ಸಾಹಿತಿ, ಪ್ರಕಾಶಕ ವಿಷ್ಣು ನಾಯ್ಕ ಇನ್ನಿಲ್ಲ

KannadaprabhaNewsNetwork |  
Published : Feb 19, 2024, 01:31 AM ISTUpdated : Feb 19, 2024, 12:50 PM IST
Vishnu

ಸಾರಾಂಶ

ವಿಶಾಲ ಕರ್ನಾಟಕ, ಕರಾವಳಿ ಮುಂಜಾವು, ಕರಾವಳಿ ಸುಪ್ರಭಾತ ಮುನ್ನಡೆ, ತೇಜಸ್ವಿ ಪ್ರಪಂಚ, ಮುಂತಾದ ಪತ್ರಿಕೆಗಳ ಅಂಕಣಕಾರರಾಗಿ ಮುಂಗಾರು ದೈನಿಕದ ವರದಿಗಾರರಾಗಿ ಮಾಧ್ಯಮ ಕ್ಷೇತ್ರಕ್ಕೆ ಅಪಾರ ಕೊಡುಗೆ ಸಲ್ಲಿಸಿದ ವಿಷ್ಣು ನಾಯ್ಕ ಸಾಹಿತ್ಯ ಮೇರು ಪರ್ವತವಾಗಿ ಗುರುತಿಸಿಕೊಂಡಿದ್ದರು

ಅಂಕೋಲಾ: ನಾಡಿನ ಖ್ಯಾತ ಸಾಹಿತಿ, ಪತ್ರಕರ್ತ ವಿಷ್ಣು ನಾಯ್ಕ (80) ಅವರು ಶನಿವಾರ ರಾತ್ರಿ ವಿಧಿವಶರಾಗಿದ್ದಾರೆ.ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಚಿಕಿತ್ಸೆಗಾಗಿ ಕಾರವಾರದ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಿಲ್ಲ. 

ಅವರಿಗೆ ಇಬ್ಬರು ಪುತ್ರಿಯರು, ಅಳಿಯಂದಿರು ಇದ್ದಾರೆ. ತಮ್ಮ ಬರವಣಿಗೆಯ ಮೂಲಕ ಅಸಂಖ್ಯಾತ ಅಭಿಮಾನಿಗಳನ್ನು ವಿಷ್ಣು ನಾಯ್ಕ ಹೊಂದಿದ್ದರು.

ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಅಂಬಾರಕೊಡ್ಲದಲ್ಲಿ ೧೯೪೪ ಜುಲೈ ೧ರಂದು ಜನನ. ತಾಯಿ ಬುದವಂತಿ, ತಂದೆ ನಾಗಪ್ಪ. ಅಂಬಾರಕೊಡ್ಲ ಹಾಗೂ ಅಂಕೋಲಾದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ವಿಷ್ಣು ನಾಯ್ಕ ಮೈಸೂರು ವಿಶ್ವವಿದ್ಯಾಲಯದಿಂದ ಜಾನಪದ ಸಾಹಿತ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಸಾಹಿತಿ, ಸಂಪಾದಕ, ಪ್ರಕಾಶಕ, ಸಂಘಟಕ ಹೀಗೆ ಅನೇಕ ಕ್ಷೇತ್ರದಲ್ಲಿ ಕೃಷಿ ಮಾಡಿದ್ದಾರೆ.

ರಾಘವೇಂದ್ರ ಪ್ರಕಾಶನದ ಮಾಲೀಕರು ಆಗಿದ್ದ ಅವರು ಹಲವು ಕೃತಿಗಳನ್ನು ರಚಿಸಿದ್ದಾರೆ. ಸುಮನ, ಆ ರೀತಿ ಈ ರೀತಿ, ನನ್ನ ಅಂಬಾರಕೊಡಲು, ವಾಸ್ತವ, ಹೊಸಭತ್ತ, ಮುಚ್ಚಿದ ಬಾಗಿಲು ಮತ್ತು ಮರಿಗುಬ್ಬಿ, ನೋವು ಪ್ರೀತಿಯ ಪ್ರಶ್ನೆ (ಕವನ ಸಂಗ್ರಹಗಳು), ಕಣ್ಣೀರ ಕತೆಗಳು (ಸಂಕಲನ), ಅಯ್ನೋರ ಪೂಜೆ; ಒಂದು ಹನಿ ಮತ್ತು ಇತರ ಬೀದಿನಾಟಕಗಳು; ಯುದ್ಧ (ನಾಟಕಗಳು), ಡಾ. ಗೌರೀಶ ಕಾಯ್ಕಿಣಿ ಸಮಗ್ರ ಸಂಪುಟಗಳು (ಸಂಪಾದನೆ), ದುಡಿಯುವ ಕೈಗಳ ಹೋರಾಟದ ಕತೆ (ಮಾನವಿಕ) ಮುಂತಾದವುಗಳು ವಿಷ್ಣು ನಾಯ್ಕ ಅವರ ಕಲ್ಪನೆಯಲ್ಲಿ ಮೂಡಿ ಬಂದ ಸಾಹಿತ್ಯದ ಗರಿಗಳು.

ವಿಶಾಲ ಕರ್ನಾಟಕ, ‘ಕರಾವಳಿ ಮುಂಜಾವು’, ‘ಕರಾವಳಿ ಸುಪ್ರಭಾತ’, ‘ಮುನ್ನಡೆ’, ‘ತೇಜಸ್ವಿ ಪ್ರಪಂಚ’, ಮುಂತಾದ ಪತ್ರಿಕೆಗಳ ಅಂಕಣಕಾರರಾಗಿ ‘ಮುಂಗಾರು’ ದೈನಿಕದ ವರದಿಗಾರರಾಗಿ ಮಾಧ್ಯಮ ಕ್ಷೇತ್ರಕ್ಕೆ ಅಪಾರ ಕೊಡುಗೆ ಸಲ್ಲಿಸಿದ ವಿಷ್ಣು ನಾಯ್ಕ ಸಾಹಿತ್ಯ ಮೇರು ಪರ್ವತವಾಗಿ ಗುರುತಿಸಿಕೊಂಡಿದ್ದರು.

ಇವರ ಸಾಹಿತ್ಯ ಕೊಡುಗೆಗಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯ ಆದರ್ಶ ಶಿಕ್ಷಕ ಪ್ರಶಸ್ತಿ, ಅತ್ಯುತ್ತಮ ಗ್ರಂಥ ಪ್ರಕಾಶಕ ಪ್ರಶಸ್ತಿ, ಎಸ್.ವಿ. ಪರಮೇಶ್ವರ ಭಟ್ಟರ ಕನ್ನಡ ಪರಿಚಾರಕ ಪ್ರಶಸ್ತಿ, ಬೇಂದ್ರೆ ಕಾವ್ಯ ಪ್ರಶಸ್ತಿ, ಕಾಯ್ಕಿಣಿ ಪ್ರತಿಷ್ಠಾನ ಪ್ರಶಸ್ತಿ, ಚೌಡಯ್ಯ ಸಾಹಿತ್ಯ ಪ್ರಶಸ್ತಿಗಳು ಅವರನ್ನರಸಿವೆ. ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ, ರಾಜ್ಯ ಹಲವಾರು ಸಾಹಿತ್ಯ ಗೋಷ್ಠಿಗಳ ಅಧ್ಯಕ್ಷತೆಯ ಹಾಗೂ ಮತ್ತಿತರ ಗೌರವ ಪುರಸ್ಕಾರಗಳು ಅವರಿಗೆ ಸಂದಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಿಲ್ಲಿಯಲ್ಲಿ ಡಿಕೆಶಿ ರಾಜ್ಯ ನೀರಾವರಿ ಸಭೆ
ಗ್ಯಾಸ್ ಇಲ್ಲದೇ ಬೆಳಗಾವಿಯ 60 + ಕೈಗಾರಿಕೆ ಬಂದ್‌ ಹಂತಕ್ಕೆ