ಯಾರಿಗೂ ಅನಾನುಕೂಲ ಆಗದಂತೆ ಸಾಹಿತ್ಯ ಸಮ್ಮೇಳನ : ಕಸಾಪ ರಾಜ್ಯಾಧ್ಯಕ್ಷ ಡಾ. ಮಹೇಶ ಜೋಶಿ

KannadaprabhaNewsNetwork |  
Published : Dec 06, 2024, 09:01 AM ISTUpdated : Dec 06, 2024, 11:22 AM IST
Mahesh Joshi

ಸಾರಾಂಶ

ಈ ಬಾರಿ ಮಹಿಳೆಯರಿಗೆ ಹಾಗೂ ದೃಷ್ಟಿ ವಿಕಲಚೇತನರಿಗೆ ಪ್ರತ್ಯೇಕ ಕವಿಗೋಷ್ಠಿ ಆಯೋಜಿಸಿದೆ. ಈ ಮೂಲಕ ಅವರಲ್ಲಿಯ ಪ್ರತಿಭೆ ಅನಾವರಣ ಮಾಡಲು ಅವಕಾಶ ಕಲ್ಪಿಸಲಾಗುತ್ತಿದೆ.

ಧಾರವಾಡ:  ಮಂಡ್ಯ ಜಿಲ್ಲೆಯಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬ ಕನ್ನಡದ ಮನಸ್ಸುಗಳಿಗೆ ಅನಾನುಕೂಲ ಆಗದಂತೆ ಪರಿಷತ್ತು ಎಚ್ಚರಿಕೆ ವಹಿಸಲಿದೆ ಎಂದು ಕಸಾಪ ರಾಜ್ಯಾಧ್ಯಕ್ಷ ಡಾ. ಮಹೇಶ ಜೋಶಿ ಹೇಳಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ನೋಂದಣಿ ಕಾರ್ಯ ನಡೆಯುತ್ತಿದ್ದು, ಇನ್ನು 14 ದಿನ ಮಾತ್ರ ಉಳಿದಿವೆ. ಈಗಾಗಲೇ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪಾಲ್ಗೊಳ್ಳುವ ಎಲ್ಲ ಪ್ರತಿನಿಧಿಗಳಿಗೆ, ಕನ್ನಡ ಮನಸ್ಸುಗಳಿಗೆ ಆನ್‌ಲೈನ್ ಮೂಲಕ ಸಮ್ಮೇಳನದ ಸಕಲ ಮಾಹಿತಿ ಒದಗಿಸಲಾಗುತ್ತಿದೆ. 18 ದೇಶಗಳಿಂದ 164 ಜನ ಅನಿವಾಸಿ ಭಾರತೀಯರು ಸಹ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಸಮ್ಮೇಳನವು ನಾಡೋಜ ಡಾ. ಗೊ.ರು. ಚೆನ್ನಬಸಪ್ಪ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಮೂರು ವೇದಿಕೆ ಸಿದ್ಧಪಡಿಸಲಾಗುತ್ತಿದೆ. ಎಲ್ಲ ವೇದಿಕೆಗಳಿಗೆ ಸಮಾನ ಪ್ರಾಧಾನ್ಯತೆ ನೀಡಲಾಗುತ್ತದೆ. ಅಲ್ಲದೇ ಈ ಬಾರಿ ಮಹಿಳೆಯರಿಗೆ ಹಾಗೂ ದೃಷ್ಟಿ ವಿಕಲಚೇತನರಿಗೆ ಪ್ರತ್ಯೇಕ ಕವಿಗೋಷ್ಠಿ ಆಯೋಜಿಸಿದೆ. ಈ ಮೂಲಕ ಅವರಲ್ಲಿಯ ಪ್ರತಿಭೆ ಅನಾವರಣ ಮಾಡಲು ಅವಕಾಶ ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು.

ಈ ಬಾರಿಯ ಸಮ್ಮೇಳನದಲ್ಲಿ ಪುತಿನ ಅವರ ಪುತ್ರಿ, ರೆ. ಕಿಟೆಲ್ ಅವರ ಕುಟುಂಬ, ವಿಶ್ವೇಶ್ವರಯ್ಯ ಅವರ ಸಹೋದರರ ಪುತ್ರಿ, ನಂಜುಂಡಯ್ಯನವರ ಮೊಮ್ಮಗಳು ಪಾಲ್ಗೊಳ್ಳುತ್ತಿರುವುದು ವಿಶೇಷ. ಜತೆಗೆ ಈ ಬಾರಿ ಐದು ಸಾವಿರ ಪ್ರತಿನಿಧಿಗಳಿಗೆ ಅವಕಾಶ ಕಲ್ಪಿಸುವ ಗುರಿ ಇರಿಸಲಾಗಿತ್ತು. ಈಗಾಗಲೇ 5,400 ಜನರು ನೋಂದಣಿ ಮಾಡಿಸಿದ್ದು, ಈ ಬಾರಿ ಒಟ್ಟು ಆರು ಸಾವಿರ ಪ್ರತಿನಿಧಿಗಳಿಗೆ ಅವಕಾಶ ಕಲ್ಪಿಸಲು ಚಿಂತಿಸಲಾಗಿದೆ. ತ್ರಿವೇಣಿ ಕಾದಂಬರಿಯನ್ನು ಮೈಸೂರಿನ ಸಾಹಿತಿ ಜಯಾಮೂರ್ತಿ ಇಟಾಲಿಯನ್ ಭಾಷೆಗೆ ಅನುವಾದ ಮಾಡಿದ್ದು, ಅದೇ ರೀತಿ ಧಾರವಾಡ ಮೂಲದ ವಸುಂಧರಾ ಅವರು ವಿವಿಧ ಸಾಹಿತ್ಯ ಕೃತಿಗಳನ್ನು ಫ್ರೆಂಚ್ ಭಾಷೆಗೆ ಅನುವಾದಿಸಿದ್ದಾರೆ. ಇವುಗಳನ್ನು ಸಮ್ಮೇಳನದಲ್ಲಿ ಲೋಕಾರ್ಪಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಮನೋಹರ ಗ್ರಂಥಮಾಲೆಯ ಡಾ. ರಮಾಕಾಂತ ಜೋಶಿ ಇದ್ದರು.

PREV

Recommended Stories

ಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಗೃಹಲಕ್ಷ್ಮೀ ಯರಿಗೆ ಇಲ್ಲಿದೆ ಸಿಹಿ ಸುದ್ದಿ
''ಪ್ರಜ್ವಲ್‌ ಬಚಾವ್‌ಗೆ ಆತನ ಪೋಷಕರು ತಂತ್ರ ಮಾಡಿದ್ರು ''