ಮಂಗಳೂರು: ಸಹಕಾರ ಮನೋಭಾವ ಎಲ್ಲರಲ್ಲೂ ಇರಬೇಕು. ಸಹಕಾರಿ ಸಂಸ್ಥೆಯ ಸಿಬ್ಬಂದಿಗಳು ಮತ್ತು ಆಡಳಿತ ಮಂಡಳಿ ಸಮಾಜದ ಜೊತೆ ಸಹಕಾರಿ ಮನೋಭಾವದಿಂದ ಕೆಲಸ ಮಾಡಬೇಕು. ಕೇಂದ್ರದಲ್ಲಿ ಸಹಕಾರ ಸಚಿವಾಲಯ ಆರಂಭವಾಗಿ ಸಹಕಾರ ಸಚಿವರಾದ ನಂತರ ಸಹಕಾರ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಸಹಕಾರ ಕ್ಷೇತ್ರ ಇನ್ನಷ್ಟು ಬಲಶಾಲಿಯಾಗಿ ಹೊರಹೊಮ್ಮಲು ಸಹಕಾರ ನೀತಿ ಕಾರಣವಾಗಲಿದೆ. ಜನಸಾಮಾನ್ಯರು ಸಹಕಾರಿ ಸಂಘಗಳಿಗೆ ಸಾಲ ಕೇಳಲು ಬರುವಾಗ ನಗು ಮುಖದ ಸೇವೆ ನೀಡಿ ಸಹಕಾರದ ಬೆಳವಣಿಗೆಗೆ ಕಾರಣವಾಗಬೇಕು. ಕ್ರೀಡಾಕೂಟದಲ್ಲಿ ಪರಸ್ಪರ ಕ್ರೀಡಾ ಮನೋಭಾವದಿಂದ ಪಾಲ್ಗೊಂಡು ಕ್ರೀಡಾಸ್ಫೂರ್ತಿ ಮೆರೆಯಬೇಕು ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.ಸಹಕಾರ ಭಾರತಿ ಮಂಗಳೂರು ಮಹಾನಗರ ಮತ್ತು ದಕ್ಷಿಣ ಕನ್ನಡ ಜಿಲ್ಲೆ (ಗ್ರಾಮಾಂತರ) ಸಹಭಾಗಿತ್ವದಲ್ಲಿ ಸಹಕಾರಿ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯರು ಮತ್ತು ಸಿಬ್ಬಂದಿಗಾಗಿ ಅಡ್ಯಾರ್‌ನ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜು ಕ್ರೀಡಾಂಗಣದಲ್ಲಿ ಭಾನುವಾರ ನಡೆದ ದ.ಕ. ಜಿಲ್ಲಾ ಮಟ್ಟದ ‘ಸಹಕಾರಿ ಕ್ರೀಡೋತ್ಸವ- ೨೦೨೬’ ವನ್ನು ಧ್ವಜಾರೋಹಣ ನೆರವೇರಿಸಿ ಉದ್ಘಾಟಿಸಿ ಮಾತನಾಡಿದರು.
ದ.ಕ. ಜಿಲ್ಲೆ ಅಧ್ಯಕ್ಷ ಬಿ. ಸುಧಾಕರ ರೈ ಬೋಳಂತೂರು ಸ್ವಾಗತಿಸಿದರು. ಮಹಿಳಾ ಪ್ರಮುಖ್ ಸುಭದ್ರಾ ರಾವ್ ವಂದಿಸಿದರು. ಸದಸ್ಯರಾದ ಪ್ರಶಾಂತ್ ಪೈ, ಧನ್ಯ ಕುಲಾಲ್ ನಿರೂಪಿಸಿದರು.