಿದರು. | Kannada Prabha

ಸಾರಾಂಶ

ಬೀದರ್‌ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸಾಗರ ಈಶ್ವರ ಖಂಡ್ರೆ ಅವರು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದರು.

ಹುಮನಾಬಾದ್‌ :

ಕಾಂಗ್ರೆಸ್‌ನ ಸಾಗರ ಖಂಡ್ರೆ ನಮ್ಮೆಲ್ಲರ ಒಮ್ಮತದ ಅಭ್ಯರ್ಥಿಯಾಗಿದ್ದು, ಪ್ರತಿ ಪಕ್ಷದವರ ದಾರಿ ತಪ್ಪಿಸುವ ಹೇಳಿಕೆಗಳಿಗೆ ಮರುಳಾಗಬಾರದು ಎಂದು ಮಾಜಿ ಸಚಿವ ರಾಜಶೇಖರ ಪಾಟೀಲ್‌ ತಿಳಿಸಿದರು.

ಅವರು ಪಟ್ಟಣದ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ತಮ್ಮ ನೇತೃತ್ವದಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಭೆ ಹಾಗೂ ಬೀದರ್‌ ಕಾಂಗ್ರೆಸ್‌ ಅಭ್ಯರ್ಥಿ ಸಾಗರ ಖಂಡ್ರೆ ಪರ ಪ್ರಚಾರ ಸಭೆಯಲ್ಲಿ ಮಾತನಾಡಿ, ಬೀದರ್‌ ಜಿಲ್ಲೆ ಎಲ್ಲ ಕಾಂಗ್ರೆಸ್‌ ಮುಖಂಡರನ್ನು ಕರೆಸಿ ಚರ್ಚಿಸಿಯೇ ಸಾಗರ ಖಂಡ್ರೆರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ ಎಂದರು.

ಕಳೆದ 2023ರಲ್ಲಿ ಆದ ಸಣ್ಣ ತಪ್ಪಿನಿಂದ ಇಂದು ಹುಮನಾಬಾದ್‌ ಜನತೆ ಪರಿತಪಿಸುತ್ತಿದ್ದಾರೆ. ಮತ್ತೆ ಹೀಗೆ ಪರಿತಪಿಸುವುದು ಬೇಡ. ಸಾಗರ್‌ ಅವರನ್ನು ಗೆಲ್ಲಿಸುವ ಜವಾಬ್ದಾರಿ ಹುಮನಾಬಾದ್‌ ಜನತೆ ಮೇಲಿದೆ ಎಂದರು.

ನಾವೆಲ್ಲರೂ ಒಗಟ್ಟಿನಿಂದ ಯುವ ನಾಯಕ ಸಾಗರ ಖಂಡ್ರೆ ಗೆಲುವಿಗೆ ಶಕ್ತಿ ಮೀರಿ ಶ್ರಮಿಸುತ್ತೇವೆ. ನೀವೆಲ್ಲರೂ ಕಾಂಗ್ರೆಸ್‌ ಪಕ್ಷವನ್ನು ಗೆಲ್ಲಿಸಲು ಶ್ರಮಿಸಬೇಕು, ನೀವು ತಪ್ಪದೆ ಮತ ಚಲಾಯಿಸುವುದಲ್ಲದೆ, ನಿಮ್ಮ ಕುಟುಂಬದ ಎಲ್ಲರೂ ಮತದಾನ ಮಾಡುವುದನ್ನು ಖಾತ್ರಿ ಪಡಿಸಿಕೊಳ್ಳಬೇಕು ಎಂದರು.

ಸಾಗರ ಖಂಡ್ರೆ ಮಾತನಾಡಿ, ಜಿಲ್ಲೆಯಾದ್ಯಂತ ನಾನು ಪ್ರಚಾರ ಮಾಡುತ್ತಿದ್ದು, ಯುವ ಅಭ್ಯರ್ಥಿಯಾದ ನನಗೆ ಮತದಾರರು ತುಂಬು ಹೃದಯದ ಬೆಂಬಲ ನೀಡುತ್ತಿದ್ದಾರೆ. ಜನರು ತೋರುತ್ತಿರುವ ಪ್ರೀತಿ, ವಾತ್ಸಲ್ಯ ವಿಶ್ವಾಸಕ್ಕೆ ತಾವು ಆಭಾರಿ ಎಂದರು.

ಕಾಂಗ್ರೆಸ್‌ ಪಕ್ಷ ನೀಡಿರುವ ಗ್ಯಾರಂಟಿಗಳ ಬಗ್ಗೆ ವಿವರ ನೀಡಿದ ಅವರು, ಲೋಕಸಭೆ ಚುನಾವಣಾ ಪ್ರಣಾಳಿಕೆಯಲ್ಲೂ ಕಾಂಗ್ರೆಸ್‌ ಪಕ್ಷ ಯುವಜನರ, ರೈತರ ಮತ್ತು ಮಹಿಳೆಯರ ಸಬಲೀಕರಣಕ್ಕಾಗಿ ಉದ್ಯೋಗ, ಸಾಲಮನ್ನಾ, ಎಂಎಸ್‌ಪಿ ನ್ಯಾಯ ಮತ್ತು ಮಹಾಲಕ್ಷ್ಮೀ ಯೋಜನೆಯಡಿ 1 ಲಕ್ಷ ರು. ನೀಡುವುದೂ ಸೇರಿ ಹಲವು ಯೋಜನೆ ರೂಪಿಸಿದೆ ಎಂದು ವಿವರ ನೀಡಿದರು.

ಜಿಲ್ಲೆಯ ನಿರ್ಲಕ್ಷ್ಯ, ದರ್ಪದ ವಿರುದ್ಧ ಮತ ಚಲಾಯಿಸಿ ನನ್ನನ್ನು ಗೆಲ್ಲಿಸಿ:

ಹಾಲಿ ಸಂಸತ್‌ ಸದಸ್ಯರು ದೆಹಲಿ ಸಂಸತ್‌ ಭವನದಲ್ಲೂ ಕಾಣಿಸುವುದಿಲ್ಲ, ಜಿಲ್ಲೆಯಲ್ಲೂ ಕಾಣಿಸುವುದಿಲ್ಲ. ಚುನಾವಣೆ ಸಂದರ್ಭದಲ್ಲಿ ಬಂದು ಹೋಗುತ್ತಾರೆ. ಜಿಲ್ಲೆಗೆ ಅವರ ಕೊಡುಗೆ ಶೂನ್ಯ ಎಂದು ಜನ ಮಾತನಾಡುತ್ತಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಈ ಜಿಲ್ಲೆಯ ನಿರ್ಲಕ್ಷ್ಯ, ದರ್ಪದ ವಿರುದ್ಧ ಮತ ಚಲಾಯಿಸಿ, ಅತ್ಯಂತ ಕಿರಿಯ ವಯಸ್ಸಿನ ಅಭ್ಯರ್ಥಿಯಾದ ನನ್ನನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಿ ಎಂದು ಮನವಿ ಮಾಡಿದರು.

ಸಮಾರಂಭದಲ್ಲಿ ವಿಧಾನ ಪರಿಷತ್‌ ಸದಸ್ಯರಾದ ಅರವಿಂದಕುಮಾರ ಅರಳಿ, ಚಂದ್ರಶೇಖರ ಪಾಟೀಲ್‌, ಭೀಮರಾವ್‌ ಪಾಟೀಲ್‌, ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಅಭಿಷೇಕ ಪಾಟೀಲ್‌, ಮಾಜಿ ಶಾಸಕರಾದ ಅಶೋಕ ಖೇಣಿ, ವಿಜಯ ಸಿಂಗ್‌, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಧನರಾಜ ತಾಳಂಪಳ್ಳಿ, ಮಾಲಾ ನಾರಾಯಣರಾವ್‌ ಮತ್ತಿತರರು ಇದ್ದರು.

PREV

Recommended Stories

ದಸರಾ ಉದ್ಘಾಟನೆಗೆ ಬಾನು : ಬಿಜೆಪಿ vs ಕಾಂಗ್ರೆಸ್ ಜಟಾಪಟಿ
ಧರ್ಮಸ್ಥಳ ಎಸ್‌ಐಟಿ ಅಧಿಕಾರಿ ಅನುಚೇತ್‌ ಅಮೆರಿಕ ಪ್ರವಾಸಕ್ಕೆ