ಕನ್ನಡಪ್ರಭ ವಾರ್ತೆ ಹಾಸನ
ಕನ್ನಡ ಚಲನಚಿತ್ರ ಕ್ಷೇತ್ರದ ಸಾಹಸಸಿಂಹ, ಜನಪ್ರಿಯ ನಟ ವಿಷ್ಣುವರ್ಧನ್ ಅವರ 75ನೇ ಹುಟ್ಟುಹಬ್ಬವನ್ನು ವಿಷ್ಣು ಸೇನೆ ವತಿಯಿಂದ ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಪೌರಕಾರ್ಮಿಕರನ್ನು ಸನ್ಮಾನಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.ಇದೇ ವೇಳೆ ಜಿಲ್ಲಾ ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಈ. ಕೃಷ್ಣೇಗೌಡ ಮಾತನಾಡಿ, ಇಡೀ ದೇಶವೇ ಗುರುತಿಸುವ ಯಾರಾದರೂ ನಟರು ಇದ್ದರೇ ಮೊದಲು ಡಾ. ರಾಜಕುಮಾರ್, ಎರಡನೆಯದಾಗಿ ಡಾ. ವಿಷ್ಣುವರ್ಧನ್, ಮೂರನೆಯವರು ಎಂದರೇ ರೆಬಲ್ ಸ್ಟಾರ್ ಅಂಬರೀಶ್. ಎಲ್ಲಾ ರೀತಿಯ ಪಾತ್ರಗಳಿಗೆ ಈ ನಟರು ಜೀವ ತುಂಬಿದ್ದಾರೆ. ಇಡೀ ಸಮಾಜವನ್ನು ತಿದ್ದುವ ಕೆಲಸ ಮಾಡಿದ್ದಾರೆ. ಘನ ಸರ್ಕಾರವು ಇಂತಹ ನಟರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುತ್ತಿರುವುದು ಸಂತೋಷದ ವಿಚಾರ ಎಂದರು. ವಿಷ್ಣುವರ್ಧನ್ ಸಿನಿಮಾದ ಒಂದೊಂದು ಹಾಡನ್ನು ಸಂಜೆ ವೇಳೆ ಕೇಳಿದರೇ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಮೇರು ನಟರ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ನಮಗೆ ಸಂತೋಷ ತಂದಿದೆ ಎಂದು ಹೇಳಿದರು. ವಿಷ್ಣು ಅವರು ೨೦೦ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದು, ಕನ್ನಡ ಸಿನಿರಂಗಕ್ಕೆ ನೀಡಿದ ಕೊಡುಗೆ ಅಪಾರ. ಡಾ. ರಾಜಕುಮಾರ್ ಅವರ ನಂತರ ಹೆಚ್ಚು ಸಿನಿಮಾಗಳಲ್ಲಿ ನಾಯಕ ನಟರಾಗಿ ಗುರುತಿಸಿಕೊಂಡವರು ವಿಷ್ಣುವರ್ಧನ್. ಅವರ ಕಲೆ ಇನ್ನೂ ಜೀವಂತವಾಗಿದೆ, ಅವರು ಎಲ್ಲಿಯೂ ಹೋಗಿಲ್ಲ, ಇಂದಿಗೂ ನಮ್ಮಲ್ಲೇ ಇದ್ದಾರೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮಕ್ಕೂ ಮೊದಲು ನಗರದ ಸಾಲಗಾಮೆ ರಸ್ತೆ, ಸರಸ್ವತಿ ದೇವಾಲಯ ವೃತ್ತದ ಬಳಿಯಲ್ಲಿರುವ ವಿಷ್ಣುವರ್ಧನ್ ಪ್ರತಿಮೆಗೆ ವಿಷ್ಣು ಸೇನಾ ಸಮಿತಿ ಹಾಗೂ ಅನೇಕ ಸಂಘಟನೆಗಳಿಂದ ಪುಷ್ಪಮಾಲೆ ಅರ್ಪಣೆ ಮಾಡಿ, ಕೇಕ್ ಕತ್ತರಿಸಿ ಸಂಭ್ರಮಿಸಿದರು.ಇದೇ ವೇಳೆ ವಿಷ್ಣು ಸೇನೆ ಜಿಲ್ಲಾಧ್ಯಕ್ಷ ಮಹಂತೇಶ್, ಮಾಜಿ ಶಾಸಕ ಬಿ.ವಿ. ಕರೀಗೌಡ, ಕಾಂಗ್ರೆಸ್ ಮುಖಂಡ ಜೆಸಿಬಿ ಚಂದ್ರಶೇಖರ್, ಕಲಾವಿದರ ಸಂಘದ ಅಧ್ಯಕ್ಷ ಕುಮಾರ್, ಜೈಭೀಮ್ ಬ್ರಿಗೇಡ್ ಜಿಲ್ಲಾಧ್ಯಕ್ಷ ರಾಜೇಶ್, ಸಮಾಜ ಸೇವಕರಾದ ವಿಜಯಕುಮಾರ್, ತಮ್ಲಾಪುರ ಗಣೇಶ್, ಗಾಯಕಿ ಅಂಜಲಿ, ನೀತು, ಅನ್ನಪೂರ್ಣ, ವೆಂಕಟೇಶ್, ಕಲಾವಿದ ರಘು ವೆಂಕಟೇಶ್, ಪ್ರಕಾಶ್, ಮಂಜುಳ, ಸಾವಿತ್ರಮ್ಮ, ಮಮತಾ ಮತ್ತಿತರರು ಹಾಜರಿದ್ದರು.